ಬುಧವಾರ, ಏಪ್ರಿಲ್ 8, 2020
19 °C

ಜತೆಗೂಡಿ ಮುನ್ನಡೆಯೋಣ ಎಲ್ಲರೂ ಬನ್ನಿ: ದೆಹಲಿ ನಿವಾಸಿಗಳಿಗೆ ಕೇಜ್ರಿವಾಲ್ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಾನು ಯಾವುದೇ ಪಕ್ಷದ ಕಾರ್ಯಕರ್ತರಿಗೆ ಮಾತ್ರ ಮುಖ್ಯಮಂತ್ರಿಯಲ್ಲ. ದೆಹಲಿಯ ಎಲ್ಲ ವಾಸಿಗಳಿಗೂ ನಾನು ಮುಖ್ಯಮಂತ್ರಿ ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.

ಸತತ 3ನೇ ಅವಧಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ನೀವು ಬಿಜೆಪಿ, ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ಪರ ಕೆಲಸ ಮಾಡಿದ್ದರೂ, ಮತ ಚಲಾಯಿಸಿದ್ದರೂ ಪರವಾಗಿಲ್ಲ. ನಿಮ್ಮ ಯಾವುದೇ ಸಮಸ್ಯೆ ಅಥವಾ ಕೆಲಸವಿದ್ದರೆ ನನ್ನ ಬಳಿಗೆ ಬನ್ನಿ. ನಾನು ಮಾಡಿಕೊಡ್ತೀನಿ ಎಂದು ಭರವಸೆ ನೀಡಿದರು.

ಯಾವುದಾದರೂ ಒಂದು ಮೊಹಲ್ಲಾದಲ್ಲಿರುವ ಎಲ್ಲರೂ ಬಿಜೆಪಿಗೆ ಮತ ನೀಡಿದ್ದರೂ ಪರವಾಗಿಲ್ಲ. ನಾನು ಅಲ್ಲಿಗೂ ನೀರಿನ ಪೈಪ್‌ಲೈನ್ ಹಾಕಿಸ್ತೀನಿ, ಮೊಹಲ್ಲಾ ಕ್ಲಿನಿಕ್ ಶುರು ಮಾಡಿಸ್ತೀನಿ. ಎಲ್ಲ ದೆಹಲಿ ವಾಸಿಗಳು ನನ್ನ ಬಂಧುಗಳು ಎಂದು ಘೋಷಿಸಿದರು.ದೆಹಲಿಯ ಮುಖ್ಯಮಂತ್ರಿಯಾಗಿ ನಾನು 3ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿದ್ದು ನಿಮ್ಮಿಂದ. ಇದು ಎಲ್ಲರ ವಿಜಯ ಎಂದು ಅವರು ಬಣ್ಣಿಸಿದರು.

‘ಮುಖ್ಯಮಂತ್ರಿಯಾಗಿ ಕೆಲಸ ಮಾಡಲು, ದೆಹಲಿಯನ್ನು ಅಭಿವೃದ್ಧಿಪಡಿಸಲು ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದವೂ ಬೇಕು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಅವರನ್ನೂ ನಾನು ಆಹ್ವಾನಿಸಿದ್ದೆ. ಬಹುಶಃ ಅವರಿಗೆ ಬೇರೆ ಮುಖ್ಯ ಕೆಲಸವಿರಬೇಕು. ಅದಕ್ಕೇ ಬಂದಿಲ್ಲ’ ಎಂದು ವಿವರಿಸಿದರು.

ಕೇಜ್ರಿವಾಲ್ ಭಾಷಣದ ಮುಖ್ಯಾಂಶಗಳಿವು...

‘ದೆಹಲಿಯ ಜನರೇ ಈ ಚುನಾವಣೆ ಮೂಲಕ ನೀವು ಹೊಸ ರಾಜಕಾರಣಕ್ಕೆ ಅವಕಾಶ ಕೊಟ್ಟಿದ್ದೀರಿ. ಇತರ ವಿಚಾರಗಳ ಬದಲು ಕೆಲಸ ಮಾಡುವವರಿಗೆ ಅವಕಾಶ ಕೊಡಬೇಕು ಎಂಬುದನ್ನು ಸಾರಿ ಹೇಳಿದ್ದೀರಿ. 24 ತಾಸು ವಿದ್ಯುತ್, ಆರೋಗ್ಯ, ಕುಡಿಯುವ ನೀರು, ಉತ್ತಮ ರಸ್ತೆ, ಮಹಿಳೆಯರ ಸುರಕ್ಷೆ, ಭ್ರಷ್ಟಾಚಾರ ಮುಕ್ತ ಆಡಳಿತದ ರಾಜಕೀಯಕ್ಕೆ ಮನ್ನಣೆ ಕೊಟ್ಟಿದ್ದೀರಿ.

‘ಚುನಾವಣೆ ವೇಳೆ ಕೆಲವರು ಏನೆಲ್ಲಾ ಮಾತನಾಡಿರಬಹುದು. ನಾನು ಎಲ್ಲರನ್ನೂ ಕ್ಷಮಿಸಿದ್ದೇನೆ. ಎಲ್ಲರ ಜತೆಗೂಡಿ ದೆಹಲಿಯ ಅಭಿವೃದ್ಧಿ ಸಾಧಿಸುವುದು ನನ್ನ ಕನಸು. ನಿಮ್ಮ ಸಮಸ್ಯೆ ಪರಿಹರಿಸುವುದು ನನ್ನ ಕರ್ತವ್ಯ. ನೀವು ಯಾವುದೇ ಪಕ್ಷದ ಬೆಂಬಲಿಗರಾಗಿದ್ದರೂ ಪರವಾಗಿಲ್ಲ. ನಿಮ್ಮ ಮನೆಮಗನಾಗಿ ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ.

‘ಭಾರತದ ಧ್ವಜ ಎತ್ತರದಲ್ಲಿ ಹಾರಾಡಬೇಕು ಎನ್ನುವುದು ನನ್ನ ಕನಸು. ಭಾರತಮಾತೆಯ ಎಲ್ಲ ಮಕ್ಕಳೂ ಉತ್ತಮ ಶಿಕ್ಷಣ ಪಡೆದಾಗ, ಸುರಕ್ಷೆ ಮತ್ತು ಗೌರವದಿಂದ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿದಾಗ, ನಿರುದ್ಯೋಗದ ಸಮಸ್ಯೆ ಸಂಪೂರ್ಣ ಬಗೆಹರಿದಾಗ ನಮ್ಮ ತ್ರಿವರ್ಣ ಧ್ವಜ ಎತ್ತರಕ್ಕೆ ಹಾರುತ್ತೆ. ದೇಶದ ಎಲ್ಲ ಜನರಿಗೂ ಮೂಲ ಸೌಕರ್ಯ ಸಿಗಬೇಕು. ಜಾತಿ ಧರ್ಮದ ಗೊಡವೆಗಳಿಲ್ಲದೆ ನಾವೆಲ್ಲರೂ ಭಾರತಮಾತೆಯ ಮಕ್ಕಳು ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ತುಂಬಬೇಕು. ಆಗ ಮಾತ್ರ ದೇಶ ಮುನ್ನಡೆಯುತ್ತೆ. ಇದು ನಮ್ಮ ರಾಜಕೀಯದ ರೀತಿ. ನೋಡ್ತಿರಿ, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ಇಂಥದ್ದೇ ರಾಜಕೀಯ ಚಾಲ್ತಿಗೆ ಬರುತ್ತೆ.

‘ವಿವಿಧ ರಾಜ್ಯಗಳಲ್ಲಿ ಜನರು ಮೊಹಲ್ಲಾ ಕ್ಲಿನಿಕ್‌ಗಳ ಬಗ್ಗೆ ಮಾತನಾಡ್ತಿದ್ದಾರೆ. ಹಲವು ರಾಜ್ಯ ಸರ್ಕಾರಗಳು ಒಂದಿಷ್ಟು ಯುನಿಟ್‌ ವಿದ್ಯುತ್‌ ಉಚಿತ ಎಂದು ಘೋಷಿಸಿವೆ. ಯಾವುದೇ ರಾಜ್ಯದಲ್ಲಿ ಅಲ್ಲಿನ ಶಿಕ್ಷಣ ಸಚಿವರು ‘ಸರ್ಕಾರಿ ಶಾಲೆ ಸರಿಮಾಡೋಕೆ ಆಗಲ್ಲ’ ಅಂದ್ರೆ ಅಲ್ಲಿನ ಜನರು, ‘ದೆಹಲಿಯಲ್ಲಿ ಆಗಿದೆ, ನಮ್ಮಲ್ಲಿ ಯಾಕೆ ಆಗಲ್ಲ’ ಎಂತ ಕೇಳ್ತಿದ್ದಾರೆ. ದೆಹಲಿ ನಿವಾಸಿಗಳೇ ಈ ಗೌರವ ನಿಮಗೆ ಸಲ್ಲಬೇಕು.

‘ದೆಹಲಿಯನ್ನು ನಾನೊಬ್ಬನೇ ಮುನ್ನಡೆಸಲು ಆಗುತ್ತೆ ಅನ್ನೋ ಭ್ರಮೆ ನನಗಿಲ್ಲ. ಇಲ್ಲಿನ ಜನರೇ ದೆಹಲಿಯನ್ನು ಮುನ್ನಡೆಸುತ್ತಾರೆ. ಅದಕ್ಕೇ ನೋಡಿ, ವೇದಿಕೆ ಮೇಲೆ ಶಿಕ್ಷಕರು, ಮೆಟ್ರೊ ಚಾಲಕಿ, ಪೊಲೀಸ್ ಕಾನ್‌ಸ್ಟೆಬಲ್... ಸೇರಿದಂತೆ ದೆಹಲಿಯ ಆಧಾರ ಸ್ತಂಭದಂತಿರುವವರು ಬಂದಿದ್ದಾರೆ. ಆರು ವರ್ಷದ ಬಾಲಕಿಯ ಅಪಹರಣವಾದಾಗ ದೆಹಲಿ ಪೊಲೀಸ್‌ನ ಕಾನ್‌ಸ್ಟೆಬಲ್ ಅರುಣ್ ಕುಮಾರ್ ತಮ್ಮ ಜೀವ ಒತ್ತೆಯಿಟ್ಟು ಆಕೆಯನ್ನು ಕಾಪಾಡಿದರು. ಇಂಥ ಸಾವಿರಾರು ಮಂದಿ ದೆಹಲಿಯನ್ನು ಮುನ್ನಡೆಸುತ್ತಾರೆ. ಇವರೆಲ್ಲರಿಗೂ ಒಮ್ಮೆ ಜೋರಾಗಿ ಚಪ್ಪಾಳೆ ಕೊಡಿ, ಅಭಿನಂದನೆ ಹೇಳಿ.

‘ದೇವರು ನಮಗೆ ಎಲ್ಲವನ್ನೂ ಫ್ರೀ ಕೊಟ್ಟಿದ್ದಾನೆ. ತಾಯಿ ತನ್ನ ಮಗುವಿಗೆ ತೋರುವ ಪ್ರೀತಿಗೆ ಯಾವುದೇ ಶುಲ್ಕ ಪಡೆಯುವುದಿಲ್ಲ. ತಾನು ತಿನ್ನುವ ಒಪ್ಪತ್ತಿನ ಊಟವನ್ನು ಅಪ್ಪ ತನ್ನ ಮಗುವಿಗಾಗಿ ಬಿಡಲು ಯಾವುದೇ ಶುಲ್ಕ ಕೇಳುವುದಿಲ್ಲ, ಶ್ರವಣಕುಮಾರ ತನ್ನ ಅಪ್ಪ–ಅಮ್ಮನ ತೀರ್ಥ ಯಾತ್ರೆ ಮಾಡಿಸಲು ಯಾವುದೇ ಶುಲ್ಕ ಕೇಳಿರಲಿಲ್ಲ. ಕೇಜ್ರಿವಾಲ್ ಸಹ ಅಷ್ಟೇ, ತನ್ನ ದೆಹಲಿವಾಸಿಗಳನ್ನು ಪ್ರೀತಿಸಲು ಯಾವುದೇ ಶುಲ್ಕ ಕೇಳುವುದಿಲ್ಲ. ದೆಹಲಿ ಜನರೂ ಅಷ್ಟೇ, ಕೇಜ್ರಿವಾಲ್‌ರನ್ನು ಪ್ರೀತಿಸಲು ಯಾವುದೇ ಶುಲ್ಕ ಕೇಳುವುದಿಲ್ಲ. ಎಲ್ಲವೂ ಫ್ರೀ.

‘ದೇಶದ ಎಲ್ಲ ಜನರಿಗೂ ಒಂದು ಕನಸಿದೆ. ಭವಿಷ್ಯವು ಭಾರತದ್ದೇ ಆಗುತ್ತೆ. ವಿಶ್ವದೆಲ್ಲೆಡೆ ಭಾರತದ ನಿನಾದ ಹೊಮ್ಮಬೇಕು. ಪ್ರೀತಿಯ ರಾಜಕೀಯ ಮಾತ್ರ ಅದನ್ನು ಸಾಧ್ಯವಾಗಿಸಬಲ್ಲದು. ಅದಕ್ಕೆ ನೀವು ಭರವಸೆ ತುಂಬಿದ್ದೀರಿ.

‘ಬನ್ನಿ ನಾವೆಲ್ಲರೂ ಹಾಡೋಣ. ಅದು ನಿಮಗೆಲ್ಲರಿಗೂ ಗೊತ್ತಿರುವ ಗೀತಿ. ಹೋಂಗೆ ಕಾಮ್ ಯಾದ್ ಏಕ್ ದಿನ್...’

ಹಾಡಿನೊಂದಿಗೆ ಕೇಜ್ರಿವಾಲ್ ಭಾಷಣ ಮುಗಿಯಿತು. ಮೈದಾನದಲ್ಲಿ ತ್ರಿವಣ ಧ್ವಜಗಳು ಹಾರಾಡಿದವು. ಭಾರತ್‌ ಮಾತಾಕಿ ಜೈ ಘೋಷಣೆ ಮೊಳಗಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು