ಗುರುವಾರ , ಜನವರಿ 20, 2022
15 °C

ಜೆಎನ್‌ಯು: ಆಯಿಷಿ ಘೋಷ್‌ ವಿರುದ್ಧ ಐದು ನಿಮಿಷಗಳಲ್ಲಿಯೇ 2 ಎಫ್ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಭಾನುವಾರ ಸಂಜೆ ‘ಮುಸುಕುಧಾರಿ ಗೂಂಡಾಗಳು’ ದಾಂದಲೆ ನಡೆಸಿ, ಭೀತಿ ಸೃಷ್ಟಿಸುತ್ತಿದ್ದ ಅದೇ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್‌ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಗೂಂಡಾಗಳ’ ದಾಳಿಯಲ್ಲಿ ತಲೆಗೆ ತೀವ್ರವಾಗಿ ಏಟು ಬಿದ್ದ ಆಯಿಷಿ ಅವರ ವಿರುದ್ಧ ಐದು ನಿಮಿಷಗಳ ಅವಧಿಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಜೆಎನ್‌ಯುನ ಭದ್ರತಾ ವಿಭಾಗವು ಜ. 3 ಮತ್ತು ಜ. 4ರಂದು ಆಯಿಷಿ ಮತ್ತು ಇತರ ವಿದ್ಯಾರ್ಥಿಗಳ ವಿರುದ್ಧ ಎರಡು ಪ್ರತ್ಯೇಕ ದೂರುಗಳನ್ನು ನೀಡಿತ್ತು. ಆದರೆ, ಜೆಎನ್‌ಯುನಲ್ಲಿ ಸಂಘರ್ಷ ನಡೆಯುತ್ತಿದ್ದ ಹೊತ್ತಿನಲ್ಲಿಯೇ ಎಫ್‌ಐಆರ್‌ ದಾಖಲಿಸಿಕೊಂಡಿದ್ದರ ಹಿಂದಿನ ಉದ್ದೇಶ ಏನು ಎಂಬ ಪ್ರಶ್ನೆಯನ್ನು ಈಗ ಕೇಳಲಾಗುತ್ತಿದೆ. 

ಆಯಿಷಿ ಮತ್ತು ಇತರರ ವಿರುದ್ಧ ಭಾನುವಾರ ರಾತ್ರಿ 8:44 ಮತ್ತು 8:49ರ ನಡುವೆ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಈ ಹೊತ್ತಿನಲ್ಲಿ ಆಯಿಷಿ ಅವರು ಏಮ್ಸ್‌ಗೆ ದಾಖಲಾಗಿದ್ದರು. ಜೆಎನ್‌ಯು ನಲ್ಲಿ ಭಾನುವಾರದ ದಾಂದಲೆಯ ಬಗ್ಗೆ ಸೋಮವಾರ ಸಂಜೆ 5:36ಕ್ಕೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. 

ಆಯಿಷಿ ಮತ್ತು ಇತರರ ವಿರುದ್ಧ ಮೊದಲೇ ದೂರು ದಾಖಲಾಗಿದ್ದರೂ ಎಫ್‌ಐಆರ್‌ ದಾಖಲಿ ಸಲು ಭಾನುವಾರ ರಾತ್ರಿಯವರೆಗೆ ವಿಳಂಬ ಮಾಡಿದ್ದು ಯಾಕೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಜೆಎನ್‌ಯು ಹಿಂಸಾಚಾರದ ಬಳಿಕ ದೇಶದಾದ್ಯಂತ ಆಕ್ರೋಶ ವ್ಯಕ್ತವಾದದ್ದರಿಂದಾಗಿ, ಪೊಲೀಸರು ಎಫ್‌ಐಆರ್‌ ದಾಖಲಿಸಲು ಯೋಚಿ ಸಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. 

‘ಮುಸುಕುಧಾರಿ ಗೂಂಡಾಗಳು’ ಜೆಎನ್‌ಯುನಲ್ಲಿ ದಾಂದಲೆ ನಡೆಸಿದಾಗ ದೆಹಲಿ ಪೊಲೀಸರು ವಿದ್ಯಾರ್ಥಿಗಳ ನೆರವಿಗೆ ಬರಲಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ. ದಾಂದಲೆ ನಡೆಸಿದವರು ವಿ.ವಿ. ಆವರಣದಿಂದ ಹೊರಗೆ ಹೋಗುವಾಗಲೂ ಪೊಲೀಸರು ಮೌನತಳೆದಿದ್ದರು ಎಂಬ ಆರೋಪವೂ ಇದೆ. ಜತೆಗೆ, ಪ್ರಕರಣದ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

ಎಫ್‌ಐಆರ್‌ನಲ್ಲಿ ಏನಿದೆ?

ಇನ್‌ಸ್ಪೆಕ್ಟರ್‌ ಆನಂದ್‌ ಯಾದವ್‌ ಅವರ ಹೇಳಿಕೆಯ ಆಧಾರದಲ್ಲಿ ಭಾನುವಾರದ ಹಿಂಸಾಚಾರದ ಬಗ್ಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಭಾನುವಾರ ಅಪರಾಹ್ನ 3.45ರ ಹೊತ್ತಿಗೆ 40–50 ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ಪೆರಿಯಾರ್‌ ಹಾಸ್ಟೆಲ್‌ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಈ ಎಫ್‌ಐಆರ್‌ನಲ್ಲಿ ಇದೆ.

ಆದರೆ, ರಾತ್ರಿ 7 ಗಂಟೆಯ ಹೊತ್ತಿಗೆ 50–60 ಜನರ ಗುಂಪು ಕೈಯಲ್ಲಿ ಕಬ್ಬಿಣದ ಸಲಾಖೆ  ಹಿಡಿದು ಸಾಬರಮತಿ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಲಾಗಿದೆ ಎಂದೂ ಈ ಎಫ್‌ಐಆರ್‌ ಹೇಳುತ್ತದೆ.

ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂಬ ವಿಚಾರ ಎಫ್‌ಐಆರ್‌ನಲ್ಲಿ ಇದೆ. ಆದರೆ, ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ ಎಂಬುದು ಇಲ್ಲ. ಪ್ರಾಧ್ಯಾಪಕರಾದ ಸುಚರಿತಾ ಸೇನ್‌ ಮತ್ತು ಅಮಿತ್‌ ಪರಮೇಶ್ವರನ್‌ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಇತರ ಹಲವು ಪ್ರಾಧ್ಯಾಪಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು.

ಆಯಿಷಿ ವಿರುದ್ಧದ ಆರೋಪವೇನು?

ಶುಲ್ಕ ಏರಿಕೆ ಮತ್ತು ನೋಂದಣಿ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜೆಎನ್‌ಯು ವಿದ್ಯಾರ್ಥಿಗಳು ಸೆಂಟರ್‌ ಫಾರ್‌ ಇನ್ಫರ್ಮೇಷನ್‌ ಸಿಸ್ಟಮ್‌ (ಸಿಐಎಸ್‌) ಅನ್ನು ತೆರೆಯದಂತೆ ತಡೆ ಒಡ್ಡಿದ್ದರು. ಅಧಿಕಾರಿಗಳು ಈ ಕೇಂದ್ರವನ್ನು ತೆರೆಯಲು ಯತ್ನಿಸಿದಾಗ ಮಹಿಳೆಯರೂ ಇದ್ದ ಭದ್ರತಾ ಸಿಬ್ಬಂದಿಯನ್ನು ಆಯಿಷಿ ಮತ್ತು ಇತರ ವಿದ್ಯಾರ್ಥಿಗಳು ನಿಂದಿಸಿದ್ದಾರೆ. ಘರ್ಷಣೆ  ನಡೆಸಿದ್ದಾರೆ ಎಂದು ಜೆಎನ್‌ಯು ಭದ್ರತಾ ವಿಭಾಗವು ನೀಡಿದ ದೂರಿನಲ್ಲಿ ಹೇಳಲಾಗಿದೆ. 

ಸಿಐಎಸ್‌ನ ವಿದ್ಯುತ್‌ ಸಂಪರ್ಕವನ್ನು ವಿದ್ಯಾರ್ಥಿಗಳು ಕಡಿತಗೊಳಿಸಿದ್ದಾರೆ ಎಂದು ಜ. 3ರ ದೂರಿನಲ್ಲಿ ಹೇಳಲಾಗಿದೆ. ಈ ಕೇಂದ್ರಕ್ಕೆ ಹಾನಿ ಮಾಡಲಾಗಿದೆ ಎಂದು ಜ. 4ರಂದು ನೀಡಿದ ದೂರಿನಲ್ಲಿ ಹೇಳಲಾಗಿದೆ. 

ಸರ್ವರ್‌ಗಳಿಗೆ ಹಾನಿ ಮಾಡಲಾಗಿದೆ, ಆಪ್ಟಿಕ್‌ ಫೈಬರ್‌ ಕೇಬಲ್‌ಗಳನ್ನು ಹಾಳು ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ. ಆಡಳಿತ ವಿಭಾಗದ 100 ಮೀಟರ್‌ ಸುತ್ತಲಿನ ಪ್ರದೇಶದಲ್ಲಿ ಪ್ರತಿಭಟನೆ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ವಿದ್ಯಾರ್ಥಿಗಳು ಇದನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು