ತಮಿಳುನಾಡಿನಲ್ಲಿ ಶರವಣ ಭವನ ಸೇರಿ 32 ಕಡೆ ಐಟಿ ದಾಳಿ

7

ತಮಿಳುನಾಡಿನಲ್ಲಿ ಶರವಣ ಭವನ ಸೇರಿ 32 ಕಡೆ ಐಟಿ ದಾಳಿ

Published:
Updated:

ಚೆನ್ನೈ: ‘ಸ್ಯಾಂಡಲ್‌ವುಡ್‌’ನ ಪ್ರಭಾವಿ, ನಿರ್ಮಾಪಕರು, ನಿರ್ದೇಶಕರು ಹಾಗೂ ನಟರೂ ಸೇರಿದಂತೆ ಭಾರಿ ಕುಳಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಹೊಸ ವರ್ಷದ ಆರಂಭದಲ್ಲೇ ಭಾರಿ ‘ಶಾಕ್‌’ ನೀಡಿದ್ದಾರೆ. ಇದರ ಬೆನ್ನಲ್ಲೇ ತಮಿಳುನಾಡಿನ ಹಲವು ಜನಪ್ರಿಯ ರೆಸ್ಟೋರೆಂಟ್‌ಗಳು ಮತ್ತು ಉದ್ದಿಮೆದಾರರ ಮನೆಗಳ ಮೇಲೂ ದಾಳಿ ನಡೆಸಿದೆ. 

ತಮಿಳುನಾಡಿನ ಪ್ರಸಿದ್ಧ ಶರವಣ ಭವನ, ಗ್ರ್ಯಾಂಡ್‌ ಸ್ವೀಟ್ಸ್‌, ಹಾಟ್‌ ಬ್ರೆಡ್ಸ್‌, ಅಂಜಪರ್‌ ಗ್ರೂಪ್‌ ಮತ್ತು ಇತರ ಜನಪ್ರಿಯ ಕೆಫೆ, ರೆಸ್ಟೋರೆಂಟ್‌ಗಳು ಸೇರಿದಂತೆ 32 ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ವಂಚನೆ ಮಾಡಿರುವ ದೂರುಗಳು ಬಂದಿರುವುದನ್ನು ಆಧರಿಸಿ, 32 ಸ್ಥಳಗಳಲ್ಲಿ ಕಚೇರಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. 100 ಜನರ ಐಟಿ ಅಧಿಕಾರಿಗಳ ತಂಡ ದಾಳಿಯಲ್ಲಿ ಪಾಲ್ಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲಾಖೆಗೆ ಲಭ್ಯವಾಗಿರುವ ಮಾಹಿತಿ ಅನ್ವಯ ತೆರಿಗೆ ವಂಚನೆ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ಜನಪ್ರಿಯವಾದ ದಕ್ಷಿಣ ಭಾರತೀಯ ಸಸ್ಯಾಹಾರಿ ಪಾಕ ಪದ್ಧತಿಯ ಸರವಣ ಭವನವು ಚೆನ್ನೈನಲ್ಲಿ 20 ಸೇರಿದಂತೆ ದೇಶದಲ್ಲಿ 33 ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿದೆ. ಜತೆಗೆ, ಆಗ್ನೇಯ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಯುರೋಪ್‌ ಮತ್ತು ಉತ್ತರ ಅಮೆರಿಕ ಸೇರಿದಂತೆ ವಿಶ್ವದಾದ್ಯಂತ 47 ಶಾಖೆಗಳನ್ನು ಹೊಂದಿದೆ.

ಚೆಟ್ಟಿನಾಟು ಪಾಕಪದ್ಧತಿಗೆ ಹೆಸರಾದ ಅಂಜಪರ್‌ ಗ್ರೂಪ್‌ ಮತ್ತೊಂದು ರೆಸ್ಟೋರೆಂಟ್‌ ಆಗಿದ್ದು, ಚೆನ್ನೈ, ಈರೋಡ್‌, ಮಧುರೈ, ಕೊಯಮತ್ತೂರು, ಸೇಲಂ ಮತ್ತು ಬೆಂಗಳೂರು ಸೇರಿದಂತೆ ದೇಶದೆಲ್ಲೆಡೆ 30 ಶಾಖೆಗಳನ್ನು ಹೊಂದಿದೆ. ಜತೆಗೆ, ಶ್ರೀಲಂಕಾ, ಸಿಂಗಾಪುರ, ಮಲೇಷ್ಯಾ, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ಸೌದಿ ಅರೆಬಿಯಾ ರಾಷ್ಟ್ರಗಳಲ್ಲಿ ಶಾಖೆಗಳನ್ನು ಹೊಂದಿದೆ. 
 

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !