ಗುರುವಾರ , ಜೂನ್ 24, 2021
22 °C
ಉಕ್ಕಿ ಹರಿದ ನದಿಗಳು, ಹತ್ತಾರು ಕಟ್ಟಡಗಳ ಕುಸಿತ

ಪುಣೆ: ಮಳೆಗೆ 17 ಬಲಿ

ಪಿಟಿಐ, ಎಎಫ್‌ಪಿ, ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಪುಣೆ: ಪುಣೆ ನಗರ ಮತ್ತು ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಭಾರಿ ಮಳೆಯಾಗಿ, ದಿಢೀರ್ ಪ್ರವಾಹ ಉಂಟಾಗಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಜಿಲ್ಲೆಯಾದ್ಯಂತ 17 ಜನರು ಮೃತಪಟ್ಟಿದ್ದಾರೆ.

ನಗರದ ಮುಲಾ–ಮುಠಾ ನದಿ ಉಕ್ಕಿ ಹರಿದ ಕಾರಣ, ಹಲವು ವಾಹನಗಳು ಕೊಚ್ಚಿ ಹೋಗಿವೆ. ಹೀಗೆ ಕೊಚ್ಚಿ ಹೋದ ವಾಹನಗಳಲ್ಲಿ ನಾಲ್ಕು ಶವಗಳು ಪತ್ತೆಯಾಗಿವೆ. ಕಟ್ಟಡ ಮತ್ತು ಕಾಂಪೌಂಡ್‌ ಕುಸಿದು ಆರು ಜನ ಮೃತಪಟ್ಟಿದ್ದಾರೆ. ಅವಶೇಷಗಳ ತೆರವು ಕಾರ್ಯ ಇನ್ನೂ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮುಠಾ ನದಿಯ ಸೆಳೆತಕ್ಕೆ ಸಿಲುಕಿ ಮೂವರು ವ್ಯಕ್ತಿಗಳು ಕೊಚ್ಚಿಹೋಗಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪುಣೆ–ಸಾತಾರ ಹೆದ್ದಾರಿಯ (ಮುಂಬೈ–ಬೆಂಗಳೂರು ಹೆದ್ದಾರಿಯ ಭಾಗ) ಹಲವೆಡೆ ಭೂಕುಸಿತ ಉಂಟಾಗಿದೆ. ಪುಣೆ ನಗರದ ಹೊರವಲಯದ ಶಿವಪುರಿಯಲ್ಲಿ ಹೆದ್ದಾರಿಗೆ ಹೊಂದಿಕೊಂಡಿದ್ದ ಷೆಡ್‌ನಲ್ಲಿ ಮಲಗಿದ್ದ ನಾಲ್ವರು ಕೂಲಿಯಾಳುಗಳು ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.

ಬುಧವಾರ ಸಂಜೆಯ ವೇಳೆಗೆ ಪುಣೆ ಜಿಲ್ಲೆಯಾದ್ಯಂತ ಭಾರಿ ಮಳೆ ಆರಂಭವಾಗಿತ್ತು. ಹೀಗಾಗಿ ಪುಣೆ ಜಿಲ್ಲೆಯನ್ನು ಹಾದುಹೋಗುವ ಬಹುತೇಕ ಎಲ್ಲಾ ನದಿಗಳು ಉಕ್ಕಿ ಹರಿಯಲು ಆರಂಭಿಸಿದವು.

ಪುಣೆ ನಗರದಲ್ಲಿ ಸಂಗಮವಾಗುವ ಮುಲಾ ಮತ್ತು ಮುಠಾ ನದಿಗಳಲ್ಲಿ ರಾತ್ರಿ ವೇಳೆಗೆ ಪ್ರವಾಹ ಉಂಟಾಯಿತು. ಅಲ್ಲದೆ ನಗರದ ಬಹುತೇಕ ಎಲ್ಲಾ ರಾಜಕಾಲುವೆಗಳು ಮತ್ತು ಒಳಚರಂಡಿಗಳು ಉಕ್ಕಿ ಹರಿಯಲಾರಂಭಿಸಿದವು. ಇದರಿಂದ ನಗರದ ಬಹುತೇಕ ಕಡೆ ದಿಢೀರ್ ಪ್ರವಾಹ ಉಂಟಾಯಿತು.

ಪ್ರವಾಹದಲ್ಲಿ ನೂರಾರು ಕಾರುಗಳು, ಆಟೊಗಳು ಮತ್ತು ದ್ವಿಚಕ್ರವಾಹನಗಳು ಕೊಚ್ಚಿಹೋಗಿವೆ. ಕೆಲವು ಕಾರುಗಳು ನದಿಯಲ್ಲಿ ಕೊಚ್ಚಿ ಹೋಗಿದ್ದು, ಸೇತುವೆಗಳಿಗೆ ಸಿಲುಕಿಕೊಂಡಿವೆ. ಹೀಗೆ ಕೊಚ್ಚಿ ಹೋಗಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಕೊಚ್ಚಿಹೋಗಿರುವ ಹಲವು ಕಾರುಗಳನ್ನು ಇನ್ನೂ ಮೇಲಕ್ಕೆತ್ತಬೇಕಿದೆ, ಅವುಗಳಲ್ಲಿ ಯಾರಾರೂ ಸಿಲುಕಿದ್ದಾರೆಯೇ ಇಲ್ಲವೇ ಎಂಬುದು ನಂತರವಷ್ಟೇ ತಿಳಿಯಲಿದೆ.

ಪ್ರವಾಹದ ರಭಸ ತೀವ್ರವಾಗಿದ್ದ ಕಾರಣ ರಸ್ತೆಯ ಮಗ್ಗುಲಿನಲ್ಲಿ ಇದ್ದ ಹಲವು ಕಾಂಪೌಂಡ್‌, ಕಟ್ಟಡಗಳು ಕುಸಿದವು. ರಾಜಕಾಲುವೆ ಮತ್ತು ಒಳಚರಂಡಿಗಳ ಸಮೀಪದಲ್ಲಿ ನೆಲಕುಸಿಯಿತು. ಕಟ್ಟಡ ಮತ್ತು ಕಾಂಪೌಂಡ್‌ಗಳ ಅವಶೇಷಗಳ ಅಡಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇದೆ. ತೆರವು ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳ್ಳುವ ವೇಳೆಗೆ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಹೇಳಿದೆ.

ಪುಣೆ ನಗರದಿಂದ ನೈರುತ್ಯ ದಿಕ್ಕಿನಲ್ಲಿರುವ ಬಾರಾಮತಿ ಪಟ್ಟಣದಲ್ಲೂ ಭಾರಿ ಪ್ರವಾಹ ತಲೆದೋರಿದೆ. ಲೋನಾವಾಲಾ ಪರ್ವತ ಪ್ರದೇಶದಲ್ಲಿ ಭಾರಿ ಮಳೆಯಾದ ಕಾರಣ ಖಾರಾ ನದಿಯಲ್ಲಿ ಒಳಹರಿವು ಹೆಚ್ಚಾಗಿತ್ತು. ಬಾರಾಮತಿಯ ಹೊರವಲಯದಲ್ಲಿ ಈ ನದಿಗೆ ಕಟ್ಟಲಾಗಿರುವ ನಾಝರ್‌ ಜಲಾಶಯವು ಗುರುವಾರ ರಾತ್ರಿಯ ವೇಳೆಗೆ ಪೂರ್ಣ ಭರ್ತಿಯಾಗಿತ್ತು. ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟ ಕಾರಣ ಬಾರಾಮತಿಯಲ್ಲಿ ದಿಢೀರ್ ಪ್ರವಾಹ ತಲೆದೋರಿತು.

ಪಟ್ಟಣದ ಬಹುತೇಕ ವಸತಿ ಪ್ರದೇಶಗಳು ತಗ್ಗಿನ ಸ್ಥಳಗಳಲ್ಲಿ ಇವೆ. ಇವೆಲ್ಲವೂ ಜಲಾವೃತವಾಗಿವೆ. 16,000ಕ್ಕೂ ಹೆಚ್ಚು ಜನರನ್ನು ಇಲ್ಲಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು