ಗುರುವಾರ , ಏಪ್ರಿಲ್ 9, 2020
19 °C

ಕೇರಳದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 95ಕ್ಕೆ ಏರಿಕೆ: ಲಾಕ್‌ಡೌನ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೇರಳದ ವಿವಿಧೆಡೆ ಸೋಮವಾರ ಒಂದೇ ದಿನ 28 ಮಂದಿಯಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ 95ಕ್ಕೇರಿದೆ. ಈ ಪೈಕಿ ನಾಲ್ವರು ಗುಣಮುಖರಾಗಿದ್ದಾರೆ.

ಸೋಮವಾರ ಮಧ್ಯರಾತ್ರಿಯಿದಲೇ ರಾಜ್ಯದ ಎಲ್ಲ ಗಡಿಗಳನ್ನೂ ಬಂದ್ ಮಾಡಲಾಗುವುದು. ಬೆಳಿಗ್ಗೆ 7ರಿಂದ 5ರವರೆಗೆ ದಿನಸಿ ಮತ್ತು ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ತೆರೆದಿರಲು ಅವಕಾಶ ನೀಡಲಾಗಿದೆ. ಮನೆಗಳಿಗೆ ಸಾಮಗ್ರಿ ತಲುಪಿಸುವ ಹೋಂ ಡೆಲಿವರಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. 

ಮಾರ್ಚ್‌ 31ರವರೆಗೆ ಲಾಕ್‌ಡೌನ್‌ಗೆ ನಿರ್ಧರಿಸಲಾಗಿದೆ. ಅಗತ್ಯ ಬಿದ್ದರೆ ಲಾಕ್‌ಡೌನ್ ಆದೇಶದ ಅವಧಿಯನ್ನು ವಿಸ್ತರಿಸಲಾಗುವುದು. ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಖಾಸಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪೆಟ್ರೋಲ್‌ ಪಂಪ್‌ಗಳಿಗೆ ನಿರ್ಬಂಧ ವಿಧಿಸಿಲ್ಲ. ರೆಸ್ಟೊರೆಂಟ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಆಹಾರ ಪದಾರ್ಥಗಳ ಹೋಂ ಡೆಲಿವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಸೋಮವಾರ ಪತ್ತೆಯಾದ 28 ಪ್ರಕರಣಗಳ ಪೈಕಿ 25 ಮಂದಿ ಗಲ್ಫ್‌ನಿಂದ ಬಂದಿದ್ದವರು. ಉಳಿದ ಮೂವರು ಈ 25 ಮಂದಿಯ ಆಪ್ತವಲಯದಲ್ಲಿದ್ದವರು. ಇದು ಹೊರತುಪಡಿಸಿದರೆ ರಾಜ್ಯದಲ್ಲಿ ಹೊಸದಾಗಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಉತ್ತರ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 19 ಪ್ರಕರಣಗಳು ಹೊಸದಾಗಿ ಪತ್ತೆಯಾಗುವ ಮೂಲಕ ಅದೊಂದೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 38ಕ್ಕೆ ಮುಟ್ಟಿತ್ತು. ಜನರ ಓಡಾಟ ನಿರ್ಬಂಧಿಸಲು ಜಿಲ್ಲಾಡಳಿತ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಿರ್ಬಂಧದ ಆದೇಶ ಉಲ್ಲಂಘಿಸಿದವರನ್ನು ಬಂಧಿಸಲಾಗುತ್ತಿದೆ. ಸಾಕಷ್ಟು ಜನರಿಗೆ ದಂಡವಿಧಿಸಲಾಗಿದೆ.

ಮನೆಯಲ್ಲಿಯೇ ಪ್ರತ್ಯೇಕವಾಗಿ ಉಳಿಯಬೇಕಾದವರ ಚಲನವಲನವನ್ನು ಜಿಪಿಎಸ್ ಮೂಲಕ ನಿಗಾ ಇರಿಸಲಾಗಿದೆ. ಪ್ರತ್ಯೇಕವಾಗಿ ಉಳಿಯುವಂತೆ ಸೂಚಿಸಿದವರು ಒಂದು ವೇಳೆ ಸೂಚನೆ ಉಲ್ಲಂಘಿಸಿದರೆ, ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಕೇರಳದ ಎಲ್ಲ ಬಾರ್‌ಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಚಿಲ್ಲರೆ ಮದ್ಯದ ಅಂಗಡಿಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಕರೆನ್ಸಿ ನೋಟುಗಳನ್ನು ಸೋಂಕುಮುಕ್ತಗೊಳಿಸಲು ರಿಸರ್ವ್‌ ಬ್ಯಾಂಕ್‌ಗೆ ಮನವಿ ಮಾಡಲಾಗಿದೆ. ವಲಸೆ ಕಾರ್ಮಿಕರಿಗಾಗಿ ವಿಶೇಷ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಕಚೇರಿಗಳು ಅತ್ಯಂತ ಕಡಿಮೆ ಸಿಬ್ಬಂದಿಯೊಂದಿಗೆ ಕೆಲಸ ಮಾಡಲಿವೆ.

ಕೇರಳದಲ್ಲಿ ಈವರೆಗೆ 91 ಮಂದಿಯಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದಿದೆ. 383 ಮಂದಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿದ್ದಾರೆ. 63,937 ಮಂದಿ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ನಿಗಾವಣೆಯಲ್ಲಿದ್ದಾರೆ. ವುಹಾನ್‌ನಿಂದ ಹಿಂದಿರುಗಿದ್ದ ಮೂವರು ಮಲಯಾಳಿ ವಿದ್ಯಾರ್ಥಿಗಳು ಮತ್ತು ಕಣ್ಣೂರಿನಲ್ಲಿದ್ದ ಮತ್ತೋರ್ವ ಸೋಂಕಿತ ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು