ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪಿಣರಾಯಿ ವಿಜಯನ್

Last Updated 9 ಡಿಸೆಂಬರ್ 2018, 9:36 IST
ಅಕ್ಷರ ಗಾತ್ರ

ಕಣ್ಣೂರು (ಕೇರಳ): ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಭಾನುವಾರಉದ್ಘಾಟಿಸಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕಣ್ಣೂರಿನಿಂದ ಅಬುದಾಬಿಗೆ ಹಾರಾಟ ನಡೆಸುವ ಏರ್ ಇಂಡಿಯಾ ಏಕ್ಸ್ ಪ್ರೆಸ್ ವಿಮಾನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಕಣ್ಣೂರು ನಿಲ್ದಾಣದಿಂದ ವಿಮಾನ ಹಾರಾಟ ಆರಂಭವಾಗಿದೆ.

ಕಣ್ಣೂರಿನಿಂದ ಚೊಚ್ಚಲ ಹಾರಾಟ ನಡೆಸಿದ ಏರ್ ಇಂಡಿಯಾ 737 ಬೋಯಿಂಗ್ ವಿಮಾನದಲ್ಲಿ 185 ಪ್ರಯಾಣಿಕರಿದ್ದರು. ಇಂದು ಸಂಜೆ ಇದೇ ವಿಮಾನ ಕಣ್ಣೂರಿಗೆ ವಾಪಸ್ ಆಗಲಿದೆ. ನಾಳೆಯಿಂದ ಸರಿಯಾದ ಸಮಯಕ್ಕೆ ವಿಮಾನ ಸೇವೆ ಲಭ್ಯವಾಗಲಿದೆ.ಬೆಳಗ್ಗೆ 11 ಗಂಟೆಗೆಬೆಂಗಳೂರಿನಿಂದ ಗೋ ಏರ್ ವಿಮಾನ ಕಣ್ಣೂರಿಗೆ ತಲುಪಿದೆ. ಗೋ ಏರ್ ವಿಮಾನ ಮತ್ತು ಇಂಡಿಗೊ ವಿಮಾನಗಳು ಕಣ್ಣೂರಿನಿಂದ ಸೇವೆ ಆರಂಭಿಸಲಿವೆ.

ಯುಡಿಎಫ್ ಸರ್ಕಾರವನ್ನು ಟೀಕಿಸಿದ ಪಿಣರಾಯಿ
1996ರಲ್ಲಿಯೇ ಕಣ್ಣೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯ ಆರಂಭಿಸಿದ್ದರೂ ಅದನ್ನು ಪೂರ್ಣಗೊಳಿಸಲು ಇಷ್ಟೊಂದು ಸಮಯ ಬೇಕಿರಲಿಲ್ಲ ಎಂದು ವಿಮಾನ ನಿಲ್ದಾಣ ಉದ್ಘಾಟಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.2001ರಿಂದ 2006ರ ವರೆಗೆ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳು ನಡೆದಿಲ್ಲ. 2006ರಲ್ಲಿ ವಿ.ಎಸ್.ಅಚ್ಯುತಾನಂದನ್ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಮಾನ ನಿಲ್ದಾಣದ ಕಾರ್ಯ ಪುನರಾರಂಭಗೊಂಡಿದ್ದು. ಆನಂತರ 2011 -2016ರ ಅವಧಿಯಲ್ಲಿ ನಿರ್ಮಾಣ ಕಾರ್ಯ ಹೇಗೆ ನಡೆಯಿತು ಎಂಬುದರ ಬಗ್ಗೆ ನಾನು ಇಲ್ಲಿ ಹೇಳುವುದಿಲ್ಲ. ಎಲ್ಲಿ ಬೇಕಾದರೂ ಲ್ಯಾಂಡಿಂಗ್ ಮಾಡಬಹುದಾದ ವಾಯುಸೇನೆಯ ವಿಮಾನವನ್ನು ಅಂದು ಉದ್ಘಾಟನೆಗೆ ತಂದಿದ್ದರು.ಉದ್ಘಾಟಿಸುತ್ತೇವೆ ಎಂದು ಜನರಿಗೂ ಆಮಂತ್ರಣ ನೀಡಿದ್ದರು.ಅದೇ ವಿಮಾನ ನಿಲ್ದಾಣವನ್ನು 2016ರಲ್ಲಿ ಅಧಿಕಾರಕ್ಕೇರಿದ ನಮ್ಮ ಸರ್ಕಾರ 2 ವರ್ಷಗಳಲ್ಲಿ ಎಲ್ಲ ಕೆಲಸಗಳನ್ನು ಮಾಡಿ ಉದ್ಘಾಟಿಸಿದೆ ಎಂದು ಈ ಹಿಂದೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಯುಡಿಎಫ್ ಸರ್ಕಾರವನ್ನು ಟೀಕಿಸಿದ್ದಾರೆ.

ಕಾರ್ಯಕ್ರಮ ಬಹಿಷ್ಕರಿಸಿದ ವಿಪಕ್ಷ
ವಿಮಾನ ನಿಲ್ದಾಣ ಉದ್ಘಾಟನೆಗೆ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಆಮಂತ್ರಿಸಿಲ್ಲ, ಹಾಗಾಗಿ ವಿಪಕ್ಷ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ.ಅದೇ ವೇಳೆ ಶಬರಿಮಲೆ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಅಭಿವೃದ್ಧಿಯ ಸಂಕೇತ: ಸುರೇಶ್ ಪ್ರಭು
ಕಣ್ಣೂರು ವಿಮಾನ ನಿಲ್ದಾಣ ಅಭಿವೃದ್ಧಿಯ ಸಂಕೇತಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಿದ ಕೇರಳ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಹೆಚ್ಚು ಅಭಿವೃದ್ಧಿಗಳಿಗೆ ಅವಕಾಶವಿರುವ ರಾಜ್ಯವಾಗಿದೆ ಕೇರಳ. ಕೇರಳದ ಅಭಿವೃದ್ಧಿಯ ಮುನ್ನುಡಿಯಾಗಿ ಕಣ್ಣೂರು ವಿಮಾನ ನಿಲ್ದಾಣವನ್ನು ಕಾಣಬಹುದು.
ನಾಲ್ಕು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ ಕೇರಳ. ಅನಿವಾಸಿ ಭಾರತೀಯರು, ಟೂರಿಸಂ ಎಲ್ಲವೂ ಇದಕ್ಕೆ ಕಾರಣವಾಗಿದೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜತೆಯಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಇದು.ಕೇರಳದ ಅಭಿವೃದ್ಧಿಗಾಗಿ ಎಲ್ಲ ರೀತಿಯ ಸಹಾಯವನ್ನು ಮಾಡಲು ನಾವು ಸಿದ್ಧರಿದ್ದೇವೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT