ಉಗ್ರರಿಂದ ಬೆದರಿಕೆ: ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಹಿಂದಕ್ಕೆ!

7
ಜಮ್ಮು–ಕಾಶ್ಮೀರ ನಗರ ಸ್ಥಳೀಯ ಸಂಸ್ಥೆ ಚುನಾವಣೆ

ಉಗ್ರರಿಂದ ಬೆದರಿಕೆ: ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಹಿಂದಕ್ಕೆ!

Published:
Updated:
Deccan Herald

ಶ್ರೀನಗರ:  ಜಮ್ಮು–ಕಾಶ್ಮೀರ ನಗರ ಸ್ಥಳೀಯ ಸಂಸ್ಥೆಗಳ ಮೊದಲ ಹಂತದ ಚುನಾವಣೆಗೆ ಕೇವಲ ಮೂರು ದಿನಗಳ ಬಾಕಿ ಇರುವಂತೆ ಬಿಜೆಪಿಯ 13 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದಾರೆ. ಅಲ್ಲದೆ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. 

ಉಗ್ರರಿಂದ ಬೆದರಿಕೆ ಮತ್ತು ಕಿರುಕುಳದ ಕಾರಣದಿಂದ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ ಎನ್ನಲಾಗಿದೆ. ಗುಲ್‌ ಮುಹಮ್ಮದ್‌ ಖಾನ್‌ ಮತ್ತು ಅವರ ಪತ್ನಿ ಹಾಜಿರಾ ಬೇಗಂ ಅವರಿಗೆ ಸೇರಿದ್ದ ಭತ್ತದ ಹೊಲಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಇವರಿಬ್ಬರೂ ಬಿಜೆಪಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದು, ಈಗ ವಾಪಸ್‌ ಪಡೆದಿದ್ದಾರೆ. 

ಆದರೆ, ‘ಪಕ್ಷದ ನಾಯಕತ್ವದ ಜೊತೆಗಿನ ವೈಮನಸ್ಯದಿಂದ ನಾವು ನಾಮಪತ್ರ ಹಿಂಪಡೆದಿದ್ದೇವೆ’ ಎಂದು ಅನಂತ್‌ನಾಗ್‌ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಘೂಲಂ ಹಸನ್‌ ಭಟ್‌ ಹೇಳಿದ್ದಾರೆ.

ಶ್ರೀನಗರದ ಗೊಜ್ವಾರ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಶೌಕತ್‌ ರಾಜಾ ಎಂಬುವರ ಮನೆಯ ಗೇಟ್‌ ಮೇಲೆ ಪೆಟ್ರೋಲ್‌ ಸುರಿಯಲಾಗಿದೆ. ‘ಮನೆಯ ಗೇಟ್‌ ಬೆಂಕಿಗೆ ಆಹುತಿಯಾಗಿದೆ. ತಕ್ಷಣಕ್ಕೆ ಬೆಂಕಿ ನಂದಿಸಿದ್ದರಿಂದ ಯಾವುದೇ ಸಾವು–ನೋವು ಆಗಿಲ್ಲ’ ಎಂದು ಅವರು ಹೇಳಿದ್ದಾರೆ. 

‘ಬ್ಯಾರೆಲ್‌ಗಟ್ಟಲೇ ಆಸಿಡ್‌ ಅನ್ನು ನಾವು ಈಗಾಗಲೇ ಸಂಗ್ರಹಿಸಿಟ್ಟುಕೊಂಡಿದ್ದೇವೆ. ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೋ ಅವರ ಕಣ್ಣನ್ನು ಸುಡಲು ಸಿದ್ಧವಾಗಿದ್ದೇವೆ. ಹೀಗಾದಾಗ ಮಾತ್ರ, ಗುಂಡೇಟು ತಿಂದು ನರಳುತ್ತಿರುವ ಯುವಕರ ನೋವು ಅಭ್ಯರ್ಥಿಗಳಿಗೆ ಅರ್ಥವಾಗುತ್ತದೆ’ ಎಂದು ಉಗ್ರ ಸಂಘಟನೆ ಹಿಜಬುಲ್‌ ಮುಜಾಹಿದ್ದೀನ್‌ನ ಕಮಾಂಡರ್‌ ರಿಯಾಜ್‌ ನೈಕೂ ಕಳೆದ ವಾರ ಎಚ್ಚರಿಕೆ ನೀಡಿದ್ದ. 

‘ಹಿಜಬುಲ್‌ ಮುಜಾಹಿದ್ದೀನ್‌ ಸಂಘಟನೆಯಿಂದ ಅಭ್ಯರ್ಥಿಗಳಿಗೆ ಬೆದರಿಕೆ ಇದೆ. ಕೆಲವು ಅಭ್ಯರ್ಥಿಗಳನ್ನು ಸುರಕ್ಷಿತ ಸ್ಥಳದಲ್ಲಿಡಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಚುನಾವಣೆ ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಒಟ್ಟು 982 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ 170 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಕ್ಟೋಬರ್‌ 8ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, 10, 13 ಮತ್ತು 16ರಂದು ನಂತರದ ಹಂತಗಳಲ್ಲಿ ಮತದಾನ ನಡೆಯಲಿದೆ. 20ರಂದು ಮತ ಎಣಿಕೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !