ಶುಕ್ರವಾರ, ಜೂನ್ 5, 2020
27 °C
ಸೇನಾಪಡೆಗೆ ಗುಪ್ತಚರ ಮಾಹಿತಿ ಒದಗಿಸಲಿರುವ ಉಪಗ್ರಹ

ನಭಕ್ಕೆ ಹಾರಿದ ಇಸ್ರೊ ‘ಎಮಿಸ್ಯಾಟ್’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀಹರಿಕೋಟಾ: ಸೇನಾಪಡೆಗಳಿಗೆ ಗುಪ್ತಚರ ಮಾಹಿತಿ ಒದಗಿಸುವ ಇಸ್ರೊ ನಿರ್ಮಿತ ‘ಎಮಿಸ್ಯಾಟ್’ ಉಪಗ್ರಹ ಸೋಮವಾರ ಬೆಳಿಗ್ಗೆ 9.27ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಯಿತು. ‌

ಎಮಿಸ್ಯಾಟ್ ಯಶಸ್ವಿಯಾಗಿ ತನ್ನ ನಿಗದಿತ ಕಕ್ಷೆ ಸೇರುತ್ತಿದ್ದಂತೆ ಇಸ್ರೊ ಮುಖ್ಯಸ್ಥ ಕೆ. ಶಿವನ್ ಹಾಗೂ ವಿಜ್ಞಾನಿಗಳು ಹರ್ಷೋದ್ಗಾರ ಮಾಡಿದರು. ‘ಈ ಯಶಸ್ಸಿನ ಹಿಂದೆ ತಂಡದ ಪ್ರತಿಯೊಬ್ಬ ಸದಸ್ಯರ ಕೊಡುಗೆ ಹಾಗೂ ಅಪಾರ ಶ್ರಮವಿದೆ’ ಎಂದು ತಂಡಕ್ಕೆ ಶಿವನ್ ಧನ್ಯವಾದ ಸಲ್ಲಿಸಿದರು.  ಉಪಗ್ರಹಕ್ಕೆ ಅವಶ್ಯವಿದ್ದ ಶೇ 60ರಿಂದ 70ರಷ್ಟು ಬಿಡಿಭಾಗಗಳನ್ನು ಇಸ್ರೊದ ಹೊರಗೆ ಸಿದ್ಧಪಡಿಸಲಾಗಿದ್ದು, ಬೆಂಗಳೂರಿನ ಎಲೆಕ್ಟ್ರಾನಿಕ್ ಉದ್ದಿಮೆಯೊಂದು ಇವುಗಳನ್ನು ಸಿದ್ಧಪಡಿಸಿಕೊಟ್ಟಿತು’ ಎಂದು ಅವರು ವಿವರಿಸಿದರು. 

ಅಮೆರಿಕ, ಸ್ಪೇನ್‌, ಸ್ವಿಟ್ಜರ್‌ಲೆಂಡ್ ಹಾಗೂ ಲಿಥುವೆನಿಯಾ ರಾಷ್ಟ್ರಗಳ 28 ನ್ಯಾನೊ ಉಪಗ್ರಹಗಳನ್ನು ಸಹ ಇದೇ ವೇಳೆ ಉಡಾವಣೆ ಮಾಡಲಾಗಿದ್ದು, ಅವುಗಳು ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿವೆ.

ಸಾರ್ವಜನಿಕರಿಗೆ ವೀಕ್ಷಣಾಲಯ ಸೌಲಭ್ಯ
ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ಇಸ್ರೊ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸಿತ್ತು. ಉಡಾವಣಾ ಸ್ಥಳದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಈ ವೀಕ್ಷಣಾಲಯದಲ್ಲಿ ಸೇರಿದ್ದ ಸುಮಾರು 1200 ಜನರು ‘ಎಮಿಸ್ಯಾಟ್’ ನಭಕ್ಕೆ ಹಾರಿದ ಕ್ಷಣಕ್ಕೆ ಸಾಕ್ಷಿಯಾದರು. 

ಉ‍ಪಗ್ರಹ ಉಡಾವಣೆ ವೀಕ್ಷಿಸಲು ಇಸ್ರೊ ವೆಬ್‌ಸೈಟ್ ಮೂಲಕ ಜನರು ನೋಂದಾಯಿಸಿಕೊಂಡಿದ್ದರು. ಜನರು ಹಾಗೂ ವಿದ್ಯಾರ್ಥಿಗಳು ಇಸ್ರೊದ ಚಟುವಟಿಕೆಗಳನ್ನು ತಿಳಿಯಲು ಪ್ರೋತ್ಸಾಹಿಸುವ ಉದ್ದೇಶದಿಂದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸಮೀಪ ‘ಸ್ಪೇಸ್‌ ಪಾರ್ಕ್‌’ ನಿರ್ಮಿಸಲಾಗಿದೆ. ಭಾನುವಾರವಷ್ಟೆ ಶಿವನ್ ಅವರು ಈ ಪಾರ್ಕ್ ಉದ್ಘಾಟಿಸಿದ್ದರು. ವೀಕ್ಷಣಾಲಯ ಈ ಪಾರ್ಕ್‌ನ ಭಾಗವಾಗಿದೆ. 

ಶತ್ರುಪಡೆಗಳ ರೆಡಾರ್ ಪತ್ತೆಗೆ ನೆರವು
ಶತ್ರುದೇಶಗಳ ರೆಡಾರ್‌ಗಳನ್ನು ಪತ್ತೆ ಮಾಡಲು ಈತನಕ ಭಾರತ ವಿಮಾನಗಳನ್ನು ಬಳಸುತ್ತಿತ್ತು. ಇದೀಗ ಎಮಿಸ್ಯಾಟ್ ಉಪಗ್ರಹ, ಬಾಹ್ಯಾಕಾಶ ಆಧರಿತ ಮಾಹಿತಿ ಒದಗಿಸಿ ಶತ್ರುಪಡೆಗಳ ರೆಡಾರ್ ಪತ್ತೆ ಮಾಡಲು ನೆರವು ನೀಡಲಿದೆ.

ಪ್ರಧಾನಿ ಪ್ರಶಂಸೆ
ವಾರ್ಧಾ: ಎಮಿಸ್ಯಾಟ್ ಯಶಸ್ವಿ ಉಡಾವಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೊ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಇಲ್ಲಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ವೇಳೆ ವಿಷಯ ಪ್ರಸ್ತಾಪಿಸಿದ ಅವರು, ಇದು ಇಸ್ರೊಗೆ ಐತಿಹಾಸಿಕ ತಿರುವು ನೀಡಿದೆ ಎಂದು ಹೇಳಿದ್ದಾರೆ. 

*436 ಕೆ.ಜಿ: ಎಮಿಸ್ಯಾಟ್ ತೂಕ
*749 ಕಿ.ಮೀ: ಎತ್ತರದ ಕಕ್ಷೆಗೆ ಉಪಗ್ರಹ ರವಾನೆ
*17 ನಿಮಿಷ: ಕಕ್ಷೆಗೆ ಸೇರಲು ಬೇಕಾದ ಸಮಯ
*220 ಕೆ.ಜಿ: ಉಳಿದ 28 ಉಪಗ್ರಹಗಳ ತೂಕ
*504 ಕಿ.ಮೀ. 

**

 ಪಿಎಸ್‌ಎಲ್‌ವಿ–ಸಿ45 ರಾಕೆಟ್‌ ಮೂಲಕ ಎಮಿಸ್ಯಾಟ್ ಉಡಾವಣೆ ಮಾಡಿರುವುದು ಇಸ್ರೊದ ಹಲವು ಪ್ರಥಮಗಳಿಗೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ನಾಲ್ಕು ಹಂತಗಳಲ್ಲಿ ವಿನ್ಯಾಸಗೊಳಿಸಲಾಗಿದ್ದ ಪಿಎಸ್‌ಎಲ್‌ವಿಯನ್ನು ಉಡಾವಣೆಗೆ ಬಳಸಲಾಯಿತು. ಕಕ್ಷೆ ಆಧರಿತ ಮೂರು ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಒಂದೇ ಬಾರಿಗೆ ಹೊತ್ತೊಯ್ದಿದ್ದು ಇದೇ ಮೊದಲು.
–ಕೆ. ಶಿವನ್, ಇಸ್ರೊ ಮುಖ್ಯಸ್ಥ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು