ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ಕ್‌ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲ್ಲ: ಸುಷ್ಮಾ ಸ್ವರಾಜ್

ಪಾಕಿಸ್ತಾನ ಮೊದಲು ಭಯೋತ್ಪಾದನೆ ನಿಲ್ಲಿಸಲಿ ಎಂದ ಸಚಿವೆ
Last Updated 28 ನವೆಂಬರ್ 2018, 10:13 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನದಲ್ಲಿ ನಡೆಯುವಸಾರ್ಕ್‌ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ) ಶೃಂಗಸಭೆಯಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬುಧವಾರ ಹೇಳಿದರು.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದ ವಿನಃ; ಭಾರತ–ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಮಾತುಕತೆಗೆಕರ್ತಾರಪುರ ಕಾರಿಡಾರ್‌ ಯೋಜನೆ ಮುನ್ನುಡಿಯಾಗಲಾರದು ಎಂದು ಅವರು ಹೇಳಿದರು.

ಸಾರ್ಕ್‌ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್‌ ಫೈಸಲ್‌ ಮಂಗಳವಾರ ಹೇಳಿದ್ದರು. ಈ ಕುರಿತು ಹೈದರಾಬಾದ್‌ನಲ್ಲಿ ವರದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸುಷ್ಮಾ, ‘ಈಗಾಗಲೇ ಆಹ್ವಾನ ಬಂದಿದೆ. ಆದರೆ ನಾವು ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸದೆ ಮಾತುಕತೆ ಸಾಧ್ಯವಿಲ್ಲ ಹಾಗೂ ಸಾರ್ಕ್‌ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ’ ಎಂದು ಹೇಳಿದರು.

ಸಚಿವರಾದ ಹರ್‌ಸಿಮ್ರತ್ ಕೌರ್ ಮತ್ತು ಹರ್‌ದೀಪ್ ಸಿಂಗ್ ಪುರಿ ಲಾಹೋರ್‌ನಲ್ಲಿಕರ್ತಾರಪುರ ಕಾರಿಡಾರ್‌ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸುಷ್ಮಾ, ‘ಇದನ್ನು 2013ರಲ್ಲಿ ಸ್ಥಗಿತಗೊಂಡ ದ್ವಿಪಕ್ಷೀಯ ಮಾತುಕತೆಯ ಆರಂಭ ಎಂದು ಭಾವಿಸಬೇಕಿಲ್ಲ’ ಎಂದು ಹೇಳಿದರು.

‘ದ್ವಿಪಕ್ಷೀಯ ಮಾತುಕತೆ ಮತ್ತುಕರ್ತಾರಪುರ ಕಾರಿಡಾರ್‌ ಬೇರೆಬೇರೆ ವಿಷಯಗಳು. ಕಳೆದ 20 ವರ್ಷಗಳಿಂದಕರ್ತಾರಪುರ ಕಾರಿಡಾರ್‌ಗಾಗಿ ಭಾರತ ಮನವಿ ಮಾಡುತ್ತಲೇ ಇದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಧನಾತ್ಮಕವಾಗಿ ಸ್ಪಂದಿಸಿದೆ. ಹಾಗೆಂದು ಇದರಿಂದ ದ್ವಿಪಕ್ಷೀಯ ಮಾತುಕತೆ ಆರಂಭವಾಗುತ್ತದೆ ಎಂದಲ್ಲ. ಭಯೋತ್ಪಾದನೆ ಮತ್ತು ದ್ವಿಪಕ್ಷೀಯ ಮಾತುಕತೆ ಜತೆಯಾಗಿ ಸಾಗಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಪಾಕಿಸ್ತಾನ ನಿಲ್ಲಿಸಿದ ಕೂಡಲೇ ದ್ವಿಪಕ್ಷೀಯ ಮಾತುಕತೆ ಆರಂಭವಾಗಲಿದೆ’ ಎಂದು ಸುಷ್ಮಾ ಹೇಳಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT