ಸೋಮವಾರ, ಏಪ್ರಿಲ್ 19, 2021
30 °C
ಪ್ರವಾಹ ಕುರಿತು ಕಳವಳ ವ್ಯಕ್ತಪಡಿಸಿದ ಭಾರತ

ಕರ್ತಾರ್‌ಪುರ: ಸೇತುವೆ ನಿರ್ಮಾಣಕ್ಕೆ ಭಾರತ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಟ್ಟಾರಿ/ವಾಘಾ: ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಹೊಂದಿಕೊಂಡಂತೆ ಇರುವ ರಾವಿ ನದಿ ತೀರದಲ್ಲಿ ಪಾಕಿಸ್ತಾನ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದರಿಂದ, ಆ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತ ಕಳವಳ ವ್ಯಕ್ತಪಡಿಸಿದೆ.

‘ತಾತ್ಕಾಲಿಕವಾಗಿಯೂ ರಾವಿ ನದಿಗೆ ರಸ್ತೆ ನಿರ್ಮಿಸಬಾರದು. ಇದರಿಂದ ಭಾರತೀಯರಿಗೆ ಸಮಸ್ಯೆ ಉಂಟಾಗಲಿದೆ. ಭಾರತದ ಕಡೆಯಲ್ಲಿ ಸೇತುವೆ ನಿರ್ಮಿಸುತ್ತಿರುವಂತೆ ಪಾಕಿಸ್ತಾನ ಸಹ ಸೇತುವೆ ನಿರ್ಮಿಸಲು ಮುಂದಾಗಬೇಕು’ ಎಂದು ಭಾರತೀಯ ನಿಯೋಗ ಸ್ಪಷ್ಟವಾಗಿ ಸೂಚಿಸಿದೆ.

ಕರ್ತಾರ್‌ಪುರ ಕಾರಿಡಾರ್ ಒಪ್ಪಂದ ಹಾಗೂ ಕಾರ್ಯಾರಂಭ ಕುರಿತು ಚರ್ಚಿಸಲು ಭಾನುವಾರ ಎರಡನೇ ಸುತ್ತಿನ ದ್ವಿಪಕ್ಷೀಯ ಮಾತುಕತೆ ಆಯೋಜಿಸಲಾಗಿತ್ತು. ಈ ವೇಳೆ ಭಾರತೀಯ ನಿಯೋಗ ಈ ವಿಷಯ ಪ್ರಸ್ತಾಪಿಸಿದೆ.

ಪ್ರವಾಹ ಉಂಟಾಗಬಹುದಾದ ಕುರಿತು ನಡೆಸಲಾದ ಅಧ್ಯಯನದ ವಿವರಗಳನ್ನು ಭಾರತೀಯ ನಿಯೋಗ ಪಾಕಿಸ್ತಾನದ ಜತೆ ಹಂಚಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡಿದೆ.‌

ಪಾಕಿಸ್ತಾನದಲ್ಲಿನ ವ್ಯಕ್ತಿಗಳು ಅಥವಾ ಸಂಘಟನೆಗಳು, ಯಾತ್ರೆಗೆ ಅಡ್ಡಿ ಮಾಡುವ ಹಾಗೂ ಯಾತ್ರಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ತೊಂದರೆ ನೀಡಬಹುದಾದ ಕುರಿತು ಸಹ ನಿಯೋಗ ಆತಂಕ ವ್ಯಕ್ತಪಡಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ, ‘ಭಾರತ ವಿರೋಧಿಯಾದಂತಹ ಯಾವುದೇ ಚಟುವಟಿಕೆಗೂ ಅವಕಾಶ ನೀಡುವುದಿಲ್ಲ’ ಎಂದು ಭರವಸೆ ನೀಡಿದೆ.

ಸೇತುವೆಯಿಂದ ಪ್ರವಾಹ ತಡೆಗಟ್ಟುವುದಷ್ಟೆ ಅಲ್ಲದೆ, ಯಾತ್ರಿಗಳು ವರ್ಷವಿಡೀ ಯಾವುದೇ ಸಮಸ್ಯೆಯಿಲ್ಲದೆ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಬಹುದು ಎಂದು ಭಾರತ ಹೇಳಿದೆ. ಅಲ್ಲದೆ ಯಾತ್ರಿಗಳಿಗೆ ನೆರವು ನೀಡಲು ಗುರುದ್ವಾರದಲ್ಲಿ ರಾಜತಾಂತ್ರಿಕ ಅಧಿಕಾರಿಯನ್ನು ನಿಯೋಜಿಸಬೇಕು ಎಂದು ಭಾರತೀಯ ನಿಯೋಗ ಮನವಿ ಮಾಡಿದೆ.

ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್.ಸಿ.ಎಲ್ ದಾಸ್ ನೇತೃತ್ವದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ರಕ್ಷಣಾ ಸಚಿವಾಲಯ, ಪಂಜಾಬ್ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ನಿಯೋಗದಲ್ಲಿದ್ದರು.

ನೆರವಿಗೆ ಸಿದ್ಧ: ಶೀಘ್ರ ಸೇತುವೆ ನಿರ್ಮಿಸಲು ಪಾಕಿಸ್ತಾನ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಆದರೆ ಈ ವರ್ಷ ನವೆಂಬರ್‌ನಲ್ಲಿ ಗುರುನಾನಕ್‌ ಅವರ 550ನೇ ಜಯಂತಿ ಇದೆ. ಈ ಐತಿಹಾಸಿಕ ಸಮಯಕ್ಕೆ ಕರ್ತಾರ್‌ಪುರ ಕಾರಿಡಾರ್‌ ಅನ್ನು ಸಂಚಾರ  ಮುಕ್ತಗೊಳಿಸಬೇಕು ಎನ್ನುವುದು ಭಾರತದ ಉದ್ದೇಶ. ಈ ಸಲುವಾಗಿ ಕಾರಿಡಾರ್ ಚಾಲನೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿಕೊಡಲು ಸಿದ್ಧವಿರುವುದಾಗಿ ಪಾಕಿಸ್ತಾನಕ್ಕೆ ಭಾರತ ತಿಳಿಸಿದೆ.

ಅಂತರರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನಕ್ಕೆ ದಾಟುವ ಪ್ರದೇಶದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ.

ಪ್ರತ್ಯೇಕತಾವಾದಿ ನಾಯಕ ಸಮಿತಿಯಿಂದ ಹೊರಗೆ

ಖಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಗೋಪಾಲ್ ಸಿಂಗ್ ಚಾವ್ಲಾ ಅವರನ್ನು ಪಾಕಿಸ್ತಾನ ಸಿಖ್‌ ಗುರುದ್ವಾರ ಪ್ರಬಂಧಕ ಸಮಿತಿಯಿಂದ ಕೈಬಿಡಲಾಗಿದೆ ಎಂದು ಪಾಕಿಸ್ತಾನದ ಹಿರಿಯ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.

ಕರ್ತಾರ್‌ಪುರ ಕಾರಿಡಾರ್ ಸಂಚಾರಮುಕ್ತವಾದ ಬಳಿಕ ಸಿಖ್ ಯಾತ್ರಿಕರಿಗೆ ಸೌಲಭ್ಯ ಒದಗಿಸಲು 10 ಸದಸ್ಯರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಖಲಿಸ್ತಾನ ಪ್ರತ್ಯೇಕತಾವಾದಿಗಳು ಇರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.

ಸಭೆಯ ನಿರ್ಣಯಗಳು

* ಭಾರತೀಯ ಪಾಸ್‌ಪೋರ್ಟ್, ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ಹೊಂದಿರುವವರಿಗೆ ವೀಸಾಮುಕ್ತ ಪ್ರವಾಸಕ್ಕೆ ಅವಕಾಶ

* ಪ್ರತಿದಿನ 5 ಸಾವಿರ ಪ್ರವಾಸಿಗರಂತೆ ವರ್ಷವಿಡೀ ಗುರುದ್ವಾರಕ್ಕೆ ಭೇಟಿ ನೀಡಲು ಅನುಮತಿ

* ವೈಯಕ್ತಿಕ ಅಥವಾ ಗುಂಪುಗಳಲ್ಲಿ, ಕಾಲ್ನಡಿಗೆಯಲ್ಲಿಯೂ ಯಾತ್ರೆ ಕೈಗೊಳ್ಳಬಹುದು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು