ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಾಕೋಟ್‌ನಿಂದ ಬಂದ ಉಗ್ರರು ಹೇಳಿದ ಕಥೆ, ಮಾಡಿದ ಅನಾಹುತ

Last Updated 4 ಮಾರ್ಚ್ 2019, 4:37 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆ ಫೆ.26ರಂದು ಧ್ವಂಸ ಮಾಡಿದ ಬಾಲಾಕೋಟ್‌ನ ಜೈಷ್–ಎ–ಮೊಹಮದ್ ಉಗ್ರರ ಶಿಬಿರದಲ್ಲಿ ಭಯೋತ್ಪಾದಕರಿಗೆ ಉನ್ನತ ಹಂತದತರಬೇತಿ ಸಿಗುತ್ತಿತ್ತು. ಈ ಕೇಂದ್ರದಲ್ಲಿ ತರಬೇತಿ ಪಡೆದ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಮಾಡಿದ್ದ ಅನಾಹುತ ಮತ್ತು ಭದ್ರತಾಪಡೆಗಳ ವಿಚಾರಣೆ ಅವರು ಬಾಯ್ಬಿಟ್ಟ ಮಾಹಿತಿಯ ಬಗ್ಗೆಉನ್ನತ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಸೋಮವಾರ ವರದಿ ಪ್ರಕಟಿಸಿದೆ.

ಬಾಲಾಕೋಟ್‌ನಲ್ಲಿ ತರಬೇತಿ ಪಡೆದಿದ್ದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು 2014–17ರ ಅವಧಿಯಲ್ಲಿ ಬಂಧಿಸಿತ್ತು. ಪಾಕ್ ಮೂಲದ ಈ ನಾಲ್ವರೂ ಉಗ್ರರು ತಾವು ಬಾಲಾಕೋಟ್‌ನಲ್ಲಿ ತರಬೇತಿ ಪಡೆದಿದ್ದ ಸಂಗತಿಯನ್ನು ಒಪ್ಪಿಕೊಂಡಿದ್ದರು.

2014–15ರಲ್ಲಿ ಪಾಕಿಸ್ತಾನದ ಖೈಬರ್ ಪಶ್ತುನ್‌ಖ್ವಾ ಪ್ರಾಂತ್ಯದ ವಾಖಸ್ ಮನ್ಸೂರ್ ಎಂಬಾತನನ್ನು ಬಂಧಿಸಿದ್ದ ಭದ್ರತಾ ಪಡೆಗಳು ವಿಚಾರಣೆಗೆ ಒಳಪಡಿಸಿದ್ದವು. ‘ನಾನು 100 ಯುವಕರೊಂದಿಗೆಬಾಲಾಕೋಟ್‌ನಲ್ಲಿತರಬೇತಿ ಪಡೆದುಕೊಂಡೆ’ ಎಂದು ಬಂಧಿತ ಉಗ್ರಒಪ್ಪಿಕೊಂಡಿದ್ದ. ‘2007ರಿಂದ ನಾನುಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದೆ. ನನ್ನ ಜೊತೆಗೆ ತರಬೇತಿ ಪಡೆದ 40 ಉಗ್ರಗಾಮಿಗಳನ್ನು ಕಾಶ್ಮೀರಕ್ಕೆ ಮತ್ತು 60 ಮಂದಿಯನ್ನು ಅಫ್ಗಾನಿಸ್ತಾನಕ್ಕೆ ಕಳುಹಿಸಲಾಯಿತು’ ಎಂದು ಆತ ತಪ್ಪೊಪ್ಪಿಗೆ ವೇಳೆ ಅಧಿಕಾರಿಗಳಿಗೆ ತಿಳಿಸಿದ್ದವರದಿ ಹೇಳಿದೆ.

ಕಾಶ್ಮೀರದ ಕುಪ್ವಾರದಲ್ಲಿ2009ರ ಮಾರ್ಚ್ ತಿಂಗಳಲ್ಲಿ ಸೇನಾ ತುಕಡಿಗಳಮೇಲೆ ನಡೆದ ದಾಳಿಯಲ್ಲಿವಾಖಸ್ ಮನ್ಸೂರ್ ಕೈವಾಡವಿತ್ತು. ಈ ದಾಳಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದರು. ಜೂನ್‌ ತಿಂಗಳಲ್ಲಿ ಸೇನೆಯ ಮೇಲೆ ನಡೆದ ದಾಳಿಯಲ್ಲಿ ಆರು ಸೈನಿಕರು ಹುತಾತ್ಮರಾಗಿದ್ದರು. ಈ ಘಟನೆಯಲ್ಲಿಯೂ ವಾಖಸ್ ಕೈವಾಡವಿತ್ತು.

ಜೈಷ್–ಎ–ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಮತ್ತೋರ್ವ ಉಗ್ರ ಅಬ್ದುಲ್ ರೆಹಮಾನ್ ಮೊಘಲ್ ಅಲಿಯಾಸ್ ರಾಜಾ ಎಂಬಾತನನ್ನು ಭದ್ರತಾ ಪಡೆಗಳು 2016ರಲ್ಲಿ ಬಂಧಿಸಿದ್ದವು. ಈತನಿಗೆ ರೋಮಿಯೊ ಎನ್ನುವ ಕೋಡ್ ನೀಡಲಾಗಿತ್ತು. ಬಾಲಾಕೋಟ್‌ನಿಂದ ಕಾಶ್ಮೀರಕ್ಕೆ ಬರುವ ಪ್ರತಿ ಉಗ್ರರಿಗೂ ಇಂಥ ಕೋಡ್‌ಗಳನ್ನು ಕೊಡಲಾಗುತ್ತಿತ್ತು. ಆತ್ಮಾಹುತಿ ದಾಳಿಯ ತರಬೇತಿ (ಫಿದಾಯಿನ್) ಪಡೆದುಕೊಳ್ಳಲು ಇಚ್ಛಿಸುವ ಪ್ರತಿ ಯುವಕನೂ ಬಾಲಾಕೋಟ್‌ನ ಕ್ಯಾಂಪ್ ಕಮಾಂಡರ್‌ಗೆ ಲಿಖಿತ ಮನವಿ ನೀಡಬೇಕಿತ್ತು ಎಂದು ಮೊಘಲ್ ತಪ್ಪೊಪ್ಪಿಗೆ ವೇಳೆ ತಿಳಿಸಿದ್ದ.

2014ರಲ್ಲಿ ಸೆರೆ ಸಿಕ್ಕಜೈಷ್ ಉಗ್ರ ನಾಸಿರ್ ಮೊಹಮದ್ ಅವೈನ್ ‘ಬಾಲಾಕೋಟ್‌ ಕೇಂದ್ರದಲ್ಲಿ 80 ತರಬೇತುದಾರರಿದ್ದಾರೆ’ ಎಂದು ಹೇಳಿದ್ದ. ಪಾಕಿಸ್ತಾನದ ಅಟೋಕ್ ನಗರದ ಅವೈನ್ ಸಹ ಬಾಲಾಕೋಟ್‌ನಲ್ಲಿಯೇತರಬೇತಿ ಪಡೆದುಕೊಂಡಿದ್ದ. 2003ರಲ್ಲಿ ಕಾಶ್ಮೀರದ ಆಕಾಶವಾಣಿ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಈತನೂ ಇದ್ದ.ಈ ದಾಳಿಯಲ್ಲಿ ಓರ್ವ ಸಿಆರ್‌ಪಿಎಫ್ ಮತ್ತು ಓರ್ವ ಬಿಎಸ್‌ಎಫ್ ಯೋಧರು ಹುತಾತ್ಮರಾಗಿದ್ದರು.

2015ರಲ್ಲಿ ಸೆರೆಸಿಕ್ಕವ ಮೊಹಮದ್ ಸಾಜಿದ್ ಗುಜ್ಜಾರ್. ಈತ ಪಾಕ್‌ನ ಸಿಯಾಲ್‌ಕೋಟ್ ಪಟ್ಟಣದ ನಿವಾಸಿ. 2015ರ ನವೆಂಬರ್ 3ರಂದು ತಂಗ್ದಾರ್ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರ ಗುಂಪಿನ ಭಾಗವಾಗಿದ್ದ ಸಾಜಿದ್ ನಂತರದ ದಿನಗಳಲ್ಲಿ ಭದ್ರತಾಪಡೆಗಳಿಗೆ ಸೆರೆ ಸಿಕ್ಕ. ಸೇನಾ ಕಾರ್ಯಾಚರಣೆಯಲ್ಲಿ ಈತನ ಜೊತೆಗಿದ್ದಮೂವರು ಉಗ್ರರು ಹತರಾಗಿದ್ದರು. ಸಾಜಿದ್ ಮಾತ್ರ ಜೀವಂತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ಮೃತ ಉಗ್ರರನ್ನುರಿಜ್ವಾನ್, ಹುಸೇನ್ ಪಠಾಣ್ ಮತ್ತು ಮ್ಯುವಾಹ್ ಎಂದು ಸಾಜಿದ್ ಗುರುತು ಹಿಡಿದಿದ್ದ. ಪಾಕ್ ನಾಗರಿಕರಾದ ಇವರೆಲ್ಲರೂ ಬಾಲಾಕೋಟ್ ಶಿಬಿರದಲ್ಲಿಯೇ ತರಬೇತಿ ಪಡೆದುಕೊಂಡಿದ್ದರು ಎಂದು ಭದ್ರತಾಪಡೆಗಳಿಗೆ ಮಾಹಿತಿ ನೀಡಿದ್ದ.

ಈ ಉಗ್ರರ ವಿಚಾರಣೆಯ ನಂತರ ಪಾಕಿಸ್ತಾನದಲ್ಲಿ ಉಗ್ರಗಾಮಿ ತರಬೇತಿ ಶಿಬಿರಗಳು ಇವೆ ಎಂಬುದರ ಬಗ್ಗೆಭಾರತ ವಿಶ್ವಾಸಾರ್ಹ ಸಾಕ್ಷಿಗಳನ್ನು ಒದಗಿಸಿತ್ತು. ಆದರೆ ಏನೂ ಪ್ರಯೋಜವನಾಗಿರಲಿಲ್ಲ. ಉಗ್ರಗಾಮಿಗಳಿಗೆ ತಲಾ ಮೂರು ತಿಂಗಳ ದೌರಾ–ಎ–ಖಾಸ್ ಹೆಸರಿನ ಉನ್ನತ ಹಂತದ ಹೋರಾಟ ತರಬೇತಿ ಮತ್ತು ದೌರಾ–ಅಲ್–ರಾದ್ ಹೆಸರಿನ ಶಸ್ತ್ರಾಸ್ತ್ರ ತರಬೇತಿಗಳು ನಡೆಯುತ್ತಿದ್ದವು ಎಂದು ಅಧಿಕಾರಿಗಳು ನೀಡಿದ ಮಾಹಿತಿಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT