ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ‘ಪ್ಲಾಸ್ಮಾ ಥೆರಪಿ’ಗೆ ಕೇಂದ್ರ ಸಮ್ಮತಿ: ಏನಿದು ಚಿಕಿತ್ಸೆ?

‘ಪ್ಲಾಸ್ಮಾ ಥೆರಪಿ’ ಪ್ರಯೋಗಕ್ಕೆ ಸಿದ್ಧತೆ
Last Updated 24 ಏಪ್ರಿಲ್ 2020, 11:57 IST
ಅಕ್ಷರ ಗಾತ್ರ

ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಿಂದ ರೋಗನಿರೋಧಕ ಕಣಗಳನ್ನು ತೆಗೆದು, ಮತ್ತೊಬ್ಬ ರೋಗಿಯ ದೇಹಕ್ಕೆ ಸೇರಿಸುವ ‘ಪ್ಲಾಸ್ಮಾ ಥೆರಪಿ’ಯು ಪ್ರಾಯೋಗಿಕವಾಗಿ ವಿಶ್ವದ ಹಲವೆಡೆ ನಡೆಯುತ್ತಿದೆ. ಭಾರತದಲ್ಲೂ ಕೇರಳದ ಸಂಸ್ಥೆಯೊಂದು ಈ ಪ್ರಯೋಗಕ್ಕೆ ಮುಂದಾಗಿದೆ. ಕೇರಳ ಸರ್ಕಾರವು ಇದಕ್ಕೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದೆ. ಈ ಥೆರಪಿಯನ್ನು ಪ್ರಾಯೋಗಿಕವಾಗಿ ನಡೆಸಲು ಅಗತ್ಯವಿರುವ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ

* ಕೇರಳದ ಎಸ್‌ಸಿಟಿಐಎಂಎಸ್‌ಟಿ ಸಂಸ್ಥೆಯು ಪ್ಲಾಸ್ಮಾ ಥೆರಪಿಯ ‘ಕ್ಲಿನಿಕಲಿ ಟೆಸ್ಟ್‌’ಗೆ ಸಿದ್ಧತೆ ನಡೆಸಿದೆ

* ನಿಯಮಾವಳಿಗಳ ರಚನೆ ನಂತರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದ ನಂತರವಷ್ಟೇ ‘ಕ್ಲಿನಿಕಲಿ ಟೆಸ್ಟ್’ ನಡೆಸಬಹುದು

* ಕ್ಲಿನಿಕಲಿ ಟೆಸ್ಟ್‌ಗಳ ಫಲಿತಾಂಶ ಬಂದು, ಅವು ಸಕರಾತ್ಮಕವಾಗಿದ್ದರೆ ಈ ಥೆರಪಿಯನ್ನು ಬಳಸಲು ಅನುಮತಿ ದೊರೆಯುತ್ತದೆ

ಪ್ಲಾಸ್ಮಾ ಥೆರಪಿ: ಹಾಗೆಂದರೆ...

1. ಯಾವುದೇ ರೋಗದ ವಿರುದ್ಧ ಹೋರಾಡಲು ಮಾನವನ ದೇಹವು ರೋಗನಿರೊಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ರೋಗವನ್ನು ಉಂಟು ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಗಳನ್ನು ಬೆಳೆಸಿಕೊಂಡಿರುತ್ತವೆ. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ

2. ರೋಗದಿಂದ ಗುಣಮುಖರಾದವರ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಬಹುದಾಗಿದೆ. ಒಬ್ಬ ರೋಗಿಗೆ ಒಂದು ಡೋಸ್ ನೀಡಬೇಕಾಉತ್ತದೆ. ಹೀಗಾಗಿ ಇದನ್ನು ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ

3. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲಿದ್ದಾಗ ಈ ಪ್ರತಿರೋಧ ಕಣಗಳು, ಕೊರೊನಾ ವೈರಾಣುಗಳ ಮೇಲೆ ದಾಳಿ ನಡೆಸುವ ಗುಣ ಬೆಳೆಸಿಕೊಂಡಿರುತ್ತವೆ. ದಾಳಿಯ ಗುಣವನ್ನು ಈ ಕಣಗಳು ಶಾಶ್ವತವಾಗಿ ಕಾಯ್ದುಕೊಳ್ಳುತ್ತವೆ. ಈಗ ರೋಗಪೀಡಿತ ದೇಹ ಸೇರಿದ ನಂತರವೂ ಈ ದಾಳಿಯನ್ನು ಅವು ಮುಂದುವರಿಸುತ್ತವೆ. ಹೊಸ ದೇಹದಲ್ಲಿ ಕೆಲವು ಕಾಲವಷ್ಟೇ ಈ ಪ್ರತಿರೋಧ ಕಣಗಳು ಸಕ್ರಿಯವಾಗಿರುತ್ತವೆ. ಅವು ನಿಷ್ಕ್ರಿಯವಾಗುವಷ್ಟರಲ್ಲಿ ದೇಹವು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಹೀಗಾಗಿ ರೋಗಿ ಗುಣಮುಖನಾಗುತ್ತಾನೆ

ಬೇರೆಡೆಯೂ ಪ್ರಯೋಗ

ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳು ಕೋವಿಡ್–19 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿಯ ಕ್ಲಿನಿಕಲಿ ಟ್ರಯಲ್/ಟೆಸ್ಟ್‌ ನಡೆಸಿವೆ.ಅಮೆರಿಕವು ನ್ಯೂಯಾರ್ಕ್‌ ನಗರದ 10 ರೋಗಿಗಳಿಗೆ ಮಾರ್ಚ್ 24ರಂದು ಪ್ಲಾಸ್ಮಾ ಥೆರಪಿ ನೀಡಿದೆ. ಇವುಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

‘ಪ್ಲಾಸ್ಮಾ ಥೆರಪಿ ಪ್ರಯೋಜನಕಾರಿ. ಈ ಚಿಕಿತ್ಸೆಯಿಂದ ಹಲವರು ಗುಣಮುಖರಾಗಿದ್ದಾರೆ. ಬೇರೆ ಚಿಕಿತ್ಸೆಗೆ ಒಳಗಾದ ರೋಗಿಗಳಿಗಿಂತ ಪ್ಲಾಸ್ಮಾ ಥೆರಪಿಗೆ ಒಳಗಾದವರಲ್ಲಿ ರೋಗದ ಲಕ್ಷಣಗಳು ಕಡಿಮೆ ಅವಧಿಯಲ್ಲಿ ಇಲ್ಲವಾಗಿವೆ. ಅಲ್ಲದೆ, ಈ ರೋಗಿಗಳಲ್ಲಿ ಇದ್ದ ವೈರಾಣುಗಳ ಸಂಖ್ಯೆಯಲ್ಲೂ ಬಾರಿ ಇಳಿಕೆಯಾಗಿದೆ’ ಎಂದು ಚೀನಾ ಹೇಳಿದೆ.

* ಕೋವಿಡ್–19 ರೋಗದಿಂದ ಗುಣಮುಖರಾಗಿ, ಬೇರೆ ಯಾವುದೇ ರೋಗ ಇಲ್ಲದಿದ್ದರೆ ಮಾತ್ರ ಅಂತಹವರಿಂದ ಪ್ರತಿರೋಧ ಕಣಗಳನ್ನು ಪಡೆಯಲಾಗುತ್ತದೆ

* ಈ ಹಿಂದೆ ಬೇರೆ ರೋಗಗಳನ್ನು ಗುಣಪಡಿಸಲೂ ಪ್ಲಾಸ್ಮಾ ಥೆರಪಿ ನಡೆಸಿದ ಉದಾಹರಣೆ ಇದೆ. 1890ರಲ್ಲೇ ಮೊದಲ ಬಾರಿ ಇಂತಹ ಪ್ರಯೋಗ ನಡೆದಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT