ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಜ್ಯ ಗಾಂಜಾ ಮಾರಾಟಗಾರರ ಸೆರೆ

ಬಾಣಸವಾಡಿ ಪೊಲೀಸರ ಕಾರ್ಯಾಚರಣೆ
Last Updated 10 ಫೆಬ್ರುವರಿ 2019, 19:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಬಾಣಸವಾಡಿ ಪೊಲೀಸರು, ಒಡಿಶಾದ ಏಳು ಮಂದಿಯನ್ನು ಬಂಧಿಸಿದ್ದಾರೆ.

ಸುಜಿತ್‌ಕುಮಾರ್, ಅರ್ಜುನ್ ಕೊಹರ್, ಅಜಿತ್, ರಾಘವ್ ಶಾಮಲ್, ವಿಕ್ರಂ ಕೊಹರ್, ಬೇದಭ್ಯಾಸ್ ಕೊಹರ್ ಹಾಗೂ ಅಜಿತ್‌ ಕೊಹರ್ ಬಂಧಿತರು. ಅವರಿಂದ ₹19.50 ಲಕ್ಷ ಮೌಲ್ಯದ 39 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.

ಗಾಂಜಾ ಮಾರಾಟ ಮಾಡಲೆಂದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ರಾಮಸ್ವಾಮಿಪಾಳ್ಯದ ಐ.ಒ.ಸಿ. ವೃತ್ತದ ಸೇತುವೆ ಬಳಿ ಬಂದು ಗ್ರಾಹಕರಿಗಾಗಿ ಕಾಯುತ್ತ ನಿಂತಿದ್ದರು. ಆ ಬಗ್ಗೆ ಮಾಹಿತಿ ಪಡೆದ ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್‌ ಆರ್‌. ವಿರೂಪಾಕ್ಷ
ಸ್ವಾಮಿ ನೇತೃತ್ವದ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

‘ಒಡಿಶಾದ ವ್ಯಕ್ತಿಯೊಬ್ಬರು ನೀಡಿದ್ದ ಗಾಂಜಾವನ್ನು ಕಮಿಷನ್ ಆಸೆಗಾಗಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಬಂದಿರುವುದಾಗಿ ಆರೋಪಿಗಳು ಹೇಳಿಕೊಳ್ಳುತ್ತಿದ್ದಾರೆ. ಅವರಿಗೆ ಗಾಂಜಾ ಕೊಟ್ಟು ಕಳುಹಿಸಿದ್ದ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ’ ಎಂದು ಪೊಲೀಸರು ಹೇಳಿದರು.

ರೈಲಿನಲ್ಲಿ ಸಾಗಣೆ: ‘ಒಡಿಶಾದ ಜಮೀನುಗಳಲ್ಲಿ ಬೆಳೆದಿದ್ದ ಗಾಂಜಾವನ್ನು 15 ಪ್ಯಾಕ್‌ಗಳಲ್ಲಿ ತುಂಬಿಕೊಂಡಿದ್ದ ಆರೋಪಿಗಳು, ಭುವನೇಶ್ವರದಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಯಾರಿಗೂ ಅನುಮಾನ ಬಾರದಂತೆ ತಲಾ ಇಬ್ಬರು ಆರೋಪಿ, ಒಂದೊಂದು ಬೋಗಿಯಲ್ಲಿ ಕುಳಿತುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ರೈಲು ನಿಲ್ದಾಣಕ್ಕೆ ಬಂದಿಳಿದು, ಅಲ್ಲಿಂದ ಬಸ್ಸಿನಲ್ಲಿರಾಮಸ್ವಾಮಿಪಾಳ್ಯಕ್ಕೆ ಬಂದಿದ್ದರು. ಆಗಲೇ ದಾಳಿ ಮಾಡಿ ಅವರನ್ನು ಬಂಧಿಸಲಾಯಿತು’ ಎಂದರು.

‘ನಗರದಲ್ಲಿರುವ ಕೆಲವು ಮಾರಾಟಗಾರರಿಗೆ ಒಡಿಶಾದಿಂದ ಗಾಂಜಾ ಪೂರೈಕೆ ಆಗುತ್ತಿರುವುದು ಬಂಧಿತ ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ. ಆ ಬಗ್ಗೆ ಒಡಿಶಾ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಗರದಲ್ಲಿ ಮಾರಾಟ ಮಾಡುತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT