ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ವಸ್ತುಗಳ ಆಮದು ಕಡಿತಕ್ಕೆ ಯೋಜನೆ ರೂಪಿಸಲು ಮುಂದಾದ ಕೇಂದ್ರ

ಉತ್ಪನ್ನವಾರು ಮಾಹಿತಿ ಕೋರಿದ ಸರ್ಕಾರ
Last Updated 22 ಜೂನ್ 2020, 5:40 IST
ಅಕ್ಷರ ಗಾತ್ರ

ನವದೆಹಲಿ: ಕಳಪೆ ಗುಣಮಟ್ಟದ ಆಮದಾಗುವ ವಸ್ತುಗಳ ಉತ್ಪನ್ನವಾರು ವಿವರ ಒದಗಿಸುವಂತೆ ಕೇಂದ್ರ ಸರ್ಕಾರವು ಕೈಗಾರಿಕೋದ್ಯಮಿಗಳನ್ನು ಕೋರಿದೆ. ಆಮದಾಗುವ ಕಳಪೆ ಗುಣಮಟ್ಟದ ವಸ್ತುಗಳು, ಅವುಗಳಿಗೆ ಪರ್ಯಾಯವಾಗಿ ದೇಶದಲ್ಲಿ ಲಭ್ಯವಿರುವ ವಸ್ತುಗಳು ಮತ್ತು ಬೆಲೆ ವ್ಯತ್ಯಾಸ, ತೆರಿಗೆ ಅನನುಕೂಲ ಇತ್ಯಾದಿ ವಿವರಗಳನ್ನು ಸರ್ಕಾರ ಕೋರಿದೆ. ಮುಖ್ಯವಾಗಿ ಚೀನಾ ವಸ್ತುಗಳ ಆಮದು ಕಡಿತ ಮತ್ತು ದೇಶೀಯ ಉತ್ಪಾದನೆ ಹೆಚ್ಚಳ ಉದ್ದೇಶದೊಂದಿಗೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ವಸ್ತುಗಳ ಆಮದು ಕಡಿತ ಮತ್ತು ಆತ್ಮನಿರ್ಭರ ಭಾರತಕ್ಕೆ (ಸ್ವಾವಲಂಬಿ ಭಾರತ) ಉತ್ತೇಜನ ನೀಡುವ ದಾರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹಾದಿ ಕಂಡುಕೊಳ್ಳಲು ಪ್ರಧಾನಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಉನ್ನತ ಮಟ್ಟದ ಸಭೆ ನಡೆದಿದೆ ಎಂದೂ ಮೂಲಗಳು ಹೇಳಿವೆ. ಈ ವಿಚಾರವಾಗಿ ಸಲಹೆ, ಸೂಚನೆಗಳನ್ನು ನೀಡುವಂತೆ ಕೈಗಾರಿಕೆ ಮತ್ತು ಉದ್ಯಮ ವಲಯದವರನ್ನು ವಿನಂತಿಸಲಾಗಿದೆ.

ಚೀನಾದಿಂದ ಆಮದಾಗುವ ಸರಕುಗಳು, ಕಚ್ಚಾ ವಸ್ತುಗಳ ವಿವರಗಳನ್ನು ಕೋರಲಾಗಿದೆ. ಇವುಗಳಲ್ಲಿ ಆಮದಾಗುವ ಕೈಗಡಿಯಾರಗಳು, ಗಡಿಯಾರಗಳು, ಗಾಜಿನ ರಾಡ್‌–ಟ್ಯೂಬ್‌ಗಳು, ಹೇರ್ ಕ್ರೀಮ್, ಶಾಂಪೂ, ಸೌಂದರ್ಯ ವರ್ಧಕಸಾಧನಗಳು, ಪ್ರಿಂಟಿಂಗ್ ಶಾಯಿ, ಪೈಂಟ್‌, ವಾರ್ನಿಶ್, ಕೆಲವು ತಂಬಾಕು ಉತ್ಪನ್ನಗಳೂ ಸೇರಿವೆ ಎನ್ನಲಾಗಿದೆ.

2014-15ರಿಂದ 2018–19ರ ಅವಧಿಯಲ್ಲಿ ಆಮದು ಏರಿಕೆ ಪ್ರಮಾಣ, ಆಮದಾದ ವಸ್ತುಗಳಿಗೆ ಪರ್ಯಾಯವಾಗಿ ದೇಶದಲ್ಲಿ ಸಿಗುವ ವಸ್ತುಗಳ ದರ, ದೇಶೀಯ ಉತ್ಪಾದನಾ ಸಾಮರ್ಥ್ಯ, ಉಚಿತ ವಹಿವಾಟು ಒಪ್ಪಂದದಡಿ ಆಮದಾಗುತ್ತಿರುವ ವಸ್ತುಗಳ ಮತ್ತು ತೆರಿಗೆ ಸಮಸ್ಯೆಗಳಿರುವ ಸರಕುಗಳ ವಿವರ ಕೇಳಲಾಗಿದೆ.

ಈ ವಿಚಾರವಾಗಿ ನಮ್ಮ ಆಲೋಚನೆಗಳನ್ನು ಮತ್ತು ಆಮದಾಗುವ ವಸ್ತುಗಳ ವಿವರಗಳನ್ನು ಶೀಘ್ರದಲ್ಲೇ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಕಳುಹಿಸಿಕೊಡಲಿದ್ದೇವೆ ಎಂದು ಕೈಗಾರಿಕಾ ಮೂಲಗಳೂ ತಿಳಿಸಿವೆ.

ಭಾರತ–ಚೀನಾ ಗಡಿ ಸಂಘರ್ಷ ಉದ್ವಿಗ್ನಗೊಂಡಿರುವ ಬೆನ್ನಲ್ಲೇ ಚೀನಾ ವಸ್ತುಗಳ ಆಮದು ಕಡಿತ ನಿಟ್ಟಿನಲ್ಲಿ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ದೇಶದ ಒಟ್ಟು ಆಮದಿನಲ್ಲಿ ಶೇ 14ರಷ್ಟು ಪಾಲು ಚೀನಾ ಹೊಂದಿದೆ. ಸೆಲ್‌ಫೋನ್‌, ಟೆಲಿಕಾಂ ಕ್ಷೇತ್ರದ ವಸ್ತುಗಳು, ವಿದ್ಯುತ್ ಉಪಕರಣಗಳು, ಪ್ಲಾಸ್ಟಿಕ್ ಆಟಿಕೆಗಳು ಹಾಗೂ ನಿರ್ಣಾಯಕ ಔಷಧೋತ್ಪನ್ನಗಳು ಚೀನಾದಿಂದ ಆಮದಾಗುವ ವಸ್ತುಗಳ ಪೇಯಿಂಟ್ ಪ್ರಮುಖವಾದವು.

ಕೇಂದ್ರ ಸರ್ಕಾರ ಇತ್ತೀಚೆಗೆ ಟೈರ್ ಆಮದಿನ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು. ಜತೆಗೆ, ಕೊರೊನಾ ಸೋಂಕು ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶಿ ಉದ್ಯಮ ವಲಯವನ್ನು ರಕ್ಷಿಸುವ ಸಲುವಾಗಿ ಚೀನಾ ಸೇರಿದಂತೆ ನೆರೆ ರಾಷ್ಟ್ರಗಳ ನೇರ ಹೂಡಿಕೆಗೆ (ಎಫ್‌ಡಿಐ) ನಿರ್ಬಂಧಗಳನ್ನು ವಿಧಿಸಿತ್ತು. ನೆರೆ ರಾಷ್ಟ್ರಗಳು ದೇಶಿಯ ಕಂಪೆನಿಗಳಲ್ಲಿ ನೇರ ಹೂಡಿಕೆ ಮಾಡಬೇಕಿದ್ದರೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂಬ ನಿಯಮವನ್ನು ರೂಪಿಸಲಾಗಿತ್ತು.

ಕೊರೊನಾ ‍ಪಿಡುಗಿನ ಕಾರಣದಿಂದಾಗಿ ಉದ್ಯಮ ಸಂಸ್ಥೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಕಂಪೆನಿಗಳ ಮೌಲ್ಯ ಕೂಡ ಇಳಿಕೆಯಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಚೀನಾದ ಕಂಪೆನಿಗಳು ಭಾರತದ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದ್ದು, ಇದನ್ನು ತಡೆಯುವುದಕ್ಕಾಗಿ ಎಫ್‌ಡಿಐ ಮೇಲೆ ನಿರ್ಬಂಧ ಹೇರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT