ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಜಾಸ್ತಿ ಈರುಳ್ಳಿ ತಿನ್ನುವುದಿಲ್ಲ: ನಿರ್ಮಲಾ ಸೀತಾರಾಮನ್

Last Updated 5 ಡಿಸೆಂಬರ್ 2019, 5:09 IST
ಅಕ್ಷರ ಗಾತ್ರ

ನವದೆಹಲಿ: ಈರುಳ್ಳಿ ಬೆಲೆ ಹೆಚ್ಚಳದ ಕುರಿತು ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, 'ಈರುಳ್ಳಿಯನ್ನು ನಾನು ಹೆಚ್ಚು ತಿನ್ನುವುದಿಲ್ಲ' ಮತ್ತು 'ಅಡುಗೆಗೆ ಕಡಿಮೆ ಈರುಳ್ಳಿ ಬಳಸುವ ಕುಟುಂಬಕ್ಕೆ ಸೇರಿದ್ದೇನೆ' ಎಂದು ಹೇಳಿದ್ದಾರೆ.

ಈರುಳ್ಳಿ ಬೆಲೆಯೇರಿಕೆಯ ಕುರಿತು ಲೋಕಸಭೆಯಲ್ಲಿ ಮಾತನಾಡುವ ವೇಳೆ ಕೆಲವು ವಿರೋಧ ಪಕ್ಷದ ಸದಸ್ಯರು ಮಾಡಿದ ಅಡೆತಡೆಗಳಿಗೆ ಪ್ರತಿಕ್ರಿಯಿಸಿ, ಹೆಚ್ಚಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ನಾನು ತಿನ್ನುವುದಿಲ್ಲ. ಹಾಗಾಗಿ ಚಿಂತಿಸಬೇಡಿ. 'ನಾನು ಈರುಳ್ಳಿಯನ್ನು ಹೆಚ್ಚಾಗಿ ಬಳಸದ ಕುಟುಂಬದಿಂದ ಬಂದಿದ್ದೇನೆ' ಎಂದು ಹೇಳಿದರು. ನಿರ್ಮಲಾರ ಈ ಹೇಳಿಕೆಯು ಸದನವನ್ನು ನಗೆ ಕಡಲಲ್ಲಿ ತೇಲಿಸಿತು.ಇದೇ ವೇಳೆ ಸಂಸದರೊಬ್ಬರು ಹೆಚ್ಚು ಈರುಳ್ಳಿ ತಿನ್ನುವುದು ಒಬ್ಬರನ್ನು ಕೆರಳಿಸುವಂತೆ ಮಾಡುತ್ತದೆ ಎಂದು ಹೇಳಿದರು.

ದೇಶದಲ್ಲಿ ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕೈಗೊಂಡ ವಿವಿಧ ಕ್ರಮಗಳನ್ನು ವಿತ್ತ ಸಚಿವರು ಪಟ್ಟಿ ಮಾಡುತ್ತಿದ್ದ ವೇಳೆ ಈ ಮಾತುಕತೆ ನಡೆಯಿತು. ರಫ್ತು ನಿಷೇಧ ಹೇರುವುದು, ಸಂಗ್ರಹ ಮಿತಿಯನ್ನು ಜಾರಿಗೊಳಿಸುವುದು, ವಿದೇಶದಿಂದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮತ್ತು ಹೆಚ್ಚುವರಿಯಾಗಿರುವ ಈರುಳ್ಳಿಯನ್ನು ದೇಶದೊಳಗೆ ಕೊರತೆ ಇರುವ ಪ್ರದೇಶಗಳಿಗೆ ವರ್ಗಾಯಿಸುವ ಕ್ರಮಗಳನ್ನು ಹೇಳಿದರು.

ಲಾಭ ನೇರ ವರ್ಗಾವಣೆ ಯೋಜನೆ ಮೂಲಕ ಸರ್ಕಾರವು ಎಲ್ಲಾ ಲೋಪದೋಷಗಳನ್ನು ಸರಿಪಡಿಸಿದೆ. ಮಧ್ಯವರ್ತಿಗಳನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮಾತನಾಡಿ, ಈರುಳ್ಳಿ ಸಮಸ್ಯೆಯನ್ನು ಸರ್ಕಾರ ಹಲವಾರು ವಾರಗಳಿಂದ ಗಮನ ಹರಿಸದೆ ಬಿಟ್ಟಿದೆ. 'ಆರ್ಥಿಕ ಪರಿಸ್ಥಿತಿಯಿಂದ ಹಿಡಿದು ಜಮ್ಮು ಮತ್ತು ಕಾಶ್ಮೀರ ಮತ್ತು ರೈತರ ಸಂಕಷ್ಟದವರೆಗೆ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೆ ಅಂತಹ ಪ್ರಶ್ನೆಗಳಿಂದ ಪಾರಾಗಲು ಯತ್ನಿಸುತ್ತಿದೆ. ಸಂಸತ್ತಿನಲ್ಲಿ ನಾವು ಈರುಳ್ಳಿ ಸಮಸ್ಯೆಯನ್ನು ಎತ್ತಲು ಪ್ರಯತ್ನಿಸಿದರೆ ಅವರು ನಮ್ಮನ್ನು ಅದರಿಂದ ತಡೆಯುತ್ತಾರೆ ಎಂದು ದೂರಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಿದರು.

ಇಡೀ ದೇಶದಾದ್ಯಂತ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹ 100 ರಿಂದ ₹ 110 ಗಳಿಗೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT