ಭಾನುವಾರ, ಅಕ್ಟೋಬರ್ 20, 2019
25 °C

ಗಾಂಧಿ ಹತ್ಯೆಯ ಆ ದಿನ: ಮಾಜಿ ಪತ್ರಕರ್ತನ ನೆನಪು

Published:
Updated:

ಮುಂಬೈ: ಇಡೀ ದೇಶ ಮಹಾತ್ಮ ಗಾಂಧಿಯವರ 150ನೇ ಹುಟ್ಟುಹಬ್ಬವನ್ನು ಆಚರಿಸಿದೆ. ಸುದ್ದಿ ಸಂಸ್ಥೆ ಪಿಟಿಐಯಲ್ಲಿ ಪತ್ರಕರ್ತರಾಗಿದ್ದ ವಾಲ್ಟರ್‌ ಆಲ್ಫ್ರೆಡ್‌ ಗಾಂಧೀಜಿ ಹತ್ಯೆಯನ್ನು ವರದಿ ಮಾಡಿದ ಆ ದಿನವನ್ನು ನೆನಪಿಸಿಕೊಂಡಿದ್ದಾರೆ. 

ಕಳೆದ ತಿಂಗಳು 99ನೇ ಹುಟ್ಟುಹಬ್ಬ ಆಚರಿಸಿಕೊಂಡ ವಾಲ್ಟರ್‌ ಅವರು ಗಾಂಧೀಜಿ ಹತ್ಯೆಯ ಸಂದರ್ಭದಲ್ಲಿ ನಾಗಪುರದಲ್ಲಿ ಕೆಲಸ ಮಾಡುತ್ತಿದ್ದರು. ದೆಹಲಿಯ ಬಿರ್ಲಾ ಹೌಸ್‌ನಲ್ಲಿ (ಈಗಿನ ಗಾಂಧಿ ಸ್ಮೃತಿ) ನಾಥೂರಾಮ್‌ ಗೋಡ್ಸೆಯ ಗುಂಡಿಗೆ ಗಾಂಧೀಜಿ ಬಲಿಯಾದ ಆ ಸಂಜೆ ವಾಲ್ಟರ್‌ ಕಚೇರಿಯಲ್ಲಿದ್ದರು. 

‘1948ರ ಜನವರಿ 30... ನಮಗೆ ಅಂತಹ ಕೆಲಸವೇನೂ ಇಲ್ಲದ ದಿನ. ಸಂಜೆಯವರೆಗೆ ನಾನು ಕೆಲವೇ ಸುದ್ದಿಗಳನ್ನು ಮಾತ್ರ ಬರೆದಿದ್ದೆ. ಸಂಜೆ 6.30–7ರ ಹೊತ್ತಿಗೆ ಕಚೇರಿಯ ಫೋನ್‌ ರಿಂಗಣಿಸಿತು. ಗಾಂಧೀಜಿ ಹತ್ಯೆಯ ಸುದ್ದಿ ಅತ್ತಕಡೆಯಿಂದ ಬಂತು’ ಎಂದು ಈಗ ಮುಂಬೈನ ಮೀರಾ ರೋಡ್‌ ನಿವಾಸಿಯಾಗಿರುವ ವಾಲ್ಟರ್‌ ನೆನಪಿಸಿಕೊಂಡರು. 

ದೂರವಾಣಿಯ ಅತ್ತಕಡೆಯಲ್ಲಿ ಇದ್ದವರು ಪಿಟಿಐನ ಮುಂಬೈ ವರದಿಗಾರ ಪೋಂಕ್ಷೆ. ಸಂಜೆಯ ಪ್ರಾರ್ಥನೆಗೆ ಹೋಗುತ್ತಿದ್ದ ಗಾಂಧೀಜಿಯ ಹತ್ಯೆಯಾಯಿತು ಎಂಬ ದುರಂತ ಸುದ್ದಿಯನ್ನು ಅವರು ಹೇಳಿದ್ದರು. 

ಸುದ್ದಿ ಕೇಳಿ ತಮ್ಮ ಸಮಚಿತ್ತವನ್ನು ಕಳೆದುಕೊಳ್ಳಲಿಲ್ಲ ಎಂದು ವಾಲ್ಟರ್‌ ಹೇಳಿದರು. 

‘ನಾನು ತಕ್ಷಣವೇ, ಪೋಂಕ್ಷೆ ಕೊಟ್ಟ ಮಾಹಿತಿಯ ಆಧಾರದಲ್ಲಿ ಆರಂಭಿಕ ಸುದ್ದಿಯನ್ನು ಬರೆದೆ. ಆಗ ನಾಗಪುರ ಕಚೇರಿಯಲ್ಲಿ ಇಬ್ಬರು ಸಹಾಯಕರಿದ್ದರು. ನಾಗಪುರದ ಆರು ಪತ್ರಿಕೆಗಳು ಆಗ ಪಿಟಿಐಗೆ ಚಂದಾದಾರರಾಗಿದ್ದವು. ಅದರಲ್ಲೊಂದು ಇಂಗ್ಲಿಷ್‌ ಪತ್ರಿಕೆಯಾಗಿತ್ತು. ಆಗ ಟೆಲಿಪ್ರಿಂಟರ್‌ ವ್ಯವಸ್ಥೆ ಇರಲಿಲ್ಲ. ಹಾಗಾಗಿ, ಈ ಇಬ್ಬರು ಸಹಾಯಕರು ಈ ಸುದ್ದಿಯ ಪ್ರತಿ ಹಿಡಿದು ಪತ್ರಿಕೆಗಳ ಕಚೇರಿಗಳತ್ತ ಓಡಿದರು’ ಎಂದು ವಾಲ್ಟರ್ ನೆನಪಿಸಿಕೊಂಡಿದ್ದಾರೆ. 

‘ನಿಖರವಾಗಿ ಮತ್ತು ಸಂಕ್ಷಿಪ್ತವಾಗಿ ಸುದ್ದಿ ಬರೆಯುವ ನನ್ನ ಸಾಮರ್ಥ್ಯಕ್ಕೆ ಅದೊಂದು ಪರೀಕ್ಷೆಯಾಗಿತ್ತು. ಗಾಂಧೀಜಿ ಹತ್ಯೆಗೆ ಸಂಬಂಧಿಸಿ ಬರುವ ಪ್ರತಿ ಕರೆಗೂ ನಾನು ಉತ್ತರಿಸಬೇಕಿತ್ತು, ಸುದ್ದಿಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕಿತ್ತು ಮತ್ತು ಸುದ್ದಿ ಬರೆದು ಆರು ಚಂದಾದಾರರಿಗೆ ತಲುಪಿಸಬೇಕಿತ್ತು’ ಎಂದು ಆ ಸಂಜೆಯನ್ನು ವಾಲ್ಟರ್‌ ವಿವರಿಸಿದ್ದಾರೆ. 

ಭಾವುಕನಾಗಲು ಆಗ ಸಮಯವೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಪಿಟಿಐ 1947ರಲ್ಲಿ ನೋಂದಣಿಯಾಗಿ 1949ರಲ್ಲಿ ಕಾರ್ಯಾಚರಣೆ ಆರಂಭಿಸಿತು. 1947ರಲ್ಲಿ ಸ್ವಾತಂತ್ರ್ಯ ಬಂದ ಬಳಿಕ, ರಾಯಿಟರ್ಸ್‌ ಸುದ್ದಿ ಸಂಸ್ಥೆಯ ಅಸೋಸಿಯೇಟೆಡ್‌ ಪ್ರೆಸ್‌ ಆಫ್‌ ಇಂಡಿಯಾದ ಕಾರ್ಯನಿರ್ವಹಣೆಯನ್ನು ಪಿಟಿಐ ತನ್ನದಾಗಿಸಿಕೊಂಡಿತ್ತು. 

ಗಾಂಧೀಜಿ ಭಾಗವಹಿಸಿದ್ದ ಕಾರ್ಯಕ್ರಮಗಳ ವರದಿ ಮಾಡಿದ್ದ ನೆನಪೂ ವಾಲ್ಟರ್‌ ಅವರಲ್ಲಿ ಹಸಿರಾಗಿದೆ. ‘ಭಾರತ ಬಿಟ್ಟು ತೊಲಗಿ’ ಎಂದು ಬ್ರಿಟಿಷರಿಗೆ ಕರೆಕೊಟ್ಟ ಮುಂಬೈನ ಗೊವಾಲಿಯಾ ಟ್ಯಾಂಕ್‌ ಸಮಾವೇಶದಲ್ಲಿ ವಾಲ್ಟರ್‌ ಇದ್ದರು. 

‘ಈ ಕಾರ್ಯಕ್ರಮದ ವರದಿ ಮಾಡುವುದಕ್ಕಾಗಿ ಸುದ್ದಿ ಸಂಸ್ಥೆಯು ಅಲ್ಲಿ ತಾತ್ಕಾಲಿಕ ಸುದ್ದಿ ಮನೆಯನ್ನು ಆರಂಭಿಸಿತ್ತು. ಅದು ವೇದಿಕೆಯ ಹತ್ತಿರದಲ್ಲಿಯೇ ಇತ್ತು. ಅಂದು 12 ವರದಿಗಾರರು ಮತ್ತು ಉಪಸಂಪಾದಕರು ಕೆಲಸ ಮಾಡಿದ್ದೆವು. ರಾಯಿಟರ್ಸ್‌ ವರದಿ ಮಾಡಿದ್ದ ಪ್ರತಿ ಸುದ್ದಿಯೂ ನನಗೆ ನೆನಪಿದೆ’ ಎಂದು ವಾಲ್ಟರ್‌ ವಿವರಿಸಿದ್ದಾರೆ. 

ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆನಂದ

ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಗಾಂಧೀಜಿ ಹತ್ಯೆಯ ಮರುದಿನ ಹೋದ ಸಂದರ್ಭವನ್ನೂ ವಾಲ್ಟರ್‌ ನೆನಪಿಸಿಕೊಂಡಿದ್ದಾರೆ. 

‘ಮರು ದಿನ ನಾನು ಆರ್‌ಎಸ್‌ಎಸ್‌ ಕಚೇರಿಗೆ ಹೋದೆ. ಅಲ್ಲಿದ್ದವರ ಮುಖದಲ್ಲಿ ಸಂತೋಷ ಕಂಡು ನನಗೆ ಆಶ್ಚರ್ಯವಾಯಿತು. ಅವರಿಗೆ ತಮ್ಮ ಆನಂದವನ್ನು ಅಡಗಿಸಿಡಲು ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ವಾಲ್ಟರ್‌ ಹೇಳಿದ್ದಾರೆ. 

‘ಅವರಿಗೆ ಗಾಂಧಿ ಮತ್ತು ನೆಹರೂ ಇಷ್ಟ ಇರಲಿಲ್ಲ. ಹಾಗಿದ್ದರೂ ಅವರ ಪ್ರತಿಕ್ರಿಯೆ ಈ ರೀತಿಯಲ್ಲಿ ಇರಬಹುದು ಎಂದು ಊಹಿಸಿಯೇ ಇರಲಿಲ್ಲ’ ಎಂದಿದ್ದಾರೆ ವಾಲ್ಟರ್‌.

Post Comments (+)