ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಸಂತಾನಕ್ಕೆ ಕಡಿವಾಣ

Last Updated 16 ಮಾರ್ಚ್ 2020, 2:26 IST
ಅಕ್ಷರ ಗಾತ್ರ

ಜನಸಂಖ್ಯಾ ನಿಯಂತ್ರಣ ಉದ್ದೇಶದ ‘ಎರಡು ಮಕ್ಕಳ ನೀತಿ’ಯನ್ನು ಜಾರಿಗೊಳಿಸಲು ಖಾಸಗಿ ಮಸೂದೆಯನ್ನು ಸಂಸತ್ತಿನ ಬಜೆಟ್‌ ಅಧಿವೇಶನದಲ್ಲೇ ಮಂಡಿಸುವುದಾಗಿ ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನುಸಿಂಘ್ವಿ ಹೇಳಿದ್ದಾರೆ. ಮಸೂದೆಯು ವಿತ್ತೀಯ ಪರಿಣಾಮಗಳನ್ನು ಉಂಟುಮಾಡಬಲ್ಲದ್ದಾಗಿರುವುದರಿಂದ ಅದನ್ನು ಮಂಡಿಸುವುದಕ್ಕೂ ಮುನ್ನ ರಾಷ್ಟ್ರಪತಿಯ ಒಪ್ಪಿಗೆ ಪಡೆಯಬೇಕಾಗಿತ್ತು. ರಾಮನಾಥ್‌ ಕೋವಿಂದ್‌ ಅವರು ಈಗಾಗಲೇ ಅದಕ್ಕೆ ಅನುಮತಿ ನೀಡಿದ್ದಾರೆ. ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಮಾಡುವ ಪ್ರಯತ್ನಗಳು ನಮ್ಮಲ್ಲಿ ಸ್ವಾತಂತ್ರ್ಯಾನಂತರದ ದಿನಗಳಲ್ಲೇ ಆರಂಭವಾಗಿದ್ದರೂ ಪರಿಣಾಮ ಉಂಟುಮಾಡಿಲ್ಲ ಎಂಬುದು ವಾಸ್ತವ...

ಕುಟುಂಬ ಯೋಜನೆಯ ಹಾದಿ

ಸ್ವಾತಂತ್ರ್ಯಾನಂತರ ರಚನೆಯಾದ ಮೊದಲ ಲೋಕಸಭೆಯಲ್ಲಿಯೇ ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚೆ ನಡೆದಿತ್ತು. 1951ರಲ್ಲೇ ಕುಟುಂಬ ಯೋಜನೆಯನ್ನು ಜಾರಿಮಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತಕ್ಕೆ ಪ್ರಾಪ್ತವಾಗಿದೆ. ಆದರೆ ಯೋಜನೆ ನಿರೀಕ್ಷಿತ ಪರಿಣಾಮ ಉಂಟುಮಾಡಿಲ್ಲ.

* ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ (1951–56) ಜನಸಂಖ್ಯಾ ನೀತಿಯನ್ನು ರೂಪಿಸುವ ಅಗತ್ಯವನ್ನು ಮನಗಾಣ ಲಾಗಿತ್ತು. ಕುಟುಂಬ ಯೋಜನೆಯ ಅಗತ್ಯವನ್ನೂ ಪ್ರಸ್ತಾಪಿಸಲಾಗಿತ್ತು

* ಎರಡನೇ ಯೋಜನೆಯಲ್ಲಿ (1956–61) ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆಒತ್ತು ನೀಡಲಾಗಿತ್ತು

* ನಾಲ್ಕನೇ ಯೋಜನೆಯಲ್ಲಿ (1969–74) ಕುಟುಂಬ ಯೋಜನೆ ಯನ್ನು ರಾಷ್ಟ್ರೀಯ ಆದ್ಯತೆಯ ವಿಚಾರವೆಂದು ಪರಿಗಣಿಸಲಾಗಿತ್ತು

* 7ನೇ ಪಂಚವಾರ್ಷಿಕ ಯೋಜನೆಯಲ್ಲಿ (1985–86 ರಿಂದ 1990–91) ಜನಸಂಖ್ಯಾ ನಿಯಂತ್ರಣದ ಕಡೆಗೆ ಗಮನಹರಿಸಲಾಗಿತ್ತು

* 11ನೇ ಯೋಜನೆಯಲ್ಲಿ (2007–12) ಮಹಿಳೆಯರ ಸಂತಾನೋತ್ಪತ್ತಿ ದರ ಶೇ 2.1ಕ್ಕೆ ಇಳಿಸುವ ಗುರಿಯನ್ನು ನಿಗದಿ ಮಾಡಲಾಗಿತ್ತು.

‘ತುರ್ತು’ ನಿಗ್ರಹ

1970ರ ದಶಕದಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದಾಗ ಎರಡು ಮಕ್ಕಳ ನೀತಿಯನ್ನು ‘ಹೇರಲಾಗಿತ್ತು’. ಸರಿಸುಮಾರು ಇದೇ ಸಮಯದಲ್ಲಿ ಚೀನಾ ತನ್ನ ಎರಡು ಮಕ್ಕಳ ನೀತಿಯನ್ನು ಬದಲಿಸಿ ‘ಕುಟುಂಬಕ್ಕೆ ಒಂದೇ ಮಗು’ ಎಂಬ ನೀತಿಯನ್ನು ಜಾರಿಮಾಡಿತ್ತು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾವಿರಾರು ಜನರನ್ನು ಎಳೆದು ತಂದು ಒತ್ತಾಯದಿಂದ ಸಂತಾನಶಕ್ತಿಹರಣ ಶಸ್ತ್ರ
ಚಿಕಿತ್ಸೆ ಮಾಡಿಸಲಾಗಿತ್ತು. ಆದರೆ ಅದು ತಿರುಗುಬಾಣವಾಯಿತು. ತುರ್ತು ಪರಿಸ್ಥಿತಿ ರದ್ದಾಗುತ್ತಿದ್ದಂತೆಯೇ ದೇಶದಲ್ಲಿ ಜನಸಂಖ್ಯಾ ಸ್ಫೋಟವಾಯಿತು.

ನೀತಿಯ ವಿರೋಧಾಭಾಸ

1980ರ ದಶಕದಲ್ಲಿ ‘ಹಮ್‌ ದೋ, ಹಮಾರೆ ದೋ’ (ನಾವಿಬ್ಬರು ನಮಗಿಬ್ಬರು) ಎಂಬ ಪ್ರಚಾರಾಂದೋಲನವನ್ನು ಸರ್ಕಾರ ನಡೆಸಿತು. ಇದರ ಪರಿಣಾಮ ಸಂತಾನೋತ್ಪತ್ತಿ ದರ ಗಮನಾರ್ಹವಾಗಿ ಇಳಿಕೆಯಾಗುತ್ತಿರುವುದು ಕಂಡುಬಂತು.

ಆದರೆ ಒಂದೂವರೆ ದಶಕರ ಬಳಿಕ ಸರ್ಕಾರವು ತನ್ನ ಉದ್ದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿತು. ಜನಸಂಖ್ಯೆ ಮತ್ತು ಅಭಿವೃದ್ಧಿ ಕುರಿತು1994ರಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ನಿರ್ಣಯಗಳಿಗೆ ಸಹಿ ಹಾಕಿತು. ಅದರ ಪ್ರಕಾರ, ಎಷ್ಟು ಮಕ್ಕಳನ್ನು ಹೊಂದಬೇಕು ಮತ್ತು ಮಕ್ಕಳ ಮಧ್ಯೆ ಎಷ್ಟು ಅಂತರ ಇರಬೇಕು ಎಂಬುದನ್ನು ನಿರ್ಧರಿಸುವ ದಂಪತಿಯ ಅಧಿಕಾರವನ್ನು ಸರ್ಕಾರ ಗೌರವಿಸಬೇಕಾಗುತ್ತದೆ. ಇದು ಸರ್ಕಾರದ ನೀತಿಯ ವೈರುಧ್ಯವಾಗಿ ಕಾಣಿಸಿತು. ಜನಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಯಾವುದೇ ಮಸೂದೆಯನ್ನು ಸಿದ್ಧಪಡಿಸದಿರುವುದಕ್ಕೆ ಇದೂ ಒಂದು ಕಾರಣ.

ಇದಾದ ಬಳಿಕ, 2045ರ ವೇಳೆಗೆ ಜನಸಂಖ್ಯೆಯನ್ನು ಸ್ಥಿರಗೊಳಿಸುವಂಥ ದೀರ್ಘಾವಧಿಯ ರಾಷ್ಟ್ರೀಯ ಆರೋಗ್ಯ ನೀತಿಯನ್ನು 2000ನೇ ಸಾಲಿನಲ್ಲಿ ಅಂಗೀಕರಿಸಲಾಯಿತು.

2016ರಲ್ಲಿ ಸಂಸದ ಪ್ರಹ್ಲಾದ್‌ ಸಿಂಗ್‌ ಪಟೇಲ್‌ (ಪ್ರಸಕ್ತ ಕೇಂದ್ರದ ಸಚಿವ) ಅವರು ಜನಸಂಖ್ಯಾ ನಿಯಂತ್ರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಆದರೆ 16ನೇ ಲೋಕಸಭೆಯ ಅವಧಿ ಮುಗಿಯುವವರೆಗೂ ಅದು ಮತದಾನದ ಹಂತದವರೆಗೆ ಬರಲಿಲ್ಲ.

ಮಸೂದೆಯಲ್ಲೇನಿದೆ...

ಪ್ರೋತ್ಸಾಹ ಧನದ ಯೋಜನೆಯೊಂದಿಗೆ ಎರಡು ಮಕ್ಕಳ ನೀತಿಯನ್ನು ಜಾರಿ ಮಾಡಬೇಕು ಎಂದು ಸಿಂಘ್ವಿ ಅವರು ಮಂಡಿಸಲಿರುವ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

*ಬಡತನರೇಖೆಗಿಂತ ಕೆಳಗಿರುವ ವಿವಾಹಿತ ಜೋಡಿಯು ಮೊದಲ ಹೆರಿಗೆಯಲ್ಲಿ ಗಂಡುಮಗುವನ್ನು ಪಡೆದು, ನಂತರ ಸ್ವಯಂಪ್ರೇರಣೆಯಿಂದ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಅವರಿಗೆ ಒಂದೇ ಬಾರಿಗೆ ₹ 60,000 ಪ್ರೋತ್ಸಾಹಧನ ನೀಡಬೇಕು

*ಮೊದಲ ಮಗು ಹೆಣ್ಣಾಗಿದ್ದು, ಸ್ವಯಂಪ್ರೇರಣೆಯಿಂದ ಶಸ್ತ್ರಚಿಕಿತ್ಸೆ ಮಾಡಿಸುವ, ಬಡತನರೇಖೆಗಿಂತ ಕೆಳಗಿರುವ ದಂಪತಿಗೆ ₹ 1 ಲಕ್ಷ ಪ್ರೋತ್ಸಾಹ ಧನ ನೀಡಬೇಕು

ನಿಗ್ರಹಕ್ಕೆ ಗಾಂಧಿ ಒತ್ತು

ಕುಟುಂಬ ಕಲ್ಯಾಣ ಯೋಜನೆಗೆ ಮಹಾತ್ಮ ಗಾಂಧಿ ಬೆಂಬಲ ಸೂಚಿಸಿದ್ದರೂ, ಗರ್ಭನಿರೋಧಕಗಳನ್ನು ಬಳಸಿ ಜನನ ಪ್ರಮಾಣವನ್ನು ನಿಯಂತ್ರಿಸುವುದನ್ನು ವಿರೋಧಿಸಿದ್ದರು. ಬದಲಿಗೆ ಜನರು ಸ್ವಯಂಪ್ರೇರಣೆಯಿಂದ ಇಂದ್ರಿಯ ನಿಗ್ರಹದ ಮೂಲಕ ಜನಸಂಖ್ಯೆಯನ್ನು ನಿಯಂತ್ರಿಸಬೇಕು ಎಂಬುದು ಅವರ ಬಯಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT