ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ಆಂತರಿಕ ವಿಚಾರವೇ: ಕಾಂಗ್ರೆಸ್‌ಗೆ ಮುಜುಗರ

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ ಮಾತಿಗೆ ಆಡಳಿತ ಪಕ್ಷದ ಆಕ್ರೋಶ, ಸೋನಿಯಾ ಅತೃಪ್ತಿ
Last Updated 7 ಆಗಸ್ಟ್ 2019, 5:24 IST
ಅಕ್ಷರ ಗಾತ್ರ

ನವದೆಹಲಿ:ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧಿರ್‌ ರಂಜನ್‌ ಚೌಧರಿ ಅವರು ತಮ್ಮ ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಮಾತನಾಡಿದರು. 1948ರಿಂದಲೇ ಕಾಶ್ಮೀರ ವಿವಾದದ ಮೇಲೆ ವಿಶ್ವಸಂಸ್ಥೆಯು ನಿಗಾ ಇರಿಸಿದೆ. ಹಾಗಿರುವಾಗ ಇದು ಭಾರತದ ಆಂತರಿಕ ವಿಚಾರವೇ ಎಂದು ಅವರು ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದು ನಿರ್ಣಯ ಮತ್ತು ರಾಜ್ಯ ವಿಭಜನೆ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಲೋಕಸಭೆಯಲ್ಲಿ ಮಾತನಾಡಿದರು.

‘ಎಸ್‌. ಜೈಶಂಕರ್‌ ಅವರು (ವಿದೇಶಾಂಗ ಸಚಿವ) ಮೈಕ್‌ ಪಾಂಪಿಯೊ (ಅಮೆರಿಕದ ವಿದೇಶಾಂಗ ಕಾರ್ಯದರ್ಶಿ) ಜತೆ ಕೆಲವು ದಿನಗಳ ಹಿಂದೆ ಮಾತನಾಡುವಾಗ ಕಾಶ್ಮೀರವು ದ್ವಿಪಕ್ಷೀಯ ವಿಚಾರ ಎಂದಿದ್ದರು. ಹಾಗಾಗಿ, ಇದು ಆಂತರಿಕ ವಿಚಾರವೇ ಅಥವಾ ದ್ವಿಪಕ್ಷೀಯ ವಿಚಾರವೇ ಎಂಬುದು ಸ್ಪಷ್ಟವಾಗಬೇಕು. ನಾನು ಸ್ಪಷ್ಟೀಕರಣವನ್ನಷ್ಟೇ ಕೇಳುತ್ತಿದ್ದೇನೆ’ ಎಂದು ಚೌಧರಿ ಹೇಳಿದರು.

ಈ ಮಾತಿಗೆ ಆಡಳಿತ ಪಕ್ಷದಿಂದ ಭಾರಿ ಪ್ರತಿರೋಧ ಎದುರಾಯಿತು.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮುಖದಲ್ಲಿಯೂ ಅಸಮಾಧಾನ ಎದ್ದು ಕಂಡಿತು. ಚೌಧರಿ ಸಮೀಪವೇ ಕುಳಿತಿದ್ದ ಸೋನಿಯಾ ಅವರು, ‘ಮಾತಿನ ಮೇಲೆ ಗಮನ ಹರಿಸಿ’ ಎಂಬಂತೆ ಹಲವು ಬಾರಿ ಸನ್ನೆ ಮಾಡಿದರು.

ಗೃಹ ಸಚಿವ ಅಮಿತ್‌ ಶಾ ಅವರ ಪ್ರತಿಕ್ರಿಯೆ ಆಕ್ರೋಶಭರಿತವಾಗಿಯೇ ಇತ್ತು. ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆಯು ನಿಗಾ ಇರಿಸಬಹುದು ಎಂಬುದು ಕಾಂಗ್ರೆಸ್‌ ಪಕ್ಷದ ನಿಲುವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಅವರು ಒತ್ತಾಯಿಸಿದರು.

‘ಭಾರತ್‌ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದವು. ‘ಇದು ಭಾರತದ ಆಂತರಿಕ ವಿಚಾರ. ನೀವು ಭಾರತೀಯ. ಭಾರತದ ಪರವಾಗಿ ಮಾತನಾಡಿ’ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು.

ಚೌಧರಿ ಅವರು ಬಳಿಕ ಮಾಧ್ಯಮದ ಮುಂದೆ ಸ್ಪಷ್ಟೀಕರಣ ನೀಡಿದರು. ತಮ್ಮ ಹೇಳಿಕೆಯನ್ನು ಬಳಸಿಕೊಂಡು ವಿವಾದವೊಂದನ್ನು ಸೃಷ್ಟಿಸಲು ಸರ್ಕಾರ ಯತ್ನಿಸುತ್ತಿದೆ. ವಿಶೇಷ ಸ್ಥಾನಮಾನ ರದ್ದತಿ ಮತ್ತು ವಿಭಜನೆ ಬಳಿಕ ಕಾಶ್ಮೀರ ವಿಚಾರದಲ್ಲಿ ಭಾರತದ ನಿಲುವಿನ ಬಗ್ಗೆ ಸ್ಪಷ್ಟೀಕರಣ ಬೇಕು ಎಂದಷ್ಟೇ ಹೇಳಿದ್ದೆ ಎಂದು ತಿಳಿಸಿದರು.

‘ನಾನು ಹೇಳಿದ್ದೆಲ್ಲವೂ ಸಂಸತ್ತಿನ ದಾಖಲಾತಿಯಲ್ಲಿ ಇದೆ. ಸಂಬಂಧಪಟ್ಟ ಎಲ್ಲರೂ ಅದನ್ನು ಗಮನಿಸಬಹುದು ಎಂಬುದು ನನ್ನ ವಿನಂತಿ. ನನ್ನ ಮಾತನ್ನು ಸಮಗ್ರವಾಗಿ ಗ್ರಹಿಸಬೇಕೇ ಹೊರತು, ಆಯ್ಕೆ ಮಾಡಿ ಉದ್ಧರಿಸಬಾರದು’ ಎಂದರು.

‘ಅಬ್ದುಲ್ಲಾ ಬಂಧನದಲ್ಲೂ ಇಲ್ಲ, ವಶದಲ್ಲೂ ಇಲ್ಲ...’

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರನ್ನು ವಶಕ್ಕೂ ಪಡೆದಿಲ್ಲ, ಬಂಧಿಸಿಯೂ ಇಲ್ಲ. ತಮ್ಮಿಚ್ಛೆಯಂತೆ ಅವರು ಮನೆಯಲ್ಲಿ ಕುಳಿತಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲಿ ಮಂಗಳವಾರ ಹೇಳಿದರು.

ಕಾಶ್ಮೀರದ ವಿಚಾರ ಚರ್ಚೆಯಾಗುತ್ತಿರುವಾಗ ಫಾರೂಕ್‌ ಅವರು ಇರಬೇಕಿತ್ತು ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟ ಶಾ, ‘ಅವರು ಚೆನ್ನಾಗಿದ್ದಾರೆ... ಮನೆಯಿಂದ ಹೊರಗೆ ಬರಲು ಅವರಿಗೆ ಇಷ್ಟ ಇಲ್ಲದಿದ್ದರೆ ಬಂದೂಕು ಗುರಿ ಇಟ್ಟು ಕರೆತರಲಾಗದು’ ಎಂದರು.

ಅದಕ್ಕೂ ಮೊದಲು ಎನ್‌ಸಿಪಿಯ ಸುಪ್ರಿಯಾ ಸುಳೆ ಅವರೂ ಫಾರೂಕ್‌ ವಿಚಾರ ಎತ್ತಿದ್ದರು. ಸದನದಲ್ಲಿ ಸುಳೆ ಅವರ ಪಕ್ಕದ ಆಸನದಲ್ಲಿ ಫಾರೂಕ್‌ ಕೂರುತ್ತಾರೆ. ಅವರ ಅನುಪಸ್ಥಿತಿಯಲ್ಲಿ ಕಾಶ್ಮೀರ ವಿಚಾರದ ಚರ್ಚೆ ಅಪೂರ್ಣ ಎಂದು ಸುಳೆ ಹೇಳಿದರು. ಆಗ ಮಾತನಾಡಿದ ಶಾ, ‘ಫಾರೂಕ್‌ ಅವರನ್ನು ಗೃಹಬಂಧನದಲ್ಲಿ ಇರಿಸಿಲ್ಲ, ಬಂಧಿಸಿಯೂ ಇಲ್ಲ’ ಎಂದರು.

ಅವರಿಗೆ ಹುಷಾರಿರಲಿಕ್ಕಿಲ್ಲ ಎಂಬ ಸುಳೆ ಅವರ ಮಾತಿಗೆ, ‘ವೈದ್ಯರು ಅವರಿಗೆ ಚಿಕಿತ್ಸೆ ನೀಡಬಹುದು, ಆ ಕೆಲಸ ನಾನು ಮಾಡಲಾಗದು’ ಎಂದು ಶಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್‌ ಅಬ್ದುಲ್ಲಾ ಅವರನ್ನು ಸೋಮವಾರ ಬಂಧಿಸಲಾಗಿದೆ. ಅವರ ವಿಚಾರದಲ್ಲಿಯೂ ಸುಳೆ ಅವರು ಕನಿಕರ ವ್ಯಕ್ತಪಡಿಸಿದರು.

‘ಕಣಿವೆಯ ಜನರು ಸುರಕ್ಷಿತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿ
ಕೊಳ್ಳಬೇಕು. ಮೆಹಬೂಬಾ ಮತ್ತು ಒಮರ್‌ ಸುರಕ್ಷಿತವಾಗಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಅವರು ಚೆನ್ನಾಗಿದ್ದಾರೆ ಎಂದು ನಂಬಿದ್ದೇನೆ’ ಎಂದು ಹೇಳಿದರು.

***

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂದು ನೀವು ಪರಿಗಣಿಸುವುದಿಲ್ಲವೇ? ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೇ ಹೌದು. ಜಮ್ಮು ಮತ್ತು ಕಾಶ್ಮೀರ (ಪಿಒಕೆ) ಎಂದು ನಾನು ಹೇಳುವಾಗಲೆಲ್ಲ ಅದರಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರವೂ ಸೇರಿರುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಒಕೆ ಸೇರುವುದಿಲ್ಲ ಎಂದು ನೀವು ಭಾವಿಸಿರುವುದರಿಂದಲೇ ನಾನು ಆಕ್ರೋಶಗೊಂಡಿದ್ದೇನೆ. ಇದಕ್ಕಾಗಿ ನಾವು ಬಲಿದಾನಕ್ಕೂ ಸಿದ್ಧ

ಅಮಿತ್‌ ಶಾ,ಕೇಂದ್ರ ಗೃಹ ಸಚಿವ

ನನ್ನನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ... ದೇಶದ ಗೃಹ ಸಚಿವರು ಈ ರೀತಿ ಸುಳ್ಳು ಹೇಳ್ಳುತ್ತಿರುವುದು ನೋಡಿ ಬೇಸರವಾಗಿದೆ. ನನ್ನ ರಾಜ್ಯಕ್ಕೆ ಬೆಂಕಿ ಹಚ್ಚಿರುವಾಗ ನನ್ನಿಷ್ಟದಂತೆ ಮನೆಯೊಳಗೆ ಇರಲು ಸಾಧ್ಯವೇ?

ಫಾರೂಕ್‌ ಅಬ್ದುಲ್ಲಾ,ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT