ಶನಿವಾರ, ಏಪ್ರಿಲ್ 4, 2020
19 °C

ದುಡ್ಡು ಜೋಪಾನ | 13 ಲಕ್ಷ ಭಾರತೀಯರ ಬ್ಯಾಂಕ್‌ ಕಾರ್ಡ್‌ ವಹಿವಾಟು ಮಾಹಿತಿಗೆ ಕನ್ನ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಡಾರ್ಕ್‌ವೆಬ್‌ ಎಂದೇ ಕರೆಯಲಾಗುವುದು ಇಂಟರ್ನೆಟ್‌ನ ಕತ್ತಲ ಪ್ರಪಂಚದಲ್ಲಿ 13 ಲಕ್ಷ ಭಾರತೀಯ ಬ್ಯಾಂಕ್‌ ಗ್ರಾಹಕರ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿದ್ದು, ಈ ದತ್ತಾಂಶವನ್ನು ಮಾರಾಟಕ್ಕೆ ಇಡಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸಿಂಗಪುರ ಮೂಲಕ ಐಬಿ ಸೆಕ್ಯುರಿಟಿಯ ಸಂಶೋಧಕರು ಪತ್ತೆ ಮಾಡಿದ್ದಾರೆ.

ಈ ದತ್ತಾಂಶ ಸಂಚಯಕ್ಕೆ 'INDIA-MIX-NEW-01'(ಇಂಡಿಯಾ–ಮಿಕ್ಸ್‌–ನ್ಯೂ–01) ಎಂಬ ಹೆಸರಿಡಲಾಗಿದೆ. ದತ್ತಾಂಶಗಳನ್ನು ಟ್ರಾಕ್–1 ಮತ್ತು ಟ್ರಾಕ್–2 ಎಂಬ ಎರಡು ಸಂಪುಟಗಳಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಇದರಲ್ಲಿ 13 ಲಕ್ಷಕ್ಕೂ ಹೆಚ್ಚು ಮಂದಿಯ ವಹಿವಾಟು ವಿವರಗಳು ಲಭ್ಯ. ಈ ಪೈಕಿ ಶೇ 98ರಷ್ಟು ಕಾರ್ಡ್‌ಗಳು ಭಾರತೀಯ ಬ್ಯಾಂಕ್‌ಗಳಿಗೆ ಸೇರಿದವು ಎಂಬುದು ಉಲ್ಲೇಖಾರ್ಹ ಅಂಶ. ಉಳಿದ ಕಾರ್ಡ್‌ಗಳು ಕೊಲಂಬಿಯಾ ದೇಶದ ಹಣಕಾಸು ಸಂಸ್ಥೆಗಳಿಗೆ ಸೇರಿವೆ.

ಇದನ್ನೂ ಓದಿ: ಎಟಿಎಂ ವಂಚನೆಯಿಂದ ಬಚಾವಾಗಲು ಹೀಗೆ ಮಾಡಿ


ಡಾರ್ಕ್‌ವೆಬ್‌ನಲ್ಲಿ 100 ಡಾಲರ್‌ಗೆ ಕಾರ್ಡ್‌ ವಹಿವಾಟು ಮಾಹಿತಿ ಮಾರಾಟಕ್ಕೆ ಇರಿಸಲಾಗಿದೆ. (Picture credit: Group-IB)

ಐಬಿ ಸೆಕ್ಯುರಿಟಿ ಬಹಿರಂಗಪಡಿಸಿರುವ ಸ್ಕ್ರೀನ್‌ಶಾಟ್‌ ಪ್ರಕಾರ ಪ್ರತಿ ಕಾರ್ಡ್‌ನ ವಹಿವಾಟು ಮಾಹಿತಿಯನ್ನು 100 ಅಮೆರಿಕನ್ ಡಾಲರ್‌ಗೆ (ಸುಮಾರು ₹ 7092) ಮಾರಾಟಕ್ಕೆ ಇರಿಸಲಾಗಿದೆ. ಒಟ್ಟಾರೆ ಇದು 1.3 ಕೋಟಿ ಡಾಲರ್ (ಸುಮಾರು ₹922 ಕೋಟಿ) ಮುಟ್ಟುತ್ತದೆ. ಈವರೆಗೆ ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕೆ ಬಂದಿರುವ ಅತಿ ದುಬಾರಿ ಮತ್ತು ಅತಿ ಸೂಕ್ಷ್ಮ ಹಣಕಾಸು ದತ್ತಾಂಶ ಇದು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಕಾರ್ಡ್‌ಗಳ ಮಾಹಿತಿಯನ್ನು ಸಂಗ್ರಹಿಸಿ ಮಾರುವ ಕುಖ್ಯಾತ ಕಾರ್ಡ್‌ ಶಾಪ್‌ ‘ಜೋಕರ್ಸ್‌ ಸ್ಟಾಶ್‌’ನಲ್ಲಿ ಈ ಮಾಹಿತಿ ಅ.28ರಿಂದ ಮಾರಾಟಕ್ಕೆ ಇದೆ. ಈ ಅಗಾಧ ದತ್ತಾಂಶಗಳು ಕಾರ್ಡ್‌ಗಳ ಸೂಕ್ಷ್ಮ ಮಾಹಿತಿ ಕದಿಯುವ ದಂಧೆ ಭಾರತದಲ್ಲಿ ಎಷ್ಟು ಪ್ರಬಲವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ.

ಭಾರತದ ಯಾವೆಲ್ಲಾ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮಾಹಿತಿ ಮಾರಾಟಕ್ಕೆ ಬಂದಿದೆ ಎಂಬ ಮಾಹಿತಿಯನ್ನು ಗ್ರೂಪ್‌ ಐಬಿ ಸೆಕ್ಯುರಿಟಿ ಬಹಿರಂಗಪಡಿಸಿಲ್ಲ. ಆದರೆ ಮಾರಾಟಕ್ಕೆ ಬಂದಿರುವ ಮಾಹಿತಿಯನ್ನು ಎಟಿಎಂಗಳು ಮತ್ತು ಪಿಒಎಸ್‌ (ಅಂಗಡಿಗಳಲ್ಲಿ ಕಾರ್ಡ್‌ ಸ್ವೈಪ್ ಮಾಡುವ ಪಾಯಿಂಟ್ ಆಫ್ ಸೇಲ್) ಮಿಷಿನ್‌ಗಳಿಂದ ಕಾರ್ಡ್‌ ಸ್ಕಿಮ್ಮಿಂಗ್ (ಮಾಹಿತಿ ಕಳವು) ಉಪಕರಣಗಳ ಮೂಲಕ ಸಂಗ್ರಹಿಸಿರಬಹುದು ಎಂಬ ಮಾತುಗಳು ವಿತ್ತ ಪ್ರಪಂಚದಲ್ಲಿ ಕೇಳಿಬರುತ್ತಿದೆ.

ಇದನ್ನೂ ಓದಿ: ಎಟಿಎಂನಲ್ಲಿ ಕಳ್ಳಗಣ್ಣಿವೆ ಎಚ್ಚರ!

ಏನಿದು ಕಾರ್ಡ್‌ ಸ್ಕಿಮ್ಮಿಂಗ್?

ಎಟಿಎಂಗಳಲ್ಲಿ ಅಥವಾ ಪಿಒಎಸ್‌ಗಳಲ್ಲಿ ಕಾರ್ಡ್‌ಗಳನ್ನು ಹಾಕುವ ಸ್ಥಳದಲ್ಲಿ ಗ್ರಾಹಕರ ಗಮನಕ್ಕೆ ಬಾರದಂತೆ ಹೆಚ್ಚುವರಿಯಾಗಿ ಮಾಹಿತಿ ಕದಿಯುವ (ಸ್ಕಿಮ್ಮಿಂಗ್ ಡಿವೈಸ್) ಉಪಕರಣಗಳನ್ನು ಅಳವಡಿಸಿ, ಪಿನ್‌ ನಂಬರ್‌ ರೆಕಾರ್ಡ್‌ ಆಗುವಂತೆ ರಹಸ್ಯ ಕ್ಯಾಮೆರಾಗಳನ್ನು ಇರಿಸಲಾಗುತ್ತದೆ. ಇಂಥ ಎಟಿಎಂ ಅಥವಾ ಪಿಒಎಸ್‌ಗಳಲ್ಲಿ ಕಾರ್ಡ್‌ ಹಾಕಿದಾಗ ಅದರ ಮ್ಯಾಗ್ನಟಿಕ್ ಸ್ಟ್ರಿಪ್‌ನಲ್ಲಿರುವ ಮಾಹಿತಿಯನ್ನು ಸ್ಕಿಮಿಂಗ್ ಉಪಕರಣ ನಕಲು ಮಾಡಿಕೊಳ್ಳುತ್ತೆ. ಕ್ಯಾಮೆರಾದ ಸಹಾಯದಿಂದ ಪಿನ್ ನಂಬರ್ ಅರಿಯುವ ದುಷ್ಟರು ನಕಲಿ ಕಾರ್ಡ್‌ ತಯಾರಿಸಿಕೊಂಡು ನಿಮ್ಮ ಖಾತೆಯಿಂದ ಹಣ ವಿತ್‌ಡ್ರಾ ಮಾಡುತ್ತಾರೆ.

ಹಲವಾರು ಮಂದಿ ಸೇರಿ ನಡೆಸುವ ಇಂಥ ಅಪರಾಧ ಕೃತ್ಯಗಳು ಬೆಳಕಿಗೆ ಬಂದ ನಂತರ ಹೊಟೆಲ್ ಮಾಣಿ ಅಥವಾ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕುವಂಥವರು ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾರೆ. ದೊಡ್ಡ ಕ್ರಿಮಿನಲ್‌ಗಳ ಜಾಲ ನಡೆಸುವ ಈ ಕೃತ್ಯಗಳಲ್ಲಿ ತಕ್ಷಣಕ್ಕೆ ಒಂದಿಷ್ಟು ದುಡ್ಡು ಸಿಗುತ್ತೆ ಎನ್ನುವ ಆಸೆಗೆ ಇಂಥವರು ದಾಳಗಳಂತೆ ಬಳಕೆಯಾಗುತ್ತಾರೆ.

ಭಾರತದ ಮಾಹಿತಿ ಅಪರೂಪ

ಡಾರ್ಕ್‌ವೆಬ್‌ನಲ್ಲಿ ಬ್ಯಾಂಕ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯನ್ನು ಪತ್ತೆಹಚ್ಚಿರುವ ಐಬಿ–ಗ್ರೂಪ್‌ನ ಸಂಶೋಧಕರು ಸಂಬಂಧಿಸಿದವರಿಗೆ ಈ ವಿಚಾರ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.

‘ಈ ಹಿಂದೆಯೂ ಹಣಕಾಸು ವಹಿವಾಟಿಗೆ ಸಂಬಂಧಿಸಿದ ದತ್ತಾಂಶಗಳು ದೊಡ್ಡ ಪ್ರಮಾಣದಲ್ಲಿ ಸೋರಿಕೆಯಾಗಿದ್ದವು. ಆದರೆ ಈ ಬಾರಿಯದ್ದು ಮಾತ್ರ ಹಲವು ಕಾರಣಗಳಿಂದ ವಿಶಿಷ್ಟ ಎನಿಸಿಕೊಳ್ಳುತ್ತೆ. ಈ ಹಿಂದೆ ದತ್ತಾಂಶವನ್ನು ವಿಂಗಡಿಸಿ, ಸಣ್ಣ ತುಣುಕುಗಳಾಗಿ ಡಾರ್ಕ್‌ವೆಬ್‌ಗೆ ಅಪ್‌ಲೋಡ್ ಮಾಡಿ, ಮಾರಾಟಕ್ಕೆ ಇರಿಸಲಾಗುತ್ತಿತ್ತು. ಈ ಹಿಂದೆ ಹಣಕಾಸು ವಹಿವಾಟಿನ ದತ್ತಾಂಶವನ್ನು ಮಾರಾಟಕ್ಕೆ ಇರಿಸುವ ಮೊದಲು ಪ್ರಚಾರ ಕೊಡಲಾಗುತ್ತಿತ್ತು. ಆದರೆ ಈ ಬಾರಿ ಹಾಗೇನೂ ಆಗಿಲ್ಲ. ದೊಡ್ಡಮಟ್ಟದ ದತ್ತಾಂಶವನ್ನು ಒಮ್ಮೆಲೆ ಮಾರಾಟಕ್ಕೆ ಇರಿಸಲಾಗಿದೆ. ಭಾರತದ ಕಾರ್ಡ್‌ ವಹಿವಾಟು ಮಾಹಿತಿ ಡಾರ್ಕ್‌ವೆಬ್‌ನಲ್ಲಿ ಮರಾಟಕ್ಕೆ ಬರುವುದು ಅಪರೂಪ. ಹೀಗಾಗಿ ಇದಕ್ಕೆ ಇರಿಸಿರುವ ಬೆಲೆಯೂ ಹೆಚ್ಚು. ಕಳೆದ 12 ತಿಂಗಳ ಅವಧಿಯಲ್ಲಿ ಭಾರತೀಯ ಬ್ಯಾಂಕ್‌ಗಳಿಗೆ ಸಂಬಂಧಿಸಿದ ದೊಡ್ಡ ದತ್ತಾಂಶ ಸಂಚಯ ಇದು’ ಎಂದು ಗ್ರೂಪ್‌–ಐಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಲ್ಯಾ ಸಚ್ಕೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ನಕಲಿ ಎಟಿಎಂ ಕಾರ್ಡ್‌ ಬಳಸಿ ವಂಚನೆ- ಬಂಧನ


ಪ್ರಾತಿನಿಧಿಕ ಚಿತ್ರ: (Picture credit: www.investopedia.com)

ಡಾರ್ಕ್‌ವೆಬ್ ಎಂದರೇನು?

ಇದು ಇಂಟರ್ನೆಟ್‌ ಜಗತ್ತಿನ ಭೂಗತ ಲೋಕ. ಗೂಗಲ್‌, ಬಿಂಗ್‌ನಂಥ ಮಾಮೂಲು ಸರ್ಚ್‌ ಎಂಜಿನ್‌ಗಳು ಮತ್ತು ಇಂಟರ್ನೆಟ್‌ ಬಳಕೆಯ ಮೇಲೆ ಕಣ್ಗಾವಲು ಇರಿಸಬಲ್ಲ ಸೇವಾದಾತರು (ಮೊಬೈಲ್‌ ಕಂಪನಿ ಇತ್ಯಾದಿ) ಮತ್ತು ಸರ್ಕಾರಿ ಸಂಸ್ಥೆಗಳು (ಸೈಬರ್‌ ಪೊಲೀಸ್, ಗುಪ್ತಚರ ಇಲಾಖೆ) ಕಣ್ತಪ್ಪಿಸಬಲ್ಲ ಗೂಢಲಿಪಿಯಲ್ಲಿರುವ ಮಾಹಿತಿಯನ್ನು (encrypted online content) ಸಾಮಾನ್ಯವಾಗಿ ಡಾರ್ಕ್‌ವೆಬ್‌ ಅಥವಾ ಡಾರ್ಕ್‌ನೆಟ್ ಎಂದು ಕರೆಯುತ್ತಾರೆ. 

ಡಾರ್ಕ್‌ನೆಟ್‌ ಬಳಕೆಗೆ ಟಾರ್‌ನಂಥ ವಿಶಿಷ್ಟ ಬ್ರೌಸರ್‌ಗಳು ಬೇಕು. ಸಾಮಾನ್ಯವಾಗಿ ವಿಪಿಎನ್‌ (ವರ್ಚುವಲ್ ಪ್ರೈವೇಟ್‌ ನೆಟ್‌ವರ್ಕ್‌) ಮೂಲಕ ಡಾರ್ಕ್‌ವೆಬ್‌ ಲೋಕದೊಳಗೆ ಪ್ರವೇಶಿಸುತ್ತಾರೆ. ಇಲ್ಲಿ ಆನ್‌ಲೈನ್‌ ಸ್ಟೋರ್‌ಗಳ ಮಾದರಿಯ ಹಲವು ಡಾರ್ಕ್‌ಸೈಟ್‌ಗಳಿವೆ. ಅಲ್ಲಿ ಕದ್ದ ವಸ್ತುಗಳು, ಅತಿಸೂಕ್ಷ್ಮ ದತ್ತಾಂಶ, ಮಾದಕ ದ್ರವ್ಯ, ಶಸ್ತ್ರಾಸ್ತ್ರಗಳು ಮಾರಾಟಕ್ಕಿವೆ. ಸಾಮಾನ್ಯವಾಗಿ ಬಿಟ್‌ಕಾಯಿನ್‌ಗಳಲ್ಲಿ ವಹಿವಾಟು ನಡೆಯುತ್ತದೆ. ಖರೀದಿಸಿದ ವಸ್ತುಗಳನ್ನು ಕಾನೂನಿನ ಕಣ್ತಪ್ಪಿಸಿ ಕೊಳ್ಳುಗರ ಕೈಗೊಪ್ಪಿಸುವ ಪ್ರತ್ಯೇಕ ಜಾಲವನ್ನೂ ಈ ವೆಬ್‌ಸೈಟ್‌ಗಳು ಹೊಂದಿವೆ.

‘ಗುಲ್ಟು’ ಚಲನಚಿತ್ರ ಡಾರ್ಕ್‌ವೆಬ್‌ ದಂಧೆಯ ಹಲವು ಮುಖಗಳನ್ನು ಪರಿಚಯಿಸಿದೆ.

ನಮ್ಮ ಕಾರ್ಡ್‌ಗಳನ್ನು ಜೋಪಾನ ಮಾಡಿಕೊಳ್ಳುವುದು ಹೇಗೆ?

1) ಎಟಿಎಂ ಅಥವಾ ಪಿಒಎಸ್‌ ಮಿಷಿನ್‌ಗಳಲ್ಲಿ ಕಿಪ್ಯಾಡ್‌ಗಳು ಮತ್ತು ಕಾರ್ಡ್‌ ತೂರಿಸುವ ಜಾಗ ಸಡಿಲವಾಗಿದೆಯೇ? ಕಿತ್ತು ಹೋಗಿದೆಯೇ? ಅಂಥ ಎಟಿಎಂಗಳನ್ನು ಬಳಸಬೇಡಿ.

2) ಕಿಪ್ಯಾಡ್‌ ಮೇಲೆ ಬೆರಳಾಡಿದಾಗ ಅಂಟಿನ ಪದಾರ್ಥ ಇದ್ದುದು ಅನುಭವಕ್ಕೆ ಬಂತೆ? ಅಲ್ಲೆಲ್ಲಾದರೂ ಸೆಲುಟೇಪ್‌ನ ತುಣುಕು ಬಿದ್ದಿತ್ತೆ? ಅಂಥ ಎಟಿಎಂಗಳಿಂದ ದೂರ ಇರಿ.

3) ಎಟಿಎಂ ಮಿಷಿನ್‌ ಮೇಲೆ ಮತ್ತು ಪಿಒಎಸ್‌ಗಳಲ್ಲಿ ಪಿನ್ ನಮೂದಿಸುವಾಗ ಮತ್ತೊಂದು ಕೈಯಿಂದ ಮುಚ್ಚಿಕೊಳ್ಳಿ.

4) ಪಿನ್ ನಂಬರ್, ಸಿವಿಸಿ ನಂಬರ್‌ ಯಾರಿಗೂ ಹೇಳಬೇಡಿ.

5) ಮೆಗ್ನಾಟಿಕ್ ಸ್ಟ್ರಿಪ್ ಇರುವ ಕಾರ್ಡ್‌ಗಳ ಬಳಕೆ ನಿಲ್ಲಿಸಿ. ಚಿಪ್ ಕಾರ್ಡ್‌ಗಳನ್ನು ಮಾತ್ರ ಬಳಸಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)