ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ನಾಡಲ್ಲಿ ಹೋರಾಡಿ ಗೆದ್ದ ಹೇಮಂತ್‌

HEMANT SOREN, SHIBU SOREN, JARKHAND
Last Updated 29 ಡಿಸೆಂಬರ್ 2019, 22:01 IST
ಅಕ್ಷರ ಗಾತ್ರ

ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಕಳೆದ ಸೋಮವಾರ ಪ್ರಕಟವಾಗಿ, ಜಾರ್ಖಂಡ್‌ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬಂದಾಗ, ತಮ್ಮ ಮನೆಯ ಅಂಗಳದಲ್ಲಿ ಹಲವು ಸುತ್ತು ಸೈಕಲ್‌ ಸವಾರಿ ನಡೆಸುವ ಮೂಲಕ ಈ ಗೆಲುವನ್ನು ಹೇಮಂತ್‌ ಸೊರೇನ್‌ ಸಂಭ್ರಮಿಸಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ ಗೆಲುವಿನ ರೂವಾರಿ ಹೇಮಂತ್‌ ಅವರೇ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಈ ಮೈತ್ರಿಕೂಟಕ್ಕೆ ಹುರುಪು ತುಂಬುವ ಕೆಲಸವನ್ನು 44 ವರ್ಷ ವಯಸ್ಸಿನ ಹೇಮಂತ್‌ ಮಾಡಿದ್ದಾರೆ.

ಚುನಾವಣೆಗೆ ಸಾಕಷ್ಟು ಮೊದಲೇ ಅವರು ಸಿದ್ಧತೆ ಆರಂಭಿಸಿದ್ದರು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ, ಟಾಟಾ ಇನ್ಸ್‌ಟಿಟ್ಯೂಟ್‌ ಆಫ್‌ ಸೋಷಿಯಲ್‌ ಸೈನ್ಸ್‌ ಮತ್ತು ಇತರ ಉನ್ನತ ಸಂಸ್ಥೆಗಳ ಪರಿಣತರ ತಂಡವೊಂದನ್ನು ತಂದು ಪ್ರಚಾರದ ಕಾರ್ಯತಂತ್ರವನ್ನು ರೂಪಿಸಿದ್ದರು. ಎರಡು ತಿಂಗಳ ‘ಬದ್ಲಾವ್‌ ಯಾತ್ರಾ’ ಅಕ್ಟೋಬರ್‌ 19ರಂದು ರಾಂಚಿಯಲ್ಲಿ ಸಮಾರೋಪಗೊಂಡಿತ್ತು. ಈ ಯಾತ್ರೆಯ ಕಾರ್ಯತಂತ್ರ ಸ್ಪಷ್ಟವಾಗಿತ್ತು. ಗುರಿ ನಿಖರವಾಗಿತ್ತು. ಸ್ಥಳೀಯ ವಿಚಾರಗಳೇ ಹೇಮಂತ್‌ ಭಾಷಣಗಳ ತಿರುಳಾಗಿದ್ದವು.28 ದಿನಗಳ ಚುನಾವಣಾ ಪ್ರಚಾರದಲ್ಲಿ ಅವರು 165 ರ್‍ಯಾಲಿಗಳನ್ನು ನಡೆಸಿದ್ದಾರೆ.

ಚುನಾವಣಾ ಪ್ರಚಾರ ಸಂದರ್ಭದಲ್ಲಿ, ಸಾಮಾಜಿಕ ಜಾಲ ತಾಣಗಳ ನಿರ್ವಹಣೆಗೆ ಅತ್ಯಂತ ಕ್ರಿಯಾಶೀಲಯವಾದ ತಂಡವೊಂದನ್ನು ಅವರು ಕಟ್ಟಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ, ಚುನಾವಣೆಯನ್ನು ಅಧ್ಯಕ್ಷೀಯ ಮಾದರಿಯ ಹಣಾಹಣಿಯಾಗಿಸುವಲ್ಲಿಯೂ ಹೇಮಂತ್‌ ಯಶಸ್ವಿಯಾಗಿದ್ದರು. ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ರಘುವರ್ ದಾಸ್‌ ಅವರು ‘ಜನರಿಂದ ದೂರ ಇರುವವರು’, ಆದರೆ ತಾವು ‘ಜನಸ್ನೇಹಿ’ ಎಂಬುದನ್ನು ಬಿಂಬಿಸಲು ನಿರಂತರವಾಗಿ ಶ್ರಮಿಸಿದರು. ಗೆದ್ದಾಗ ನಡೆಸಿದ ಸೈಕಲ್‌ ಸವಾರಿ ಕೂಡ ಈ ಸಂದೇಶವನ್ನು ಇನ್ನಷ್ಟು ಗಟ್ಟಿಗೊಳಿಸುವ ಉದ್ದೇಶವನ್ನೇ ಹೊಂದಿದ್ದಂತೆ ಕಾಣಿಸುತ್ತದೆ.

ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶಿಬು ಸೊರೇನ್‌ ಅವರ ನಾಲ್ಕು ಮಕ್ಕಳಲ್ಲಿ ಹೇಮಂತ್‌ ಎರಡನೆಯವರು. 1975ರಲ್ಲಿ ಹುಟ್ಟಿದ ಅವರು ತಮ್ಮ ತಂದೆಯ ಜತೆಗೆ ಸಾರ್ವಜನಿಕವಾಗಿ ಮೊದಲು ಕಾಣಿಸಿಕೊಂಡಿದ್ದು 2004ರಲ್ಲಿ.

ದೊಡ್ಡ ಮಗ ದುರ್ಗಾ ಸೊರೇನ್‌ ಅವರನ್ನು ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬೆಳೆಸಬೇಕು ಎಂಬ ಆಕಾಂಕ್ಷೆ ಶಿಬು ಅವರಿಗೆ ಇತ್ತು. ಆದರೆ, ದುರ್ಗಾ ಅವರು ಅನಾರೋಗ್ಯದಿಂದಾಗಿ 2009ರಲ್ಲಿ ಅಕಾಲ ಮರಣಕ್ಕೀಡಾದರು. ಅದೇ ಸಂದರ್ಭದಲ್ಲಿ, ಚಿರುಡೀಹ್‌ ನರಹತ್ಯೆ ಪ್ರಕರಣದಲ್ಲಿ ಶಿಬು ಅವರು ಶಿಕ್ಷೆಗೊಳಗಾದರು. ಅಂತಹ ಸಂಕಷ್ಟದ ಸಂದರ್ಭದಲ್ಲಿ ತಂದೆಯ ಜತೆಗೆ ಹೇಮಂತ್‌ ಗಟ್ಟಿಯಾಗಿ ನಿಂತರು. ಜೆಎಂಎಂ ಅನ್ನು ಬೆಳೆಸುವ ಹೊಣೆಯನ್ನು ಹೊತ್ತುಕೊಂಡರು.

2005ರ ವಿಧಾನಸಭಾ ಚುನಾವಣೆಯಲ್ಲಿ ದುಮಕಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತರೂ, 2009ರಲ್ಲಿ ಅದೇ ಕ್ಷೇತ್ರದಲ್ಲಿ ಗೆದ್ದರು. 2009–10ರಲ್ಲಿ ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು. 2010ರಲ್ಲಿ, ಬಿಜೆಪಿಯ ಅರ್ಜುನ್‌ ಮುಂಡಾ ನೇತೃತ್ವದ ಜಾರ್ಖಂಡ್‌ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು. ಬಳಿಕ, ಬಿಜೆಪಿಗೆ ನೀಡಿದ್ದ ಬೆಂಬಲ ಹಿಂದಕ್ಕೆ ಪಡೆದು ಸರ್ಕಾರವನ್ನು ಬೀಳಿಸಿದರು. 2013ರ ಜುಲೈನಲ್ಲಿ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಬೆಂಬಲದಲ್ಲಿ ಜಾರ್ಖಂಡ್‌ನ ಮುಖ್ಯಮಂತ್ರಿಯೂ ಆದರು. ಜಾರ್ಖಂಡ್‌ನ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾದರು. ಆದರೆ, 2014ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ 19 ಕ್ಷೇತ್ರಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಯಿತು.

ಶಿಬು ಅವರು ಹಿನ್ನೆಲೆಗೆ ಸರಿದ ನಂತರ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಹೇಮಂತ್‌ಗೆ ಸುಲಭವಾಗಿರಲಿಲ್ಲ. ಹಿರಿಯ ಮುಖಂಡರಾದ ಸ್ಟೀಫನ್‌ ಮರಾಂಡಿ, ಸೈಮನ್‌ ಮರಾಂಡಿ ಮತ್ತು ಹೇಮಲಾಲ್‌ ಮುರ್ಮು ಅವರ ಪ್ರತಿರೋಧವನ್ನು ಎದುರಿಸಬೇಕಾಯಿತು. ಈ ಎಲ್ಲರೂ ಜೆಎಂಎಂ ಬಿಟ್ಟು ಹೋದರು. ಮುರ್ಮು ಮತ್ತು ಸೈಮನ್‌ ಅವರು ಬಿಜೆಪಿ ಸೇರಿದರೆ, ಸ್ಟೀಫನ್‌ ಅವರು ಬಾಬುಲಾಲ್‌ ಮರಾಂಡಿ ಜತೆಗೂಡಿ ಹೊಸ ಪಕ್ಷ ಕಟ್ಟಿದರು. ಬಾಬುಲಾಲ್‌ ಮರಾಂಡಿ ಜಾರ್ಖಂಡ್‌ನ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದವರು. ಸ್ಟೀಫನ್‌ ಅವರು ಹೇಮಂತ್‌ ನಾಯಕತ್ವವನ್ನು ಒಪ್ಪಿಕೊಂಡು ಜೆಎಂಎಂಗೆ ಮರಳಿದ್ದಾರೆ.

ಜೆಎಂಎಂನದ್ದು ಕುಟುಂಬ ರಾಜಕಾರಣ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರಿ ಅಂಜಲಿಗೆ ಒಡಿಶಾದ ಮಯೂರ್‌ಭಂಜ್‌ನಿಂದ ಹೇಮಂತ್‌ ಟಿಕೆಟ್‌ ನೀಡಿದ್ದನ್ನೂ ಬಿಜೆಪಿ ಟೀಕಿಸಿತ್ತು. ಜತೆಗೆ, ಛೋಟಾನಾಗಪುರ ಒಕ್ಕಲುತನ ಕಾಯ್ದೆ ಮತ್ತು ಸಂತಾಲ್‌ ಪರಗಣ ಒಕ್ಕಲುತನ ಕಾಯ್ದೆಗಳನ್ನು (ಬುಡಕಟ್ಟು ಜನರ ಜಮೀನನ್ನು ಬೇರೆಯವರಿಗೆ ನೀಡುವುದನ್ನು ತಡೆಯುವ ಕಾಯ್ದೆ) ಹೇಮಂತ್‌ ಅವರ ಕುಟುಂಬ ಉಲ್ಲಂಘಿಸಿದೆ ಎಂದು ಆರೋಪಿಸಿತ್ತು. ಈ ಟೀಕೆಗಳನ್ನು ಅವರು ಸಂಯಮದಿಂದಲೇ ಎದುರಿಸಿದರು. ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಜತೆಗೆ ಗಟ್ಟಿಯಾದ ಮೈತ್ರಿಕೂಟ ಕಟ್ಟಿಕೊಂಡರು. ಇದು ಚುನಾವಣೆಯಲ್ಲಿ ಫಲ ನೀಡಿತು.

81 ಸದಸ್ಯಬಲದ ವಿಧಾನಸಭೆಯಲ್ಲಿ ಮೈತ್ರಿಕೂಟಕ್ಕೆ 47 ಶಾಸಕರ ಬೆಂಬಲ ಇದೆ. ಹಾಗಾಗಿ ರಾಜಕೀಯ ಸ್ಥಿರತೆ ಸಾಧ್ಯವಾಗಬಹುದು. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯು ಸಮರ್ಪಕವಾಗಿಲ್ಲ. ಅದರ ಬದಲಿಗೆ, ವಸತಿರಹಿತರಿಗೆ ₹3 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಹೇಮಂತ್‌ ಭರವಸೆ ಕೊಟ್ಟಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಭರವಸೆಯು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಇತ್ತು. ಮೂರೂ ಪಕ್ಷಗಳು ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವುದು ಹೇಮಂತ್‌ ಮುಂದಿರುವ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT