ಬುಧವಾರ, ಆಗಸ್ಟ್ 4, 2021
28 °C
ಸಂತ್ರಸ್ತೆಯ ಕುಟುಂಬದ ಪರ ವಕೀಲರ ಹೇಳಿಕೆ

ಕಠುವಾ ಅತ್ಯಾಚಾರ: ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಠಾಣ್‌ಕೋಟ್‌ (ಪಂಜಾಬ್‌): ‘ಕಠುವಾ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು’ ಎಂದು ಬಾಲಕಿ ಮನೆಯವರ ಪರ ವಕೀಲರು ಒತ್ತಾಯಿಸಿದ್ದಾರೆ. ಆ ಬಗ್ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ವಕೀಲರ ತಂಡದ ಸದಸ್ಯರು ಹೇಳಿದ್ದಾರೆ.

‘ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ನಾವು ಒತ್ತಾಯಿಸಿದ್ದೆವು. ತೀರ್ಪಿನ ಅಧ್ಯಯನ ನಡೆಸಿದ ಬಳಿಕ ಮೇಲ್ಮನವಿ ಸಲ್ಲಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸುತ್ತೇವೆ’ ಎಂದು ವಕೀಲರು ಹೆಳಿದ್ದಾರೆ.

ಇದನ್ನೂ ಓದಿ: ಕಠುವಾ ಪ್ರಕರಣ | ಮಾಸ್ಟರ್‌ಮೈಂಡ್‌ ಸಾಂಜಿ ರಾಮ್‌, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ‘ಕಠುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ವಿಧಿಸಲು ಒತ್ತಾಯಿಸಿ ಜಮ್ಮು ಕಾಶ್ಮೀರ ಸರ್ಕಾರವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

2018ರ ಜನವರಿ ತಿಂಗಳಲ್ಲಿ ಕಠುವಾದಲ್ಲಿ ನಡೆದ ಈ ಅಮಾನವೀಯ ಘಟನೆಗೆ ರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಕಠುವಾ ಅತ್ಯಾಚಾರ ಘಟನೆ ಎಂದೇ ಇದು ಪ್ರಚಾರ ಪಡೆದಿದ್ದಲ್ಲದೆ, ರಾಜಕೀಯವಾಗಿಯೂ ಭಾರಿ ಸಂಚಲನ ಉಂಟುಮಾಡಿತ್ತು. ಘಟನೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಎರಡು ದಿನಗಳ ಕಾಲ ಹಿಂಸಾಚಾರಗಳು ನಡೆದಿದ್ದವು. ಘಟನೆಯನ್ನು ಖಂಡಿಸಿ ದೇಶದ ವಿವಿಧ ನಗರಗಳಲ್ಲಿ ಪ್ರತಿಭಟನೆಗಳು, ಮೇಣದ ಬತ್ತಿ ಮೆರವಣಿಗೆಗಳು ನಡೆದಿದ್ದವು.

ಹತ್ಯೆಯಾದ ಬಾಲಕಿಯ ಕುಟುಂಬದವರು ಮತ್ತು ಬಾಲಕಿ ಪರ ವಕೀಲರಿಗೆ ಜೀವ ಬೆದರಿಕೆ ಬಂದ ಕಾರಣಕ್ಕೆ ಈ ಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಪಂಜಾಬ್‌ಗೆ ಸುಪ್ರೀಂ ಕೋರ್ಟ್‌ ವರ್ಗಾವಣೆ ಮಾದ್ದಲ್ಲದೆ ತ್ವರಿತವಾಗಿ ಮತ್ತು ಗೌಪ್ಯವಾಗಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿತ್ತು. 2018ರ ಜೂನ್‌ ತಿಂಗಳಿನಿಂದ ನಿತ್ಯವೂ ವಿಚಾರಣೆ ನಡೆಸಿರುವ ನ್ಯಾಯಾಲಯವು ಸುಮಾರು ಒಂದು ವರ್ಷದೊಳಗೆ ವಿಚಾರಣೆ ಪೂರ್ತಿಗೊಳಿಸಿ ತೀರ್ಪು ನೀಡಿದೆ.

ಘಟನಾವಳಿ

 ಜ.10 2018: ಜಮ್ಮು ಮತ್ತು ಕಾಶ್ಮೀರದ ರಸನಾ ಗ್ರಾಮದಲ್ಲಿ ಹಸುಗಳನ್ನು ಮೇಯಿಸಲು ಹೋಗಿದ್ದ ಬಕರ್‌ವಾಲ್‌ ಸಮುದಾಯದ 8 ವರ್ಷದ ಬಾಲಕಿ ನಾಪತ್ತೆ

ಜ. 12: ಹೀರಾನಗರ ಪೊಲೀಸ್‌ ಠಾಣೆಯಲ್ಲಿ ಬಾಲಕಿ ನಾಪತ್ತೆಯಾದ ಬಗ್ಗೆ ದೂರು ದಾಖಲು

ಜ. 17: ನಾಪತ್ತೆಯಾದ ಬಾಲಕಿಯ ಶವ ಪತ್ತೆ. ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ಸಾಬೀತು

ಜ. 22: ಜಮ್ಮು ಕಾಶ್ಮೀರ ಅಪರಾಧ ಪತ್ತೆ ವಿಭಾಗಕ್ಕೆ ಪ್ರಕರಣ ವರ್ಗಾವಣೆ

ಫೆ. 16: ಆರೋಪಿಗಳಲ್ಲಿ ಒಬ್ಬನ ಪರವಾಗಿ ‘ಹಿಂದೂ ಏಕತಾ ಮಂಚ್‌’ ಸಂಘಟನೆಯಿಂದ ಪ್ರದರ್ಶನ

ಮಾರ್ಚ್‌ 1: ಅತ್ಯಾಚಾರ ನಡೆದ ದೇವಸ್ಥಾನದ ಉಸ್ತುವಾರಿ ವಹಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದನ್ನು ಖಂಡಿಸಿ ಹಿಂದೂ ಏಕತಾ ಮಂಚ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಜಮ್ಮು ಕಾಶ್ಮೀರ ಸರ್ಕಾರದಲ್ಲಿ ಸಚಿವರಾಗಿದ್ದ ಬಿಜೆಪಿಯ ಚಂದ್ರಪ್ರಕಾಶ್‌ ಗಂಗ ಹಾಗೂ ಲಾಲ್‌ ಸಿಂಗ್‌ ಪಾಲ್ಗೊಂಡರು. ಆಗ ಕಾಶ್ಮೀರದಲ್ಲಿ ಬಿಜೆಪಿ– ಪಿಡಿಪಿ ಮೈತ್ರಿ ಸರ್ಕಾರ ಇತ್ತು

ಏಪ್ರಿಲ್‌ 9: ಏಳು ಆರೋಪಿಗಳ ವಿರುದ್ಧ ಕಠುವಾ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು 

ಏಪ್ರಿಲ್‌ 10: ಬಾಲಾಪರಾಧಿ ಎನ್ನಲಾದ ವ್ಯಕ್ತಿಯ ವಿರುದ್ಧವೂ ಆರೋಪಪಟ್ಟಿ ಸಲ್ಲಿಕೆ. ಆರೋಪಪಟ್ಟಿ ಸಲ್ಲಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಕೀಲರ ವಿರುದ್ಧ ಎಫ್‌ಐಆರ್‌ ದಾಖಲು

ಏಪ್ರಿಲ್‌ 14: ಹಿಂದೂ ಏಕತಾ ಮಂಚ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಚಿವರ ರಾಜೀನಾಮೆ. ಘಟನೆಯನ್ನು ‘ಅಮಾನವೀಯ’ ಎಂದು ಬಣ್ಣಿಸಿದ ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌, ಬಾಲಕಿಯ ಕುಟುಂಬದವರಿಗೆ ನ್ಯಾಯ ಒದಗಿಸುವಂತೆ ಸೂಚನೆ

ಏಪ್ರಿಲ್‌ 16: ಜಿಲ್ಲಾ ಸೆಶನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ಆರಂಭ

ಮೇ 7: ಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಪಂಜಾಬ್‌ಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್‌. ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ಗೌಪ್ಯವಾಗಿ ವಿಚಾರಣೆ ನಡೆಸುವಂತೆ ಸುಪ್ರೀಂ ಸೂಚನೆ

ಜೂನ್‌ 3, 2019: ವಿಚಾರಣೆ ಅಂತ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು