ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ವೇದ ಶಿಕ್ಷಣಕ್ಕೂ ಸಿಗಲಿದೆ ಪ್ರೌಢ, ಪದವಿಪೂರ್ವ ಪ್ರಮಾಣ ಪತ್ರ

ಭಾರತದ ಪ್ರಾಚೀನ ಶಿಕ್ಷಣ ವ್ಯವಸ್ಥೆ ಉತ್ತೇಜಿಸಲು ಕೇಂದ್ರ ಸರ್ಕಾರದ ಕ್ರಮ
Last Updated 25 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಮುಕ್ತ ಶೈಕ್ಷಣಿಕ ಸಂಸ್ಥೆ (ಎನ್‌ಐಒಎಸ್‌)ಯು ವೇದ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣ ಪತ್ರವನ್ನು ನೀಡಲಿದೆ.

ಮಾನವ ಸಂಪನ್ಮೂಲ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ಎನ್‌ಐಒಎಸ್‌, ಸಂಸ್ಕೃತ ಮಾಧ್ಯಮದಲ್ಲಿ ವೇದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಪ್ರಮಾಣ ಪತ್ರ ನೀಡಲಿದೆ. ಸರ್ಕಾರಗಳು ಸದ್ಯ ನೀಡುತ್ತಿರುವ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪ್ರಮಾಣಪತ್ರಕ್ಕೆ ಇದು ಸಮಾನವಾಗಿರಲಿದೆ.

'ಭಾರತೀಯ ಜ್ಞಾನ ಪರಂಪರೆ ನಿಕಾಯದ ಅಡಿ ಈ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಸದ್ಯ ದೇಶದಾದ್ಯಂತ ಕನಿಷ್ಠ 6 ಸಾವಿರ ವೇದ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ’ ಎಂದುಎನ್‌ಐಒಎಸ್‌ ಮುಖ್ಯಸ್ಥ ಚಂದ್ರಭೂಷಣ್‌ ತಿಳಿಸಿದ್ದಾರೆ.

‘ಕೆಲವು ವೇದ ಶಾಲೆಗಳಲ್ಲಿ ಮುಕ್ತ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕ್ರಮೇಣ ಉಳಿದ ಶಾಲೆಗಳಲ್ಲಿಯೂ ಇಂತಹ ಕೇಂದ್ರ ತೆರೆಯಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಒಂದು ಸಾವಿರ ವಿದ್ಯಾರ್ಥಿಗಳು ವೇದ ಶಿಕ್ಷಣ ಅಭ್ಯಾಸಕ್ಕೆ ಹೆಸರು ನೋಂದಾಯಿಸಿದ್ದಾರೆ. ಒಂದು ವರ್ಷದ ಕೋರ್ಸ್‌ ಎಸ್ಸೆಸ್ಸೆಲ್ಸಿ ಮಟ್ಟದ್ದಾಗಿದ್ದರೆ, ಎರಡು ವರ್ಷದ ಕೋರ್ಸ್‌ ಪಿಯುಸಿ ಮಟ್ಟದ್ದಾಗಿರುತ್ತದೆ.

2014ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವೇದ ಶಿಕ್ಷಣ ಮಂಡಳಿ ಸ್ಥಾಪಿಸಿ, ವೇದ ಶಾಲೆಗಳನ್ನು ಅವುಗಳ ವ್ಯಾಪ್ತಿಗೆ ತಂದು, ಎಲ್ಲ ಪರೀಕ್ಷಾ ಮಂಡಳಿಗಳಂತೆ ಈ ಮಂಡಳಿಗೂ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಇತ್ತು. ಸಿಬಿಎಸ್‌ಇ ಮಾದರಿಯಲ್ಲಿ ವೇದ ಶಿಕ್ಷಣ ಮಂಡಳಿ ಸ್ಥಾಪಿಸುವಂತೆ 2015ರಲ್ಲಿ ಯೋಗಗುರು ಬಾಬಾ ರಾಮದೇವ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಮಾನವ ಸಂಪನ್ಮೂಲ ಸಚಿವಾಲಯ ಆಗ ಈ ಪ್ರಸ್ತಾವವನ್ನು ತಿರಸ್ಕರಿಸಿತ್ತು.

ಐದು ಕೋರ್ಸ್‌ಗಳು

‘ಭಾರತೀಯ ಜ್ಞಾನ ಪರಂಪರೆ’ ನಿಕಾಯದಡಿ ಐದು ಕೋರ್ಸ್‌ಗಳನ್ನು ಎನ್‌ಐಒಎಸ್‌ ರೂಪಿಸಿದೆ. ವೇದ ಅಧ್ಯಯನ, ಭಾರತೀಯ ತತ್ವಶಾಸ್ತ್ರ, ಸಂಸ್ಕೃತ ವ್ಯಾಕರಣ, ಸಂಸ್ಕೃತ ಸಾಹಿತ್ಯ ಮತ್ತು ಸಂಸ್ಕೃತಕ್ಕೆ ಸಂಬಂಧಿಸಿದ ವಿಷಯಗಳನ್ನು ಈ ಕೋರ್ಸ್‌ಗಳು ಒಳಗೊಳ್ಳಲಿವೆ.

ಇದರ ಜೊತೆಗೆ ಆಯುರ್ವೇದ ವಿಜ್ಞಾನ, ಅನ್ವಯಿಕ ಸಂಸ್ಕೃತ ವ್ಯಾಕರಣ, ವೇದಪಾಠ, ನ್ಯಾಯಶಾಸ್ತ್ರ, ಜ್ಯೋತಿಷ ಶಾಸ್ತ್ರ ವಿಷಯಗಳನ್ನೊಳಗೊಂಡ ಕೋರ್ಸ್‌ಗಳನ್ನು ಪ್ರಾರಂಭಿಸುವ ಉದ್ದೇಶವೂ ಇದೆ ಎಂದು ಚಂದ್ರಭೂಷಣ್‌ ತಿಳಿಸಿದ್ದಾರೆ.

***

ಭಾರತದ ಪ್ರಾಚೀನ ಶೈಕ್ಷಣಿಕ ಪದ್ಧತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಅಧಿಕೃತ ಪ್ರಮಾಣಪತ್ರಗಳನ್ನು ನೀಡಲಿದೆ.

– ಚಂದ್ರಭೂಷಣ್‌, ಎನ್‌ಐಒಎಸ್‌ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT