ಬುಧವಾರ, ಜೂನ್ 3, 2020
27 °C
ತಬ್ಲೀಗ್ ಜಮಾತ್‌ ಮೇಲುಸ್ತುವಾರಿಯ ಮರ್ಕಜ್‌ ಮಸೀದಿಯಲ್ಲಿ ಉಳಿದ ವಿದೇಶಿಯರು

ಕೊರೊನಾ ವೈರಸ್‌ ಸೋಂಕು: ಬ್ರಿಟನ್‌, ಫ್ರಾನ್ಸ್‌ ಜನರಿಂದಲೇ ಹಬ್ಬಿದ್ದು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದಕ್ಷಿಣ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿರುವ ಮರ್ಕಜ್‌ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದ ವಿದೇಶಿಯರ ಪೈಕಿ ಬ್ರಿಟನ್‌ ಹಾಗೂ ಫ್ರಾನ್ಸ್‌ನ ಪ್ರಜೆಗಳೇ ದೇಶದಲ್ಲಿ ಈ ಪ್ರಮಾಣದಲ್ಲಿ ಕೊರೊನಾ ವೈರಸ್‌ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಮಾರ್ಚ್‌ ಎರಡನೇ ವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ 16 ದೇಶಗಳ 281 ಪ್ರಜೆಗಳು ಸೇರಿದಂತೆ 1,830 ಜನರು ಪಾಲ್ಗೊಂಡಿದ್ದರು. ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ಅನ್ನು ಮಾರ್ಚ್‌ 24ರಂದು ಘೋಷಿಸಲಾಗಿತ್ತು. ಈ ವಿದೇಶಿಯರು ತಬ್ಲೀಗ್ ಜಮಾತ್‌ ಮೇಲುಸ್ತುವಾರಿಯ ಮರ್ಕಜ್‌ ಮಸೀದಿಯಲ್ಲಿ ಉಳಿದುಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಂಡೊನೇಷ್ಯಾದ 72 ಜನರು, ಶ್ರೀಲಂಕಾ (34), ಮ್ಯಾನ್ಮಾರ್‌ (33), ಕಿರ್ಗಿಸ್ತಾನ್ (28), ಮಲೇಷ್ಯಾ (20), ನೇಪಾಳ ಮತ್ತು ಬಾಂಗ್ಲಾದೇಶ (ತಲಾ 9 ಜನ), ಥಾಯ್ಲೆಂಡ್‌ (7), ಫಿಜಿ (4), ಬ್ರಿಟನ್‌ (3) ಹಾಗೂ ಅಫ್ಗಾನಿಸ್ತಾನ, ಅಜ್ಜೀರಿಯಾ, ಸಿಂಗಪುರ, ಫ್ರಾನ್ಸ್‌ ಹಾಗೂ ಕುವೈತ್‌ನ ತಲಾ ಒಬ್ಬ ಪ್ರಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಹಲವರು ಸೇರಿ ದೇಶದ ವಿವಿಧ ರಾಜ್ಯಗಳ ಒಟ್ಟು 1,549 ಜನರು ಭಾಗಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ತಿಂಗಳು, ವಿದೇಶಿಯರು ಸೇರಿದಂತೆ ಕನಿಷ್ಠ 8,000 ಜನರು ಈ ಮಸೀದಿಗೆ ಭೇಟಿ ನೀಡಿದ್ದು, ಕೆಲವರು ತಮ್ಮ ದೇಶಗಳಿಗೆ ಮರಳಿದ್ದಾರೆ. ಇನ್ನೂ ಕೆಲವರು ದೇಶದ ಇತರ ಭಾಗಗಳಲ್ಲಿರುವ ಮರ್ಕಜ್‌ನ ಅಂಗ ಸಂಸ್ಥೆಗಳಲ್ಲಿ ತಂಗಿದ್ದಾರೆ ಎನ್ನಲಾಗಿದೆ. ಇಂಥವರಿಂದಲೇ ಆಯಾ ರಾಜ್ಯಗಳಲ್ಲಿ ಸೋಂಕು ಹರಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಹೈದರಾಬಾದ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದ ಇಂಡೊನೇಷ್ಯಾದ ಆರು ಪ್ರಜೆಗಳು, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣದ ತಲಾ ಒಬ್ಬರು ಸೇರಿದಂತೆ ಒಟ್ಟು 8 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇವರೆಲ್ಲರೂ ಮರ್ಕಜ್‌ ಮಸೀದಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಲಾಕ್‌ಡೌನ್‌ ಜಾರಿಯಾದ ನಂತರ, ಮಾ. 25ರಂದು ಮಸೀದಿಯಲ್ಲಿ 1,200 ಜನರಿದ್ದರು ಎಂದು ಮರ್ಕಜ್‌ ಸಿಬ್ಬಂದಿ ತಿಳಿಸಿದ್ದರು. ಅವರನ್ನು ಪೊಲೀಸರ ಸಹಾಯದೊಂದಿಗೆ ಹೊರಗೆ ಕಳುಹಿಸಲಾಯಿತು. ಮಾ. 26ರಂದು ಪುನಃ 2,000 ಜನರು ಇದೇ ಮಸೀದಿಯಲ್ಲಿ ಜಮಾಯಿಸಿದರು’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಯಾವ ರಾಜ್ಯದಿಂದ ಎಷ್ಟು ಮಂದಿ ಭಾಗಿ
ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ನಡೆದಿದ್ದ ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆಮಾಡುವ ಕಾರ್ಯವನ್ನು ರಾಜ್ಯ ಸರ್ಕಾರಗಳು ಆರಂಭಿಸಿವೆ. ಕೆಲವು ರಾಜ್ಯಗಳು ಈಗಾಗಲೇ ಕೆಲವರನ್ನು ಗುರುತಿಸಿದ್ದು, ಇನ್ನಷ್ಟು ಮಂದಿಯ ಶೋಧ ನಡೆಸಿವೆ. ಕೆಲವು ರಾಜ್ಯಗಳು ಸಭೆಯಲ್ಲಿ ಪಾಲ್ಗೊಂಡಿರುವವರು ತಾವೇ ಮುಂದೆ ಬಂದು ಮಾಹಿತಿ ನೀಡುವಂತೆ ಕೇಳಿಕೊಂಡಿವೆ. ಈವರೆಗೆ ಲಭ್ಯವಾಗಿರುವ ಮಾಹಿತಿ ಇಲ್ಲಿದೆ.

ಅಸ್ಸಾಂ ಸರ್ಕಾರಕ್ಕೆ ಆತಂಕ: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಸ್ಸಾಂನ 456 ಜನರಲ್ಲಿ ಕನಿಷ್ಠ 7 ಜನರು ರಾಜ್ಯಕ್ಕೆ ಮರಳಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಕ್ವಾರಂಟೈನ್‌ ಮಾಡಲು ಆರೋಗ್ಯ ಇಲಾಖೆ ಶೋಧ ಕಾರ್ಯ ನಡೆಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು