ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಅಸಮಾಧಾನ: ಲಾಕ್‌ಡೌನ್ ಭಾಗಶಃ ತೆರವು ನಿರ್ಧಾರ ಹಿಂಪಡೆದ ಕೇರಳ ಸರ್ಕಾರ

Last Updated 20 ಏಪ್ರಿಲ್ 2020, 9:24 IST
ಅಕ್ಷರ ಗಾತ್ರ

ತಿರುವನಂತಪುರ: ಕೋವಿಡ್ ಹಾಟ್‌ಸ್ಪಾಟ್‌ಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡುವ ನಿರ್ಧಾರದಿಂದ ಕೇರಳ ಸರ್ಕಾರ ಹಿಂದೆ ಸರಿದಿದೆ. ಕೇಂದ್ರ ಗೃಹ ಸಚಿವಾಲಯದ ಆಕ್ಷೇಪದ ಹಿನ್ನೆಲೆಯಲ್ಲಿ ಕೇರಳವು ಈ ತೀರ್ಮಾನ ಕೈಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಸರ್ಕಾರ, ಸಂವಹನ ಕೊರತೆಯಿಂದ ಹೀಗಾಗಿದೆ ಎಂದು ಹೇಳಿದೆ. ಈ ಹಿಂದೆ, ಲಾಕ್‌ಡೌನ್ ಸಡಿಲಿಕೆ ನಿರ್ಧಾರವನ್ನು ಅದು ಸಮರ್ಥಿಸಿಕೊಂಡಿತ್ತು. ಅಲ್ಲದೆ, ಲಾಕ್‌ಡೌನ್ ಸಡಿಲಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿಯೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿತ್ತು.

ಲಾಕ್‌ಡೌನ್ ಸಡಿಲಿಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವಾಲಯ ಸೋಮವಾರ ಬೆಳಿಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಈ ವಿಚಾರವಾಗಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ಕೇಂದ್ರವು ನಿಗದಿಪಡಿಸಿರುವ ಮಾರ್ಗಸೂಚಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸೂಚಿಸಿತ್ತು.

‘ಲಾಕ್‌ಡೌನ್ ಸಡಿಲಿಕೆ ಮಾಡಿ ಕೇರಳ ಸರ್ಕಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯು ಏಪ್ರಿಲ್ 15ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ನಿಷೇಧಿಸಲಾಗಿದ್ದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ’ ಎಂದು ಗೃಹ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.

ಕೋವಿಡ್ ಹಾಟ್‌ಸ್ಪಾಟ್‌ಗಳಲ್ಲದ ಆಲಪ್ಪುಳ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರ, ವಯನಾಡ್‌ ಜಿಲ್ಲೆಗಳಲ್ಲಿ ಲಾಕ್‌ಡೌನ್ ಭಾಗಶಃ ತೆರವು ಹಾಗೂ ಕೊಟ್ಟಾಯಂ, ಇಡುಕ್ಕಿಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಏಪ್ರಿಲ್ 20ರಿಂದ ಬಹುತೇಕ ತೆರವುಗೊಳಿಸುವ ಬಗ್ಗೆ ಕೇರಳ ಸರ್ಕಾರ ಏಪ್ರಿಲ್ 17ರಂದು ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಈ ಮಾರ್ಗಸೂಚಿಯಲ್ಲಿ ಹೋಟೆಲ್, ರೆಸ್ಟೋರೆಂಟ್, ಪುರಸಭೆ ವ್ಯಾಪ್ತಿಯಲ್ಲಿನ ಬಸ್ ಸಂಚಾರ, ಸಮ–ಬೆಸ ವಾಹನ ಸಂಚಾರ, ಕಟ್ಟಡ ಕಾರ್ಮಿಕರು, ಕ್ಷೌರದಂಗಡಿ, ಪುಸ್ತಕದಂಗಡಿಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT