ಗುರುವಾರ , ಡಿಸೆಂಬರ್ 3, 2020
20 °C

ಪ್ರಧಾನಿ ಮೋದಿ ಸರ್ಕಾರದಲ್ಲಿ ಜೆಡಿಯು ಇರೋದಿಲ್ಲ-ನಿತೀಶ್ ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಮಂತ್ರಿಯಾಗಿ ಮೋದಿ ಪ್ರಮಾಣ ವಚನ ಸ್ವೀಕರಿಸುವ ಕೆಲ ಗಂಟೆಗಳಿಗೂ ಮುನ್ನ ನಡೆದ ಮಹತ್ತರವಾದ ಬೆಳವಣಿಗೆಯಲ್ಲಿ ಬಿಜೆಪಿಯ ಮಿತ್ರ ಪಕ್ಷ ಜೆಡಿ(ಯು) ಸಂಪುಟದಿಂದ ಹೊರಗುಳಿದಿದೆ.

ಈ ಸಂಬಂಧ ಜೆಡಿಯು ಪಕ್ಷದ ಮುಖ್ಯಸ್ಥ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೆಡಿ(ಯು) ತಮ್ಮ ಪಕ್ಷದ ಯಾರೊಬ್ಬರೂ ಕೇಂದ್ರ ಮಂತ್ರಿಮಂಡಲದಲ್ಲಿ ಇರುವುದಿಲ್ಲ. ಬದಲಿಗೆ ಹೊರಗಿನಿಂದ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಕೇವಲ ಒಂದೇ ಒಂದು ಮಂತ್ರಿ ಸ್ಥಾನವನ್ನು ತಮ್ಮ ಪಕ್ಷಕ್ಕೆ ಕೊಡುತ್ತೇವೆ ಎಂದ ಕಾರಣಕ್ಕಾಗಿ ಪಕ್ಷ ಹೊರಗಿನಿಂದ ಬೆಂಬಲ ನೀಡಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.

ಜೆಡಿಯು ಪಕ್ಷದ ವತಿಯಿಂದ ಹಿರಿಯ ಮುಖಂಡ ರಾಜ್ಯ ಸಭಾ ಸದಸ್ಯ ಆರ್.ಸಿ.ಪಿ. ಸಿಂಗ್ ಅವರಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸೂಚನೆ ನೀಡಲಾಗಿತ್ತು. ಆದರೆ, ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಅಂತಿಮ ಮಾತುಕತೆ ನಡೆಸಿ ಇನ್ನೂ ಹೆಚ್ಚಿನ ಮಂತ್ರಿ ಸ್ಥಾನ ನೀಡಬೇಕೆಂದು ತಿಳಿಸಿದರು. ಆದರೆ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಮೋದಿ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಲು ಒಪ್ಪಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಕೊನೆ ಕ್ಷಣಗಳಲ್ಲಿ ನಿತೀಶ್ ಕುಮಾರ್ ಪಕ್ಷಕ್ಕೆ ಕೊಡಬೇಕು ಎಂದುಕೊಂಡಿದ್ದ ಒಂದು ಸ್ಥಾನವನ್ನೂ ತಿರಸ್ಕರಿಸಿದ್ದಾರೆ.

ಬಿಜೆಪಿ ನೀಡಿದಂತಹ ಆಫರ್ ನಾವು ಒಪ್ಪಿಕೊಳ್ಳುವಂತಹ ಆಫರ್ ಆಗಿರಲಿಲ್ಲ. ಅದಕ್ಕಾಗಿ ಜೆಡಿಯು ಎನ್‌‌ಡಿಎ ಮೈತ್ರಿಕೂಟದಲ್ಲಿ ಇರುತ್ತೇವೆ ಆದರೆ, ಸರ್ಕಾರದ ಜೊತೆ ಸೇರುವುದಿಲ್ಲ ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕೇವಲ ಒಂದು ಸ್ಥಾನ ನೀಡಿದ ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಅಸಮಾಧಾನ ಹೊಂದಿದ್ದು, ಇದಕ್ಕಾಗಿ ಸರ್ಕಾರದ ಜೊತೆ ಸೇರಿಲ್ಲ ಎಂದು ಮೂಲಗಳು ತಿಳಿಸಿವೆ. ಬಿಹಾರದಲ್ಲಿ ಜೆಡಿಯು 16 ಸಂಸದರನ್ನು ಹೊಂದಿದ್ದು, ಬಿಜೆಪಿ 17 ಮಂದಿ ಸಂಸದರನ್ನು ಹೊಂದಿದೆ. ಎರಡೂ ಪಕ್ಷಗಳು ಜಂಟಿಯಾಗಿ ಲೋಕಸಭಾ ಚುನಾವಣೆಯಲ್ಲಿ ಇತರೆ ಪಕ್ಷಗಳ ಎದುರು ಸ್ಪರ್ಧಿಸಿ 33 ಸ್ಥಾನಗಳನ್ನು ಪಡೆದುಕೊಂಡಿವೆ. ಬಿಹಾರದಲ್ಲಿ ಜೆಡಿಯು 2017ರಲ್ಲಿ ಆರ್‌‌ಜೆಡಿ ಜೊತೆ ಮೈತ್ರಿ ಮುರಿದು ಬಿದ್ದ ನಂತರ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಮಂತ್ರಿ ಮಂಡಲದಲ್ಲಿ ಯಾವುದೇ ಸ್ಥಾನ ಬೇಡ ಎಂದು  ಹೇಳಿದ್ದಾರೆ. ಇದರಿಂದಾಗಿ ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸುತ್ತಾರೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು