ಗುರುವಾರ , ಫೆಬ್ರವರಿ 27, 2020
19 °C

‘ಜೈಂಟ್ ಕಿಲ್ಲರ್‌’ ಎಂದೇ ಪ್ರಸಿದ್ಧರಾಗಿದ್ದ ಜಾರ್ಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದ.

ಇದನ್ನೂ ಓದಿ: ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ನಿಧನ

ಕ್ರಮವಾಗಿ ಜಾರ್ಜ್‌ ಅವರು 4, 6, 7 9, 10, 11, 12, 13, 14ನೇ ಲೋಕಸಭೆಗೆ ಮತ್ತು 2009ರಲ್ಲಿ ರಾಜ್ಯಸಭೆ ಪ್ರವೇಶಿಸಿದ್ದರು. ಅವರು ಕಾರ್ಮಿಕ ಪರ ಹೋರಾಟ­ಗಳಲ್ಲಿ ಭಾಗವಹಿಸಿ­ದ್ದರು, ಡಾ.­ಲೋಹಿ­ಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು.
ಉದ್ಯೋಗ ಅರಸಿ ಮುಂಬೈ­ಗೆ ತೆರಳಿದ ಅವರು ಅನೇಕ ಹೋರಾಟಗಳಲ್ಲಿ ಭಾಗ­ವಹಿಸಿದರು.

ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್‌ ಅವರನ್ನು ಸೋಲಿಸಿ ‘ಜೈಂಟ್‌ ಕಿಲ್ಲರ್‌’ (ದೈತ್ಯ ಸಂಹಾರಕ) ಎಂದು ಪ್ರಸಿದ್ಧರಾದರು. 1969ರಲ್ಲಿ ಇವರು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನಕಾರ್ಯದರ್ಶಿ­ಯಾದರು.

ಇದನ್ನೂ ಓದಿ: ನ್ಯೂಯಾರ್ಕ್‌ನಿಂದ ಪುತ್ರ ಬಂದ ಬಳಿಕ ಜಾರ್ಜ್‌ ಫರ್ನಾಂಡಿಸ್‌ ಅಂತ್ಯಕ್ರಿಯೆ

ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಅಖಿಲ ಭಾರತ ರೈಲ್ವೆ ಫೆಡರೇಷ­ನ್‌ನ ಮುಖಂಡ­ರಾಗಿ 1974ರಲ್ಲಿ ಅವರು ಸಂಘಟಿಸಿದ ಮುಷ್ಕರ ತೀವ್ರ ಸ್ವರೂಪ ಪಡೆದು ಇಂದಿರಾ ಗಾಂಧಿ ಅವರ ಸರ್ಕಾ­ರಕ್ಕೆ ಸವಾಲಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ಇಂದಿರಾ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಇವರನ್ನು ಬಂಧಿಸಿದರು. 

1977ರಲ್ಲಿ ನಡೆದ ಮಹಾಚುನಾವಣೆ­ಯಲ್ಲಿ ಜಾರ್ಜ್‌ ಅವರು ಬಿಹಾರದ ಮುಜಫರ್‌ನ­ಗರದಿಂದ ಸ್ಪರ್ಧಿಸಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಕೇಂದ್ರ ಸಚಿವರಾದರು. 

ಇದನ್ನೂ ಓದಿ: ಎಲ್ಲಿದ್ದೀರಿ ಜಾರ್ಜ್? ಹೇಗಿದ್ದೀರಿ ಜಾರ್ಜ್?

ಆ ಸಮಯ­ದಲ್ಲಿ ಜಾರ್ಜ್‌ ಅವರು ವಿದೇಶಿ ವಿನಿ­ಮಯ ನಿಯಂತ್ರಣ ಕಾಯ್ದೆಯನ್ನು ಕಟ್ಟು­ನಿಟ್ಟಾಗಿ ಜಾರಿಗೆ ತಂದಾಗ ಬಹು­ರಾಷ್ಟ್ರೀಯ ಕಂಪೆನಿಗಳಾದ ಐಬಿಎಂ ಮತ್ತು ಕೋಕಾಕೋಲ ಭಾರತದಿಂದ ಕಾಲ್ತೆಗೆದವು. ವಿ.ಪಿ.ಸಿಂಗ್‌ ಅವರ ಸರ್ಕಾರ­ದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಇವರು ಕೊಂಕಣ ರೈಲ್ವೆ ಯೋಜನೆಗೆ ಜೀವ ಕೊಟ್ಟರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿಯಾ­ಗಿದ್ದರು. ಪ್ರಖರ ಭಾಷಣಗಳಿಗೆ ಇವರು ದೇಶದಾದ್ಯಂತ ಹೆಸರಾಗಿದ್ದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು