ಮಹಾರಾಷ್ಟ್ರದ ಪಾನ ಪ್ರಿಯರ ಮನೆಗೇ ಬರಲಿದೆ ಮದ್ಯ!

7
ಮನೆಮನೆಗೆ ಮದ್ಯ ವಿತರಿಸುವ ಯೋಜನೆ ಜಾರಿಗೆ ಸರ್ಕಾರದ ಚಿಂತನೆ

ಮಹಾರಾಷ್ಟ್ರದ ಪಾನ ಪ್ರಿಯರ ಮನೆಗೇ ಬರಲಿದೆ ಮದ್ಯ!

Published:
Updated:

ಮುಂಬೈ: ಮಹಾರಾಷ್ಟ್ರದ ಪಾನ ಪ್ರಿಯರು ಇನ್ನು ಕೆಲವು ದಿನ ಕಳೆದರೆ ಮದ್ಯ ಖರೀದಿಸಲು ಅಂಗಡಿಗೆ ತೆರಳಬೇಕೆಂದೇನೂ ಇಲ್ಲ. ಯಾಕೆಂದರೆ, ಸರ್ಕಾರವೇ ಮನೆ ಬಾಗಿಲಿಗೆ ತಂದು ಕೊಡಲಿದೆ!

ಹೌದು, ಮನೆಗೇ ಮದ್ಯ ವಿತರಿಸುವ ಯೋಜನೆ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಅಲ್ಲಿನ ಅಬಕಾರಿ ಸಚಿವ ಚಂದ್ರಶೇಖರ್ ಭವಾನ್ಕುಲೆ ಮಾಹಿತಿ ನೀಡಿರುವುದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ರಾಜ್ಯದ ಮದ್ಯ ಉತ್ಪಾದನಾ ವಲಯದಲ್ಲೇ ಇದೊಂದು ಮಹತ್ವದ ಹೆಜ್ಜೆಯಾಗಿರಲಿದೆ. ಇಂತಹ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿಯೂ ಮಹಾರಾಷ್ಟ್ರ ಗುರುತಿಸಿಕೊಳ್ಳಲಿದೆ ಎಂಬ ಸಚಿವರ ಹೇಳಿಕೆಯನ್ನೂ ವರದಿ ಉಲ್ಲೇಖಿಸಿದೆ.

‘ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅನೇಕ ಅಪಘಾತಗಳಾಗುತ್ತಿದ್ದು, ಅಮೂಲ್ಯ ಜೀವಗಳು ನಾಶವಾಗುತ್ತಿವೆ. ಇದನ್ನು ತಡೆಯುವುದೇ ಯೋಜನೆಯ ಪ್ರಮುಖ ಉದ್ದೇಶ. ಜನರು ದಿನಸಿ ಮತ್ತು ತರಕಾರಿಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಇ–ಕಾಮರ್ಸ್‌ ಜಾಲತಾಣಗಳ ಮೂಲಕ ಮನೆಗೇ ತರಿಸಿಕೊಳ್ಳುವಂತೆ ಮದ್ಯವನ್ನೂ ಪಡೆಯಲು ವ್ಯವಸ್ಥೆ ಮಾಡಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಮದ್ಯ ಖರೀದಿಸಲು ವ್ಯಕ್ತಿಗೆ ನಿರ್ದಿಷ್ಟ ವಯಸ್ಸು ಆಗಿರಬೇಕು. ಗುರುತಿಗಾಗಿ ಗ್ರಾಹಕನ ಆಧಾರ್ ಸಂಖ್ಯೆ ಸೇರಿದಂತೆ ಇತರ ಗುರುತಿನ ವಿವರಗಳನ್ನು ವಿತರಕರು ಪಡೆಯಲಿದ್ದಾರೆ. ಮದ್ಯದ ಬಾಟಲ್‌ ಮುಚ್ಚಳದ ಮೇಲೆ ಜಿಯೋಟ್ಯಾಗ್ ಅಳವಡಿಸಲಾಗುವುದು. ಇದು ಉತ್ಪಾದಕನಿಂದ ಗ್ರಾಹಕನ ವರೆಗೆ ಬಾಟಲ್‌ ಅನ್ನು ಟ್ರ್ಯಾಕ್‌ ಮಾಡಲು ನೆರವಾಗಲಿದೆ. ಜತೆಗೆ, ನಕಲಿ ಮದ್ಯ ಹಾವಳಿ ಮತ್ತು ಕಳ್ಳಸಾಗಣೆ ತಡೆಗೂ ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 2

  Sad
 • 0

  Frustrated
 • 8

  Angry

Comments:

0 comments

Write the first review for this !