ವಿಡಿಯೊ ಸ್ಟೋರಿ: ಗೆಹ್ಲೋಟ್ ಕುಟುಂಬದ ಕುಡಿಗೆ ಜೋಧಪುರ ಒಲಿಯುವುದೇ?

ಶನಿವಾರ, ಮೇ 18, 2019
27 °C
ಕಣದಲ್ಲಿ ಕುಡಿಗಳು

ವಿಡಿಯೊ ಸ್ಟೋರಿ: ಗೆಹ್ಲೋಟ್ ಕುಟುಂಬದ ಕುಡಿಗೆ ಜೋಧಪುರ ಒಲಿಯುವುದೇ?

Published:
Updated:
Prajavani

ಕುಟುಂಬ ರಾಜಕಾರಣವಾಗಲಿ, ಅಪ್ಪನ ಭದ್ರಕೋಟೆಯಿಂದ ಮಕ್ಕಳು ಕಣಕ್ಕಿಳಿಯುವ ವಿದ್ಯಮಾನವಾಗಲಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶವ್ಯಾಪಿ ಕಂಡು ಬರುತ್ತಿರುವ ಈ ಬೆಳವಣಿಗೆ. ಈ ಬಾರಿಯ ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಕಣಕ್ಕಿಳಿದಿರುವ, ರಾಜಕೀಯವನ್ನೇ ಉಸಿರಾಡುತ್ತಿರುವ ಕುಟುಂಬದ ಕುಡಿಗಳನ್ನು ಪರಿಚಯಿಸುವ ವಿಡಿಯೊ ಸರಣಿಯ 3ನೇ ಭಾಗದಲ್ಲಿ ರಾಜಸ್ಥಾನದ ಜೋಧ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವೈಭವ್‌ ಗೆಹ್ಲೋಟ್‌ ಅವರನ್ನು ಪರಿಚಯಿಸಲಾಗಿದೆ.

ರಾಜಸ್ಥಾನದ ಜೋಧ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ ಬಾರಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಮಗ 38ರ ಹರೆಯದ ವೈಭವ್‌ ಗೆಹ್ಲೋಟ್‌ ಕಣಕ್ಕಿಳಿದಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಅಡಿ ಇಡುತ್ತಿರುವ ವೈಭವ್‌ ನಾಮಪತ್ರ ಸಲ್ಲಿಸಿದ ರೀತಿ ವಿಶಿಷ್ಟವಾಗಿತ್ತು. ಏಪ್ರಿಲ್‌ 1ರಂದು ನಾಮಪತ್ರ ಸಲ್ಲಿಕೆಗೆ ಸಕಲ ಸಿದ್ಧತೆ ನಡೆದಿತ್ತು. ಇತ್ತ ಅಭಿಮಾನಿಗಳು, ಕಾರ್ಯಕರ್ತರು, ಕುಟುಂಬದವರು ಕಾಯುತ್ತಾ ಇದ್ದರೆ, ಅತ್ತ ಜೈಪುರದಿಂದ ಬಂದ ರೈಲಿನಿಂದ ಆಗಮಿಸಿದ ಜನರ ನಡುವಿನಿಂದ ನುಗ್ಗಿ ಬಂದರು ವೈಭವ್‌.

ಇದನ್ನೂ ಓದಿ: ಅಪ್ಪಂದಿರ ಅಖಾಡದಲ್ಲಿ ಮಕ್ಕಳ ತಾಲೀಮು

ಅದು ತಮ್ಮನ್ನು ತಾವು ‘ಜನಸಾಮಾನ್ಯ’, ‘ಸರಳ ಜೀವಿ’ ಎಂದು ಬಿಂಬಿಸಲು ಮಾಡಿಕೊಂಡಿದ್ದ ಪೂರ್ವಯೋಜಿತ ತಯಾರಿ. ಮಡದಿ ಮತ್ತು ಮಗಳೂ ಅವರ ಜೊತೆಯಲ್ಲೇ ಪ್ರಯಾಣ ಮಾಡಿದ್ದರು. ಬರುತ್ತಿದ್ದಂತೆ ಅಶೋಕ್‌ ಗೆಹ್ಲೋಟ್‌ ಅವರ ಹಿರಿಯ ಸಹೋದರಿ ವಿಮಲಾ ದೇವಿ ಅವರ ಆಶೀರ್ವಾದ ಪಡೆದು, ಬಳಿಕ ನಾಮಪತ್ರ ಸಲ್ಲಿಸಲು ಮುಂದಾದರು.

ವೃತ್ತಿಯಲ್ಲಿ ವಕೀಲರಾಗಿರುವ ವೈಭವ್‌ ಪುಣೆಯ ಐಎಲ್‌ಎಸ್‌ ಕಾನೂನು ಕಾಲೇಜಿನಿಂದ ಪದವಿ ಪಡೆದಿದ್ದಾರೆ. ತಮ್ಮ ತಂದೆ ರಾಜಕೀಯ ಪ್ರವೇಶಿಸಿ ನೆಲೆಕಂಡುಕೊಂಡ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. 1980ರಲ್ಲಿ ಮೊದಲ ಸಲ ಇಲ್ಲಿಂದ ಕಣಕ್ಕಿಳಿದಿದ್ದ ಅಪ್ಪ ಗೆಹ್ಲೋಟ್‌, ಈ ಕ್ಷೇತ್ರದಿಂದ ಒಟ್ಟು ಐದು ಬಾರಿ ಸಂಸತ್‌ ಪ್ರವೇಶಿಸಿದ್ದಾರೆ. ವೈಭವ್‌ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ್ದ ಅವರು ತನಗೆ ದೊರೆತಂತೆ ಪುತ್ರನಿಗೂ ಈ ಕ್ಷೇತ್ರದ ಜನರ ಆಶೀರ್ವಾದ ಲಭಿಸಬೇಕು ಎಂದಿದ್ದರು.

ಪುತ್ರನಿಗೆ ಟಿಕೆಟ್‌ ಸಿಗುವಂತೆ ನೋಡಿಕೊಂಡದ್ದಕ್ಕೆ ಪಕ್ಷದಲ್ಲಿ ಮೂಡಬಹುದಾದ ಅಸಮಾಧಾನವನ್ನು ತಡೆಯಲು ‘ವೈಭವ್‌ ಕೂಡ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾನೆ’ ಎಂದು ಪದೇಪದೇ ಒತ್ತಿ ಹೇಳುತ್ತಿದ್ದಾರೆ ಗೆಹ್ಲೋಟ್‌. ತಂದೆಯ ಮಾತು ಸತ್ಯವೆಂದು ಹೇಳಲು ವೈಭವ್‌ ಅವರೂ ಹಿಂದೆ ಬೀಳಲಿಲ್ಲ.

ಇದನ್ನೂ ಓದಿ: ವಿಡಿಯೊ ಸ್ಟೋರಿ: ಅಪ್ಪ ಕಮಲ್ ಮುಖ್ಯಮಂತ್ರಿ ಮಗ ನಕುಲ್‌ಗಿದು ಮೊದಲ ಸ್ಪರ್ಧೆ

‘ನಾನು ವಿದೇಶದಲ್ಲಿದ್ದು ಬಂದವನಲ್ಲ. ಅಥವಾ ರಾಜಸ್ಥಾನದ ಹೊರಗಿದ್ದು ಯಾವುದೋ ವ್ಯವಹಾರ ಮಾಡಿಕೊಂಡಿದ್ದು ಇದೀಗ ನೇರವಾಗಿ ಬಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸದೆ ಕಳೆದ ಹದಿನೈದು ವರ್ಷಗಳಿಂದ ದುಡಿದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ‘2009ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಆಗ ರಾಜಸ್ಥಾನ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸಿ.ಪಿ. ಜೋಶಿ ಅವರು ತೋಂಕ್‌–ಸವಾಯ್‌ ಮಾಧೋಪುರ್‌ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಪ್ರಸ್ತಾಪಿಸಿದ್ದರು. ಆದರೆ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ನನ್ನ ತಂದೆ ಗೆಹ್ಲೋಟ್‌, ಜೋಶಿ ಅವರ ಪ್ರಸ್ತಾಪವನ್ನು ತಿರಸ್ಕರಿಸಿ ಅವನಿನ್ನೂ ಪಕ್ಷಕ್ಕಾಗಿ ದುಡಿಯಬೇಕಿದೆ ಎಂದಿದ್ದರು. ಒಂದುವೇಳೆ ಆಗ ಒಪ್ಪಿಗೆ ಸಿಕ್ಕಿದ್ದಿದ್ದರೆ, 2009ರಲ್ಲೇ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೆ. ಅಂತೂ ಈಗ ಆ ಅವಕಾಶ ಒದಗಿಬಂದಿದೆ. ಹಾಗಾಗಿ ನನಗೆ ಟಿಕೆಟ್‌ ಸಿಕ್ಕಿರುವುದು ಕ್ಷಿಪ್ರ ಬೆಳವಣಿಗೆ ಏನಲ್ಲ’ ಎಂದೂ ಮಾಧ್ಯಮಗಳ ಎದುರು ವಿವರಿಸಿದ್ದಾರೆ.

ವೈಭವ್‌ ಅವರು ದೆಹಲಿಯ ಏರ್‌ಫೋರ್ಸ್‌ ಬಲ್‌ ಬಿಹಾರಿ ಶಾಲೆಯ ಹಳೇ ವಿದ್ಯಾರ್ಥಿ. 2003ರಲ್ಲಿ ಸರ್ದಾರ್‌ಪುರ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಅಶೋಕ್‌ ಗೆಹ್ಲೋಟ್‌ ಅವರಿಗೆ ಪ್ರಚಾರ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ ವೈಭವ್‌ ಅದಕ್ಕೂ ಮುನ್ನ ರಾಜಸ್ಥಾನ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡುತ್ತಿದ್ದರು. ಆಗಲೇ ರಾಜಕೀಯಕ್ಕೆ ಬಂದರೂ ವೈಭವ್‌ ಎಲ್ಲರ ಗಮನ ಸೆಳೆದದ್ದು 2005ರಲ್ಲಿ. ಯುವ ಕಾಂಗ್ರೆಸ್‌ ಸದಸ್ಯರಾಗಿದ್ದ ಅವರು, ಪ್ರತಿಭಟನೆಯೊಂದರ ಸಂದರ್ಭ ಪೊಲೀಸರಿಂದ ಲಾಠಿ ಪೆಟ್ಟು ತಿಂದದ್ದು ಸುದ್ದಿಯಾಗಿತ್ತು. ಆ ಬಳಿಕ ಮುನ್ನಲೆಗೆ ಬಂದರು.

ಅದಾದ ಬಳಿಕ ಅವರ ಇಮೇಜ್‌ ಬದಲಾಗುತ್ತಾ ಸಾಗಿತು. ರಾಜ್ಯ ಕಾಂಗ್ರೆಸ್ ಕಾರ್ಯನಿರ್ವಾಹಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಈ ವೇಳೆ ತಂದೆ ಪ್ರತಿನಿಧಿಸುತ್ತಿದ್ದ ಜೋಧ್‌ಪುರ ಲೋಕಸಭೆ ಕ್ಷೇತ್ರದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮಾತ್ರವಲ್ಲದೆ ಹಲವು ಚುನಾವಣೆಗಳಲ್ಲಿ ತಂದೆಯ ಕ್ಷೇತ್ರದ ಪ್ರಚಾರದ ಹೊಣೆ ಹೊತ್ತರು. ಜೊತೆಜೊತೆಗೆ, ಮಾರ್ವಾರ್‌ ಪ್ರದೇಶದಲ್ಲಿನ ಇತರ ಅಭ್ಯರ್ಥಿಗಳ ಪರವೂ ಪ್ರಚಾರ ರ‍್ಯಾಲಿಗಳಲ್ಲಿಯೂ ಭಾಗವಹಿಸಲಾರಂಭಿಸಿದರು.

ಇದನ್ನೂ ಓದಿ: ಆಂಧ್ರಪ್ರದೇಶಕ್ಕೆ ಮತ್ತೊಬ್ಬ ‘ನಾಯ್ಡು’ ಆಗುವರೇ ನಾರಾ ಲೋಕೇಶ್?

ಇದೀಗ ಚುನಾವಣಾ ರಾಜಕೀಯದ ಮೊದಲ ಹೆಜ್ಜೆ ಇಡುತ್ತಿರುವ ವೈಭವ್‌ ಹೆಗಲ ಮೇಲೆ ಅಪಾರ ನಿರೀಕ್ಷೆಯ ಹೊರೆ ಇದೆ. ಜಯದ ಮೂಲಕ ಶುಭಾರಂಭ ಮಾಡುವ ಒತ್ತಡದೊಟ್ಟಿಗೆ, ಕಳೆದ ಲೋಕಸಭೆ ವೇಳೆ ಬಿಜೆಪಿ ಪಾಲಾಗಿರುವ ಜೋಧ್‌ಪುರದಲ್ಲಿ ಮತ್ತೊಮ್ಮೆ ‘ಕೈ’ ಮೇಲಾಗಿಸುವ ಸವಾಲೂ ಇದೆ.

ಕ್ಷೇತ್ರ ವ್ಯಾಪ್ತಿಗೆ ಒಟ್ಟು ಎಂಟು ವಿಧಾನಸಭೆಗಳು ಬರುತ್ತವೆ. ಎರಡರಲ್ಲಿ ಬಿಜೆಪಿ ಶಾಸಕರಿದ್ದರೆ, ಐದುಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ಇಲ್ಲಿ ಮೋದಿ ಅಲೆ ಜೋರಾಗಿತ್ತು. ಈ ಬಾರಿ ಬದಲಾದ ಸನ್ನಿವೇಶದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದನ್ನು ಕಾಣಲು ಮೇ 23ರವರೆಗೆ ಕಾಯಲೇಬೇಕು.

(ಮಾಹಿತಿ– ಅಭಿಲಾಷ್, ವಿಡಿಯೊ– ಅಬ್ದುಲ್ ಬಾಸಿತ್)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !