ಶನಿವಾರ, ಜೂನ್ 6, 2020
27 °C

‘ರಾಮನಿಗಾಗಿ ತ್ಯಾಗರಾಜರು ಭಿಕ್ಷೆ ಬೇಡುತ್ತಿದ್ದರು’ ಎಂದ ಕಮಲ್‌‌ ಕ್ಷಮೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಸಂಗೀತ ಸಾಮ್ರಾಜ್ಯದ ರಾಜನಾಗಿ ಮೆರೆದ ಸಂತ ತ್ಯಾಗರಾಜರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್‌ ಹಾಸನ್‌ ವಿರುದ್ಧ ಸಂಗೀತಗಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ. 

ತಮಿಳು ನಟ ವಿಜಯ್ ಜತೆ ಇನ್‌ಸ್ಟಾಗ್ರಾಂನಲ್ಲಿ ಮೇ 4ರಂದು ಸಂವಾದ ನಡೆಸಿದ್ದ ಕಮಲ್‌ ಹಾಸನ್‌,  ‘ತ್ಯಾಗರಾಜರು ಭಗವಾನ್ ರಾಮನನ್ನು ಸ್ತುತಿಸುತ್ತಾ ಭಿಕ್ಷೆ ಬೇಡುತ್ತಿದ್ದರು’ ಎಂದು ಹೇಳಿದ್ದರು. ಈ ಹೇಳಿಕೆ ಗಾಯಕರನ್ನು ಕೆರಳಿಸಿದೆ.

ಖ್ಯಾತ ಸಂಗೀತಗಾರ ಪಾಲ್ಘಾಟ್ ರಾಂಪ್ರಸಾದ್, ಕಮಲ್‌ ಹಾಸನ್‌ ಹೇಳಿಕೆಯ ವಿರುದ್ಧ ಆನ್‌ಲೈನ್‌ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಕ್ಷಮೆಗೆ ಆಗ್ರಹಿಸಿದ್ದಾರೆ. Change.org ಹೆಸರಿನ ಈ ಅಭಿಯಾನಕ್ಕೆ ಈಗಾಗಲೇ ಹದಿಮೂರು ಸಾವಿರ ಮಂದಿ ಸಹಿ ಹಾಕಿದ್ದಾರೆ.

‘ನಿಮ್ಮ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ತ್ಯಾಗರಾಜ ಮತ್ತು ಭಗವಾನ್ ರಾಮನ ವಿರುದ್ಧದ ಹೇಳಿಕೆ ಇದು. ನಿರ್ದಿಷ್ಟ ಧರ್ಮ ಅಥವಾ ಜಾತಿಯನ್ನು ಗುರಿಯಾಗಿಸಿಕೊಂಡು ಟೀಕಿಸಿದಂತೆ. ಇದು ಧರ್ಮದ ಅನುಯಾಯಿಗಳಿಗೆ ಮಾಡಿದ ಅವಮಾನ’ ಎಂದು ರಾಂಪ್ರಸಾದ್ ಹೇಳಿದ್ದಾರೆ. 

‘ನಾನು ಕಮಲ್‌ ಹಾಸನ್‌ ಅವರ ಅಭಿಮಾನಿ. ಆದರೆ, ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳು ಇರುಸುಮುರುಸು ಉಂಟು ಮಾಡುತ್ತವೆ. ಇತರರ ಭಾವನೆಗಳನ್ನು ಅಗೌರವಿಸಬಾರದು. ಬೇರೆಯವರ ಆಲೋಚನೆ ಮತ್ತು ಸಿದ್ಧಾಂತಗಳನ್ನು ಬದಲಾಯಿಸಲು ಪ್ರಯತ್ನಿಸಬಾರದು. ಶ್ರೇಷ್ಠ ಸಂತ ತ್ಯಾಗರಾಜರ ಸಾಧನೆಗಳನ್ನು ಯಾರಿಂದಲೂ ಗೌಣ ಮಾಡಲು ಸಾಧ್ಯವಿಲ್ಲ’ ಎಂದು ಜನಪ್ರಿಯ ಕರ್ನಾಟಕ ಗಾಯಕಿ ಮಹತಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು