ಮಂಗಳವಾರ, ಮಾರ್ಚ್ 2, 2021
24 °C

64 ವಿಮಾನಗಳಲ್ಲಿ 15 ಸಾವಿರ ಭಾರತೀಯರು ತಾಯ್ನಾಡಿಗೆ: ಪುರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ/ಕೊಚ್ಚಿ: ವಿದೇಶದಲ್ಲಿ ಸಿಲುಕಿರುವ 15 ಸಾವಿರಕ್ಕೂ ಅಧಿಕ ಭಾರತೀಯರನ್ನು ಏರ್‌ ಇಂಡಿಯಾದ 64 ವಿಮಾನಗಳಲ್ಲಿ ವಾಪಸ್‌‌ ಕರೆತರಲಾಗುವುದು. ಮೇ 7ರಿಂದ ಮೇ 13ರವರೆಗೆ ಈ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮಂಗಳವಾರ ತಿಳಿಸಿದರು. 

‘ವಂದೇ ಭಾರತ್‌ ಮಿಷನ್‌’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಯಲಿದೆ. ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪುರಿ, ‘ಮೇ 13ರ ನಂತರ ಭಾರತದ ಖಾಸಗಿ ಏರ್‌ಲೈನ್ಸ್‌ಗಳೂ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನಕ್ಕೆ ಕೈಜೋಡಿಸಬಹುದು’ ಎಂದರು.

ಪ್ರಯಾಣಿಕರೇ ಹಣ ಪಾವತಿಸಬೇಕು: ‘ವಿಮಾನ ಪ್ರಯಾಣ ದರವನ್ನು ಪ್ರಯಾಣಿಕರೇ ಪಾವತಿಸಬೇಕು. ಲಂಡನ್‌ನಿಂದ ದೆಹಲಿಗೆ ಪ್ರಯಾಣಕ್ಕೆ ₹50 ಸಾವಿರ ಹಾಗೂ ಢಾಕಾದಿಂದ ದೆಹಲಿ ಪ್ರಯಾಣಕ್ಕೆ ₹12 ಸಾವಿರ ನಿಗದಿಪಡಿಸಲಾಗಿದೆ’ ಎಂದರು. 

‘ಭಾರತಕ್ಕೆ ಬಂದ ನಂತರ ಅವರ ಆರೋಗ್ಯ ತಪಾಸಣೆ ನಡೆಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಅವರು 14 ದಿನ ಕ್ವಾರಂಟೈನ್‌ನಲ್ಲಿ ಇರಬೇಕು’ ಎಂದು ಪುರಿ ತಿಳಿಸಿದರು. 

ನೌಕಾಪಡೆಯ ಮೂರು ಹಡಗುಗಳು: ‘ಸಮುದ್ರ ಸೇತು’ ಕಾರ್ಯಾಚರಣೆಯಡಿ ಮಾಲ್ಡೀವ್ಸ್‌ ಹಾಗೂ ಯುಎಇಯಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ನೌಕಾಪಡೆಯ ಮೂರು ಹಡಗುಗಳನ್ನು ಮಾಲ್ಡೀವ್ಸ್‌, ಯುಎಇಗೆ ಕಳುಹಿಸಲಾಗಿದೆ ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ತಿಳಿಸಿದರು. 

ಮುಂಬೈ ಕರಾವಳಿಯಿಂದ ಐಎನ್‌ಎಸ್‌ ಜಲಾಶ್ವ, ಐಎನ್‌ಎಸ್‌ ಮಗರ್‌ ಮಾಲ್ಡೀವ್ಸ್‌ಗೆ, ಐಎನ್‌ಎಸ್‌ ಶಾರ್ದುಲ್‌ ದುಬೈಗೆ ತೆರಳಿದೆ. ಮೂರೂ ಹಡಗುಗಳು ಕೊಚ್ಚಿಗೆ ಆಗಮಿಸಲಿದ್ದು, ಒಂದು ಸಾವಿರ ಜನರು ಇದರಲ್ಲಿ ಆಗಮಿಸಲಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು