ಬುಧವಾರ, 27 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ, ರಾಜಕೀಯ ಮುಖಂಡರ ಮೊರೆಗೆ ಚಿಂತನೆ

ಕೋವಿಡ್‌–19: ನಗರಗಳ ಕಂಟೈನ್‌ಮೆಂಟ್‌ ನಿವಾಸಿಗಳಲ್ಲಿ ಅರಿವು ಮೂಡಿಸುವ ಗುರಿ
Last Updated 17 ಮೇ 2020, 23:02 IST
ಅಕ್ಷರ ಗಾತ್ರ

ನವದೆಹಲಿ: ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ದೇಶದ 30 ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಕೋವಿಡ್‌–19 ಕುರಿತಂತೆ ಅರಿವು ಮೂಡಿಸಲು ಧಾರ್ಮಿಕ ಮತ್ತು ರಾಜಕೀಯ ಮುಖಂಡರ ನೆರವು ಪಡೆಯುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಈ ಸಂಬಂಧ ಆರೋಗ್ಯ ಸಚಿವಾಲಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಸ್ಥಳೀಯ ರಾಜಕೀಯ ಹಾಗೂ ಧಾರ್ಮಿಕ ಮುಖಂಡರ ಮಾತುಗಳ ಮೇಲೆ ಈ ಜನರಲ್ಲಿ ವಿಶ್ವಾಸ ಹೆಚ್ಚು. ಕೊರೊನಾ ವೈರಸ್‌ ಸೋಂಕು ಪ್ರಸರಣ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳನ್ನು ಇಂತಹ ಮುಖಂಡರು ಈ ಸಮುದಾಯಕ್ಕೆ ಮನದಟ್ಟು ಮಾಡಬಲ್ಲರು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ನಗರ ಪ್ರದೇಶಗಳಲ್ಲಿ ಬಡವರೇ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಅಷ್ಟಾಗಿ ಇರುವುದಿಲ್ಲ. ಚಿಕ್ಕ ಜಾಗದಲ್ಲಿ ಹೆಚ್ಚು ಜನರು ಜೀವನ ಸಾಗಿಸುತ್ತಿರುವ ಕಾರಣ, ಕೋವಿಡ್‌–19 ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳುವುದು, ಐಸೋಲೇಷನ್‌ಗೆ ಒಳಪಡಿಸುವುದು ಸವಾಲಿನ ಕೆಲಸವಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಇಂತಹ ಪ್ರದೇಶಗಳಿಗೆ ಒಬ್ಬರಂತೆ ಮುಖಂಡನನ್ನು ಗುರುತಿಸಬೇಕು. ‘ಇನ್ಸಿಡೆಂಟ್‌ ಕಮಾಂಡರ್‌’ ಎಂದು ಕರೆಯಲಾಗುವ ಈ ವ್ಯಕ್ತಿ, ಜನರಲ್ಲಿ ಅರಿವು ಮೂಡಿಸುವ ಕಾರ್ಯದ ಕ್ರಿಯಾಯೋಜನೆ, ಅದರ ಅನುಷ್ಠಾನ, ಹಣಕಾಸು ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಬೇಕು. ಯೋಜನೆಯ ಅನುಷ್ಠಾನ ಕುರಿತಂತೆ ಈ ‘ಇನ್ಸಿಡೆಂಟ್‌ ಕಮಾಂಡರ್‌’ ನಗರಸಭೆ/ಪಾಲಿಕೆಯ ಆಯುಕ್ತರಿಗೆ ವರದಿ ಸಲ್ಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಮುಂಬೈ, ಪುಣೆ, ಜೈಪುರ, ಗ್ರೇಟರ್‌ ಚೆನ್ನೈ, ದೆಹಲಿಯ ಎಲ್ಲಾ ನಗರಸಭೆಗಳ ವ್ಯಾಪ್ತಿ, ಹೈದರಾಬಾದ್‌, ಸೊಲ್ಲಾಪುರ ಹಾಗೂ ಮೀರತ್‌ ಸೇರಿದಂತೆ ಒಟ್ಟು 30 ಪ್ರದೇಶಗಳನ್ನು ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT