ಸೋಮವಾರ, ಜೂನ್ 1, 2020
27 °C

ತಬ್ಲಿಗಿ ಜಮಾತ್: ಸದಸ್ಯರು, ಸಂಪರ್ಕದಲ್ಲಿದ್ದ 22 ಸಾವಿರ ಮಂದಿಗೆ ಕ್ವಾರಂಟೈನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ತಬ್ಲಿಗಿ ಜಮಾತ್ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿದ್ದ 22 ಸಾವಿರ ಮಂದಿಯನ್ನು ದೇಶದಾದ್ಯಂತ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.

ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲ ಶ್ರೀವಾಸ್ತವ ಈ ಸಂಬಂಧ ಶನಿವಾರ ಸುದ್ದಿಗಾರರಿಗೆ ವಿವರ ನೀಡಿ, ಇದೊಂದು ಒಗ್ಗಟ್ಟಿನಿಂದ ಶ್ರಮಿಸಿದ ಫಲ. ಈ ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಸಹಕಾರದಿಂದ ನಡೆಸಿದೆ. ಎಲ್ಲಾ ಜಮಾತ್‌‌ನ ಸದಸ್ಯರು ಹಾಗೂ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪತ್ತೆ ಹಚ್ಚಲಾಗಿದೆ. ಅವರನ್ನೆಲ್ಲಾ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

ಗೃಹ ಇಲಾಖೆ ದಿನದ 24 ಗಂಟೆಗಳ ಕಾಲ ನಿಯಂತ್ರಣ ಕೊಠಡಿಯನ್ನು ತೆರೆದು ಲಾಕ್ ಡೌನ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 200ಕ್ಕೂ ಹೆಚ್ಚು ಮಂದಿ ಸ್ಥಳೀಯ ಮಟ್ಟದಲ್ಲಿ ಶ್ರಮಿಸುತ್ತಿದ್ದಾರೆ ಎಂದು ಪುಣ್ಯ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಇಬ್ಬರಿಗೆ ಸೋಂಕು

ಈ ಮಧ್ಯೆ ದೆಹಲಿಯಲ್ಲಿ ನಡೆದ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜಸ್ಥಾನದ ಇಬ್ಬರು ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ರಾಜಸ್ಥಾನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

21 ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಅವರಲ್ಲಿ 10 ಮಂದಿ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರು ಎಂಬುದು ಪತ್ತೆಯಾಗಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 200ಕ್ಕೆ ಏರಿದೆ ಎಂದು ಇಲಾಖೆ ಪ್ರಕಟಿಸಿದೆ ಎಂದು ಎಎನ್ಐ ತಿಳಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು