ಗುರುವಾರ , ಸೆಪ್ಟೆಂಬರ್ 23, 2021
22 °C
ನೆರೆ ದೇಶಗಳ ಎಫ್‌ಡಿಐಗೆ ಸರ್ಕಾರದ ಅನುಮತಿ ಕಡ್ಡಾಯ: ನಿಯಮ ಬದಲಿಸಿದ ಕೇಂದ್ರ

ದೇಶಿ ಕಂಪೆನಿಗಳ ರಕ್ಷಣೆಗೆ ಕೇಂದ್ರದ ನೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದ ಜತೆ ಗಡಿ ಹಂಚಿಕೊಂಡಿರುವ ದೇಶಗಳ ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂಬ ನಿಯಮವನ್ನು ರೂಪಿಸಲಾಗಿದೆ. 

ಕೊರೊನಾ ‍ಪಿಡುಗಿನ ಕಾರಣ ದಿಂದಾಗಿ ಉದ್ಯಮ ಸಂಸ್ಥೆಗಳು ಸಂಕಷ್ಟಕ್ಕೆ ಒಳಗಾಗಿವೆ. ಕಂಪೆನಿಗಳ ಮೌಲ್ಯ ಕೂಡ ಇಳಿಕೆಯಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಚೀನಾದ ಕಂಪೆನಿಗಳು ಭಾರತದ ಕಂಪೆನಿಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದನ್ನು ತಡೆಯುವುದಕ್ಕಾಗಿ ಎಫ್‌ಡಿಐ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತದ ಜತೆ ಗಡಿ ಹಂಚಿಕೊಂಡಿರುವ ದೇಶಗಳೆಂದರೆ ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ, ಭೂತಾನ್‌, ನೇಪಾಳ, ಮ್ಯಾನ್ಮಾರ್‌ ಮತ್ತು ಅಫ್ಗಾನಿಸ್ತಾನ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಎಫ್‌ಡಿಐಗೆ
ಸಂಬಂಧಿಸಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಈ ದೇಶದ ಕಂಪೆನಿಗಳ ಎಫ್‌ಡಿಐಗೆ ಸರ್ಕಾರದ ಪೂರ್ವಾನುಮತಿ ಕಡ್ಡಾಯ. 

ಭಾರತದ ಯಾವುದೇ ಕಂಪೆನಿಯಲ್ಲಿ ಈಗ ಇರುವ ಮತ್ತು ಭವಿಷ್ಯದ ವಿದೇಶಿ ನೇರ ಹೂಡಿಕೆಯ ಮಾಲೀಕತ್ವದ ಬದಲಾವಣೆಗೆ ಸರ್ಕಾರದ ಅನುಮತಿ ಅಗತ್ಯ ಎಂದು ಹೊಸ ನಿಯಮಗಳಲ್ಲಿ ಹೇಳಲಾಗಿದೆ. 

ಚೀನಾದ ಕೇಂದ್ರೀಯ ಬ್ಯಾಂಕ್‌, ಎಚ್‌ಡಿಎಫ್‌ಸಿಯಲ್ಲಿ ಪಾಲು ಹೊಂದಿದೆ. ಎಚ್‌ಡಿಎಫ್‌ಸಿಯ ಷೇರು ಮೌಲ್ಯ ಕುಸಿದ ಸಂದರ್ಭದಲ್ಲಿ ತನ್ನ ಪಾಲನ್ನು ಚೀನಾದ ಬ್ಯಾಂಕ್‌ ಇತ್ತೀಚೆಗೆ ಹೆಚ್ಚಿಸಿಕೊಂಡಿದೆ.  

ಸದ್ಯದ ಮಟ್ಟಿಗೆ, ನೇರವಾದ ಎಫ್‌ಡಿಐಯನ್ನು ರದ್ದು ಮಾಡಬೇಕು ಎಂದು ಸಣ್ಣ ಮತ್ತು ಮಧ್ಯಮ ಗಾತ್ರದ ಹಲವು ಕಂಪೆನಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. 

ಪೂರೈಕೆಗೆ ಹೊಡೆತ: ನೀತಿ ಆಯೋಗ

‘ಲಾಕ್‌ಡೌನ್‌ನಿಂದಾಗಿ ದೇಶದ ಪೂರೈಕೆ ವ್ಯವಸ್ಥೆ ಮೇಲೆ ತೀವ್ರ ತರದ ಅಡ್ಡಿಯುಂಟಾಗಿದೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ತಿಳಿಸಿದ್ದಾರೆ. ‘ಕೋವಿಡ್‌–19 ಆ್ಯಂಡ್‌ ದಿ ಫ್ಯೂಚರ್‌ ಆಫ್‌ ವರ್ಕ್‌’ ವಿಷಯದ ಕುರಿತು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ‘ಈ ಮಹಾಮಾರಿಯು ಅತ್ಯಂತ ಜಟಿಲ ಮತ್ತು ಊಹಿಸಲು ಸಾಧ್ಯವಾಗದ ಸವಾಲನ್ನು ಸೃಷ್ಟಿಸಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೆರೆಯವರ ಹೂಡಿಕೆ

₹14,846 ಕೋಟಿ

ಚೀನಾ

₹48 ಲಕ್ಷ

ಬಾಂಗ್ಲಾದೇಶ

₹18.18 ಕೋಟಿ

ನೇಪಾಳ

₹35.78 ಕೋಟಿ

ಮ್ಯಾನ್ಮಾರ್‌

₹16.42 ಕೋಟಿ

ಅಫ್ಗಾನಿಸ್ತಾನ

ಅವಧಿ: ಏಪ್ರಿಲ್‌ 2000ದಿಂದ ಡಿಸೆಂಬರ್‌ 2019

ಪಾಕಿಸ್ತಾನ ಮತ್ತು ಭೂತಾನ್‌ನ ಹೂಡಿಕೆ ಇಲ್ಲ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು