ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಲ್ ಆಗಿದ್ದ ‘ಬರಿಗಾಲ ಓಟಗಾರ’ನಿಗೆ ಟ್ರಯಲ್ಸ್‌ನಲ್ಲಿ ಕೊನೆಯ ಸ್ಥಾನ

ತರಬೇತಿ ಬಳಿಕ ಸಾಮರ್ಥ್ಯ ಸುಧಾರಿಸಲಿದೆ ಎಂದ ನೆಟ್ಟಿಗರು
Last Updated 20 ಆಗಸ್ಟ್ 2019, 10:32 IST
ಅಕ್ಷರ ಗಾತ್ರ

ಭೋಪಾಲ್‌: ಬರಿಗಾಗಲ್ಲೇ ಓಡಿ 100 ಮೀಟರ್‌ ಓಟವನ್ನು ಕೇವಲ 11 ಸೆಕೆಂಡ್‌ಗಳಲ್ಲಿ ಕ್ರಮಿಸಿ ಗಮನ ಸೆಳೆದಿದ್ದ ಮಧ್ಯಪ್ರದೇಶದ ಯುವಕ ರಾಮೇಶ್ವರ್‌ಗುರ್ಜಾರ್ ಅವರು ಮಂಗಳವಾರ ನಡೆದ ಟ್ರಯಲ್ಸ್‌ನಲ್ಲಿ ಕೊನೆಯವರಾಗಿ ಗುರಿ ತಲುಪಿದರು.

ರಾಜ್ಯ ಸರ್ಕಾರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ಹಿರಿಯ ಕೋಟ್‌ಗಳ ಸಮ್ಮುಖದಲ್ಲಿಟಿಟಿ ನಗರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಟ್ರಯಲ್ಸ್‌ನಲ್ಲಿ ರಾಮೇಶ್ವರ್‌ ಸೇರಿ ಒಟ್ಟು ಏಳು ಮಂದಿ ಅಥ್ಲೀಟ್‌ಗಳು ಓಡಿದ್ದರು. ಈ ವೇಳೆ ರಾಮೇಶ್ವರ್‌ ಕೊನೆವರಾಗಿ ಓಟ ಮುಗಿಸಿದರು. ಈ ವಿಷಯ ಹಂಚಿಕೊಂಡಿರುವ ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆ ರಾಜ್ಯ ಖಾತೆ ಸಚಿವ ಕಿರಣ್‌ ರಿಜುಜು, ಯುವ ಓಟಗಾರನಿಗೆ ಸೂಕ್ತ ತರಬೇತಿ ಹಾಗೂ ಸಮಯಾವಕಾಶದ ನೀಡಬೇಕಿದ್ದು, ಅತಿಯಾದ ನಿರೀಕ್ಷೆಯ ಮೂಲಕ ಗುರ್ಜಾರ್ ಮೇಲೆ ಒತ್ತಡ ಹೇರುವುದು ಬೇಡ ಎಂದು ಮನವಿ ಮಾಡಿದ್ದಾರೆ.

‘ವಿಡಿಯೊದಲ್ಲಿ ರಾಮೇಶ್ವರ್‌ಗುರ್ಜಾರ್‌ ಎಡಬದಿಯಲ್ಲಿದ್ದಾರೆ. ಅತಿಯಾದ ಪ್ರಚಾರದಿಂದಾಗಿ ಒತ್ತಡಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅವರು ಉತ್ತಮ ಪ್ರದರ್ಶನ ತೋರಿಲ್ಲ. ಗುರ್ಜಾರ್‌ಗೆ ಸೂಕ್ತ ಸಮಯಾವಕಾಶ ಹಾಗೂ ತರಬೇತಿಯನ್ನು ನೀಡಲಿದ್ದೇವೆ’ ಎಂದು ರಿಜುಜು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಮುಂದುವರಿದು ಇನ್ನೊಂದುಟ್ವೀಟ್‌ ಮಾಡಿರುವ ಅವರು, ‘ನನ್ನದೊಂದು ಮನವಿ; ಅತಿಯಾದ ನಿರೀಕ್ಷೆಯ ಹೊರೆಯನ್ನು ರಾಮೇಶ್ವರ್‌ಗುರ್ಜಾರ್‌ ಮೇಲೆ ಹೊರಿಸದಿರಿ. ನಾವು ಎಲ್ಲ ರೀತಿಯ ಸಹಕಾರವನ್ನೂ ನೀಡಲಿದ್ದೇವೆ. ಆದರೆ, ಅಥ್ಲೆಟಿಕ್ಸ್‌ನಲ್ಲಿ ಮನುಷ್ಯನ ಸಾಮರ್ಥ್ಯಕ್ಕೂ ಮಿತಿ ಇದೆ. ತರಬೇತಿಯ ಹೊರತಾಗಿಯೂ ದೈಹಿಕ ಕ್ಷಮತೆಯನ್ನು ಅದು ಅವಲಂಭಿಸಿರುತ್ತದೆ’ ಎಂದು ಹೇಳಿದ್ದಾರೆ.

ವಿಡಿಯೊ ನೋಡಿದ ಹಲವರು,‘ರಸ್ತೆಯಲ್ಲಿ ಓಡುವುದಕ್ಕೂ, ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ಓಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಶೀಘ್ರದಲ್ಲೇ ಅವರು ಟ್ರ್ಯಾಕ್‌ಗೆ ಹೊಂದಿಕೊಳ್ಳಲಿದ್ದಾರೆ’ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT