ಸೋಮವಾರ, ಆಗಸ್ಟ್ 19, 2019
28 °C

ಶ್ರೀನಗರಕ್ಕೆ ಬಂದ ಗುಲಾಂ ನಬಿ ಆಜಾದ್‌ಗೆ ವಿಮಾನ ನಿಲ್ದಾಣದಲ್ಲಿ ತಡೆ

Published:
Updated:

ನವದೆಹಲಿ: ರಾಜ್ಯಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ಗುಲಾಂ ನಬಿ ಆಜಾದ್ ಕಣಿವೆ ರಾಜ್ಯಕ್ಕೆ ಭೇಟಿ ನೀಡಲು ಬಂದಾಗ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆಯಲಾಗಿದೆ. ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದು ಮಾಡಿ ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದು ಹಾಕಿದ ನಂತರ ಗುಲಾಂ ನಬಿ ಆಜಾದ್ ಮೊದಲ ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಶ್ರೀನಗರ  ಭೇಟಿಗೆ ತಡೆಯೊಡ್ಡಿದ ಕಾರಣ ಆಜಾದ್ ದೆಹಲಿಗೆ ಮರಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ಮುಖ್ಯಸ್ಥ ಗುಲಾಂ ಅಹಮದ್ ಮೀರ್ ಅವರೂ ಆಜಾದ್ ಜತೆಗಿದ್ದರು. ಶ್ರೀನಗರದತ್ತ ಹೊರಡುವ ಮುನ್ನ ಆಜಾದ್ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಅವರ ಬಗ್ಗೆ ನೀಡಿದ ಹೇಳಿಕೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಅಜಿತ್ ಡೊಭಾಲ್ ಬುಧವಾರ ದಕ್ಷಿಣ ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಳೀಯರ ಜತೆ ಬೆರತು ರಸ್ತೆ ಬದಿಯಲ್ಲಿ ಕುಳಿತು ಆಹಾರ ಸೇವಿಸಿದ್ದರು. ಡೊಭಾಲ್ ಅವರ ಭೇಟಿಯ ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಡೊಭಾಲ್ ಭೇಟಿ ಬಗ್ಗೆ ಆಜಾದ್ ಅವರಲ್ಲಿ ಕೇಳಿದಾಗ ಪೈಸಾ ದೇಕರ್ ಆಪ್ ಕಿಸಿ ಕೋ ಭೀ ಸಾಥ್ ಲೇ ಸಕ್ತೇ ಹೋ (ಹಣ ಕೊಟ್ಟು ನೀವು ಯಾರನ್ನೂ ಬೇಕಾದರೂ ಕರೆತರಬಹುದು) ಎಂದು ಉತ್ತರಿಸಿದ್ದಾರೆ. ಆಜಾದ್ ಅವರ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಕ್ಷಮೆಯಾಚಿಸಲು ಒತ್ತಾಯಿಸಿದೆ.

ಗುಲಾಂ ನಬಿ ಆಜಾದ್ ಅವರ ಹೇಳಿಕೆ ದುರದೃಷ್ಟಕರ. ನಾವು ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ರಾಷ್ಟ್ರೀಯ ಭದ್ರತಾ ಸಲಹೆಗಾರರು ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಜನರ ಜತೆ ಕುಳಿತು ಊಟ ಮಾಡಿದರೆ ನಾವು ಹಣ ಕೊಟ್ಟಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತದೆ. 

ಈ ರೀತಿಯ ಆರೋಪ ಪಾಕಿಸ್ತಾನದ ಜನರಿಂದ ಕೇಳಿ ಬರುತ್ತದೆ. ಕಾಂಗ್ರೆಸ್‌ನ ಹಿರಿಯ ನಾಯಕರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಈ ರೀತಿ ಆರೋಪಗಳನ್ನು ಹೇಗೆ ಮಾಡುತ್ತೀರಿ? ಜಾಗತಿಕ ವೇದಿಕೆಗಳಲ್ಲಿ ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡಿತ್ತು. ಈ ರೀತಿ ಹೇಳಿಕೆ ನೀಡಿದ ಆಜಾದ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಒತ್ತಾಯಿಸಿದ್ದಾರೆ. 
 

Post Comments (+)