ಗುರುವಾರ , ಸೆಪ್ಟೆಂಬರ್ 19, 2019
29 °C
ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಮಾತುಕತೆಗೆ ಸಚಿವರ ಆಗ್ರಹ

ಕರ್ನಾಟಕ ಮಹದಾಯಿ ತೀರ್ಪು ಉಲ್ಲಂಘಿಸಿಲ್ಲ: ಜೋಷಿ

Published:
Updated:
Prajavani

ಪಣಜಿ: ಮಹದಾಯಿ ನ್ಯಾಯಮಂಡಳಿಯ ತೀರ್ಪನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. 

ಮಹದಾಯಿ ನದಿಪಾತ್ರದಿಂದ ಹೆಚ್ಚುವರಿ ನೀರನ್ನು ಕರ್ನಾಟಕ ಬೇರೆಡೆಗೆ ಹರಿಸುತ್ತಿದೆ ಎಂದು ಆರೋಪಿಸುತ್ತಿರುವ ಗೋವಾ ರಾಜ್ಯದ ವಾದವನ್ನು ತಳ್ಳಿಹಾಕಿರುವ ಅವರು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ, ಗೊಂದಲ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.  

‘ನ್ಯಾಯಮಂಡಳಿ ಈಗಾಗಲೇ ತೀರ್ಪು ಪ್ರಕಟಿಸಿದೆ. ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಿವೆ. ಆದರೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವೈಯಕ್ತಿಕವಾಗಿ ಒತ್ತಾಯಿಸುತ್ತೇನೆ’ ಎಂದಿದ್ದಾರೆ.

ಕರ್ನಾಟಕವು ರಹಸ್ಯವಾಗಿ ಕಾಲುವೆಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ಗೆ ಗೋವಾ ಅರ್ಜಿ ಸಲ್ಲಿಸಿದೆ. ಆದರೆ ಇಂತಹ ಯಾವುದೇ ಕಾಮಗಾರಿಯನ್ನು ಕರ್ನಾಟಕ ಕೈಗೊಂಡಿಲ್ಲ ಎಂದು ಜೋಷಿ ಸ್ಪಷ್ಟಪಡಿಸಿದ್ದಾರೆ. 

ಮಾಂಡೋವಿ ನದಿಯನ್ನು ಕರ್ನಾಟಕದಲ್ಲಿ ಮಹದಾಯಿ ಎಂದು ಕರೆಯಲಾಗುತ್ತದೆ. ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಸ್ವಲ್ಪ ಭಾಗದಲ್ಲಿ ಹರಿಯುವ ನದಿಯು ಗೋವಾದಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. 

ಗೋಮಾಂಸ ನಿಷೇಧ–ಜನರ ಭಾವನೆ ಗೌರವಿಸಿ ನಿರ್ಧಾರ: ಜೋಷಿ

ಕರ್ನಾಟಕದಲ್ಲಿ ದನದ ಹತ್ಯೆಯನ್ನು ನಿಷೇಧಿಸಬೇಕೆ ಎಂಬ ನಿರ್ಧಾರವನ್ನು ಜನರ ಭಾವನೆಗಳ ಆಧಾರದಲ್ಲಿ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ. 

‘ದನದ ಹತ್ಯೆ ನಿಷೇಧ ಕಾನೂನು ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ’ ಎಂದು ಜೋಷಿ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದನದ ಮಾಂಸ ಮಾರಾಟ ಹಾಗೂ ಬಳಕೆಗೆ ನಿಷೇಧ ಹೇರುವ ಕಾಯ್ದೆ ಜಾರಿಗೆ ಗಂಭೀರವಾಗಿ ಚಿಂತನೆ ನಡೆಸುತ್ತಿರುವಾಗಲೇ ಜೋಷಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘ದನದ ಹತ್ಯೆ ನಿಲ್ಲಿಸುತ್ತೇವೆ’: ‘ರಾಜ್ಯದಲ್ಲಿ ದನದ ಹತ್ಯೆ ನಿಲ್ಲಿಸುತ್ತೇವೆ. ಅದರಲ್ಲಿ ಎರಡು ಮಾತೇ ಇಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ಬೆಂಗಳೂರಿನಲ್ಲಿ ಹೇಳಿದರು. ‘ಈಗಾಗಲೇ ಗೋ ಹತ್ಯೆ ನಿಷೇಧ ಜಾರಿಯಲ್ಲಿದ್ದು, ದನದ ಹತ್ಯೆಯನ್ನು ತಡೆಯುತ್ತೇವೆ. ಕಾನೂನು ರೂಪಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಅವರು ತಿಳಿಸಿದರು.

Post Comments (+)