ಶನಿವಾರ, ಫೆಬ್ರವರಿ 27, 2021
31 °C

ಟಿಕೆಟ್‌ ವಂಚಿತರು ನಿರಾಶರಾಗಬೇಕಿಲ್ಲ: ಹರಿಯಾಣ ಸಿಎಂ ಖಟ್ಟರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡಿಗಡ: ಬಿಜೆಪಿಯ ಟಿಕೆಟ್‌ ವಂಚಿತರು ನಿರಾಶರಾಗಬೇಕಿಲ್ಲ, ಅವರನ್ನು ಪಕ್ಷ ಮರೆಯುವುದಿಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್‌ ಖಟ್ಟರ್ ಮಂಗಳವಾರ ತಿಳಿಸಿದ್ದಾರೆ. 

ಯಾವುದೇ ರಾಜಕೀಯ ಪಕ್ಷ ತಾಯಿ ಇದ್ದಂತೆ, ಬಿಜೆಪಿಯ ಟಿಕೆಟ್‌ ವಂಚಿತರು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಹಾಗೇ ಚುನಾವಣೆ ಬಳಿಕ ಪಕ್ಷ ಅವರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಹರಿಯಾಣ: ಬಿಜೆಪಿ ಗೆಲ್ಲುವ ನೆಚ್ಚಿನ ಪಕ್ಷ

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖಟ್ಟರ್‌ ಟಿಕೆಟ್‌ ವಂಚಿತರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.

ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಯ ಕಾವು ರಂಗೇರುತ್ತಿದ್ದು ಬಿಜೆಪಿಯು 78 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು ಇಬ್ಬರು ಸಚಿವರು ಸೇರಿದಂತೆ 7 ಜನ ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿದೆ. 

ಸಚಿವರಾದ ವಿಪುಲ್‌ ಗೋಯಲ್, ರಾವ್‌ ನರ್ಬಿರ್ ಸಿಂಗ್‌ ಹಾಗೂ ವಿಧಾನಸಭೆ ಉಪಾಧ್ಯಕ್ಷರಾದ ಸಂತೋಷ್‌ ಯಾದವ್‌ ಅವರಿಗೆ ಟಿಕೇಟ್‌ ನಿರಾಕರಿಸಲಾಗಿದೆ. ಇವರ ಜೊತೆಗೆ 7 ಜನ ಹಾಲಿ ಶಾಸಕರಿಗೂ ಟಿಕೆಟ್‌ ನೀಡಲಾಗಿಲ್ಲ. 

ಇದನ್ನೂ ಓದಿ: ಹರಿಯಾಣ: ಕ್ರೀಡಾಳುಗಳಿಗೆ ಬಿಜೆಪಿ ಮಣೆ; ಯೋಗೇಶ್ವರ ದತ್‌, ಬಬಿತಾ ಪೋಗಟ್‌ಗೆ ಟಿಕೆಟ್

90 ಸ್ಥಾನಗಳ ಪೈಕಿ ಬಿಜೆಪಿ 78 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಒಂದೆರಡು ದಿನಗಳಲ್ಲಿ ಉಳಿದ 12 ಸ್ಥಾನಗಳ ಅಭ್ಯರ್ಥಿಗಳನ್ನು ಪ್ರಕಟಿಸಲಾಗುವುದು ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ. 

ಈ ಸಲ ಮೂವರು ಒಲಿಂಪಿಕ್‌ ಕ್ರೀಡಾಪಟುಗಳಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಅವರು ಗೆಲ್ಲಲಿದ್ದಾರೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ. 

2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತವನ್ನು ಪಡೆದಿತ್ತು. ಆದರೆ ಈ ಬಾರಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿದೆ. 

ಇದನ್ನೂ ಓದಿ: ಹರಿಯಾಣ: ಬಿಜೆಪಿ ಜತೆ ಎಸ್‌ಎಡಿ ಮೈತ್ರಿ ಇಲ್ಲ

ಹರಿಯಾಣ ವಿಧಾನಸಭೆಗೆ ಅಕ್ಟೋಬರ್‌ 21ರಂದು ನಡೆಯಲಿರುವ ಚುನಾವಣೆಯು ಅಧಿಕಾರಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ನೇತೃತ್ವದ ವಿರೋಧಪಕ್ಷಗಳ ಮೈತ್ರಿಯ ನಡುವಿನ ನೇರ ಹಣಾಹಣಿಯಾಗಲಿದೆ.

ಹರಿಯಾಣದಲ್ಲಿ ಕಾಂಗ್ರೆಸ್‌ಪಕ್ಷವು ಗಳಿಸುವ ಸ್ಥಾನಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಳೆದ ಕೆಲವು ವರ್ಷಗಳಿಂದ ಪಕ್ಷದ ಮತಪ್ರಮಾಣವು ಏರಿಕೆಯಾಗುತ್ತಲೇ ಇದೆ. 2014ರ ಲೋಕಸಭಾ ಚುನಾವಣೆಯಲ್ಲಿ ಶೇ 22.99ರಷ್ಟು ಮತಗಳನ್ನು ಗಳಿಸಿದ್ದ ಕಾಂಗ್ರೆಸ್‌, 2019ರ ಚುನಾವಣೆಯಲ್ಲಿ ಅದನ್ನು ಶೇ 29ಕ್ಕೆ ಏರಿಸಿಕೊಂಡಿತ್ತು. ಈ ಏರಿಕೆಯನ್ನು ಸ್ಥಾನಗಳಾಗಿ ಪರಿವರ್ತಿಸಲು ಕಾಂಗ್ರೆಸ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ. 

ಇದನ್ನೂ ಓದಿ: ಹರಿಯಾಣ: ಐಎನ್‌ಎಲ್‌ಡಿ ಉಳಿವೇ ಕಷ್ಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು