ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧ ನ್ಯಾಯಾಲಯದ ಮಾಜಿ ಸಿಬ್ಬಂದಿಯೊಬ್ಬರು ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹುರುಳಿಲ್ಲ ಎಂದು ಆಂತರಿಕ ವಿಚಾರಣಾ ಸಮಿತಿಯು ಹೇಳಿದೆ.
ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಮಹಿಳಾ ನ್ಯಾಯಮೂರ್ತಿಗಳಾದ ಇಂದೂ ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ಪೀಠವು ಸೋಮವಾರ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿಗೆ(ಬೊಬ್ಡೆ ನಂತರದ) ವರದಿಯನ್ನು ಸಲ್ಲಿಸಿದೆ.
‘ಆಂತರಿಕ ಸಮಿತಿಯು ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿದೆ. ಗೊಗೊಯಿ ವಿರುದ್ಧ ಮಹಿಳೆಯು ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಎಂಬ ಅಭಿಪ್ರಾಯವನ್ನು ವರದಿಯಲ್ಲಿ ವ್ಯಕ್ತಪಡಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಇಂದಿರಾ ಜೈಸಿಂಗ್ ವಿರುದ್ಧ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ ನಿಯಮಾವಳಿಗೆ ಅನುಗುಣವಾಗಿ ಆಂತರಿಕ ಸಮಿತಿಯನ್ನು ರಚಿಸಲಾಗಿದೆ. ಅದರ ಪ್ರಕಾರ, ಕೋರ್ಟ್‌ಗೆ ಸಲ್ಲಿಸುವ ವರದಿಯನ್ನು ಬಹಿರಂಗಪಡಿಸಲು ಅವಕಾಶ ಇರುವುದಿಲ್ಲ’ ಎಂದೂ ತಿಳಿಸಲಾಗಿದೆ.
ಸಮಿತಿ ಮುಂದೆ ಹಾಜರಾಗಲು ನಿರಾಕರಣೆ: ಪ್ರಕರಣದ ತನಿಖೆಗಾಗಿ ಆಂತರಿಕ ವಿಚಾರಣಾ ಸಮಿತಿಯ ಮುಂದೆ ಮೂರು ಬಾರಿ ಹಾಜರಾಗಿದ್ದ ಮಹಿಳೆಯು ಈಚೆಗೆ ಸಮಿತಿಯ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ‘ನನ್ನ ಹೇಳಿಕೆಗಳನ್ನು ವಿಡಿಯೊ ಅಥವಾ ಆಡಿಯೊ ರೆಕಾರ್ಡಿಂಗ್ ಮಾಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದೆ. ಆದರೆ ಹಾಗೆ ಮಾಡುತ್ತಿಲ್ಲ. ವಕೀಲರ ಸಹಾಯ ಪಡೆಯಲು ಸಹ ನನಗೆ ಅವಕಾಶ ನೀಡುತ್ತಿಲ್ಲ. ಸಮಿತಿಯು ವಿಶಾಖಾ ಮಾರ್ಗಸೂಚಿಯನ್ನೂ ಅನುಸರಿಸುತ್ತಿಲ್ಲ. ಈ ಸಮಿತಿಯಿಂದ ನ್ಯಾಯ ಸಿಗುವುದೆಂಬ ನಂಬಿಕೆ ಇಲ್ಲ.ಆದ್ದರಿಂದ ಇನ್ನುಮುಂದೆ ಸಮಿತಿಯ ಮುಂದೆ ಹಾಜರಾಗುವುದಿಲ್ಲ’ ಎಂದಿದ್ದರು.
‘ಮಹಿಳೆಯ ಪರವಾಗಿ ವಾದಿಸಲು ವಕೀಲರನ್ನು ನೇಮಿಸಲು ಅವಕಾಶ ನೀಡಬೇಕು ಅಥವಾ ಅವರ ಪರವಾಗಿ ಮಾತನಾಡಲು ನ್ಯಾಯಾಲಯವೇ ಯಾರನ್ನಾದರೂ ನಿಯೋಜಿಸಬೇಕು’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಆಂತರಿಕ ಸಮಿತಿಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಆದರೆ ಸಮಿತಿಯು ಅದನ್ನುಪರಿಗಣಿಸಲಿಲ್ಲ.
ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ಮೇ 1ರಂದು ಸಮಿತಿಯ ಮುಂದೆ ಹಾಜರಾಗಿ ತಮ್ಮ ವಿರುದ್ಧ ಮಹಿಳೆ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದರು.
‘ಸಂದೇಹ ನಿಜವಾಗಿದೆ’
‘ಇಂದು ನನ್ನ ಸಂದೇಹ ನಿಜವಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯವು ನನಗೆ ನ್ಯಾಯ ನೀಡುತ್ತದೆ ಎಂಬ ನನ್ನ ನಂಬಿಕೆಯು ನುಚ್ಚುನೂರಾಗಿದೆ’ ಎಂದು ನ್ಯಾಯಮೂರ್ತಿಯ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ 35 ವರ್ಷ ವಯಸ್ಸಿನ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ.
ಆಂತರಿಕ ಸಮಿತಿಯ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, ‘ನನಗೆ ಅತ್ಯಂತ ನಿರಾಸೆ ಹಾಗೂ ಬೇಸರವಾಗಿದೆ. ಮಹಿಳೆಯಾಗಿರುವ ಕಾರಣಕ್ಕೆ ನನಗೆ ಅನ್ಯಾಯ ಮಾಡಲಾಗಿದೆ’ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.