ಗುರುವಾರ , ಸೆಪ್ಟೆಂಬರ್ 23, 2021
21 °C

ಪಾಕ್ ಮೂಲಕ ಭಾರತ ಗಡಿ ಪ್ರವೇಶಿಸಿದ ವಿಮಾನ: ಬಲವಂತವಾಗಿ ಇಳಿಸಿದ ವಾಯುಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಜಾರ್ಜಿಯಾದ ಸರಕು ಸಾಗಣೆ ವಿಮಾನ ‘ಆಂಟೊನೊವ್ ಎಎನ್‌–12’ ಪಾಕಿಸ್ತಾನದ ಮೂಲಕ ಭಾರತ ಗಡಿ ಪ್ರವೇಶಿಸಿದ್ದು, ಭಾರತೀಯ ವಾಯುಪಡೆ ಅದನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಲವಂತವಾಗಿ ಇಳಿಸಿದೆ.

ಜಾರ್ಜಿಯಾ ವಿಮಾನ ಅಧಿಕೃತ ವಾಯುಮಾರ್ಗವನ್ನು ಬಳಸದೆ ಶುಕ್ರವಾರ ಸಂಜೆ 3.15ಕ್ಕೆ ಉತ್ತರ ಗುಜರಾತ್ ಪ್ರದೇಶದಲ್ಲಿ ಭಾರತ ಪ್ರವೇಶಿಸಿತ್ತು. ಇಲ್ಲಿನ ವಿಮಾನ ನಿಯಂತ್ರಣ ಏಜೆನ್ಸಿಗಳ ಕರೆಗಳಿಗೂ ಸರಿಯಾಗಿ ಉತ್ತರಿಸಲಿಲ್ಲ. ತಕ್ಷಣವೇ ಕಾರ್ಯಪ್ರವೃತ್ತವಾದ ವಾಯುಪಡೆ ಎರಡು ‘ಸುಖೋಯ್ 30’ ಯುದ್ಧವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿತು. 27,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು ಜೈಪುರದಲ್ಲಿ ಇಳಿಯುವಂತೆ ಮಾಡಲಾಯಿತು. ಕೂಡಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ವಿಮಾನವನ್ನು ಸುತ್ತುವರಿದರು.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ವೈಮಾನಿಕ ದಾಳಿ ನಡೆಸಿದ ಬಳಿಕ ದೇಶದ ವಾಯು ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಾರ್ಜಿಯಾದ ವಿಮಾನ ಆಗಮಿಸಿದ ವಾಯುಮಾರ್ಗವನ್ನು ಮುಚ್ಚಲಾಗಿದೆ. ಹೀಗಾಗಿ ಆ ಪ್ರದೇಶದಲ್ಲಿ ವಿಮಾನವು ದೇಶದ ಗಡಿ ಪ್ರವೇಶಿಸಿದಾಗ ಯುದ್ಧವಿಮಾನಗಳನ್ನು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ವಾಯುಪಡೆ ಮೂಲಗಳು ತಿಳಿಸಿವೆ.

ವಿಮಾನವು ಜಾರ್ಜಿಯಾದ ಟಬೆಲೀಸಿಯಿಂದ ಕರಾಚಿ ಮೂಲಕ ನವದೆಹಲಿಗೆ ಬರಬೇಕಿತ್ತು ಎಂಬುದನ್ನು ಜಾರ್ಜಿಯಾ ವಿಮಾನದಲ್ಲಿದ್ದ ಸಿಬ್ಬಂದಿ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದೂ ಮೂಲಗಳು ಮಾಹಿತಿ ನೀಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು