ಬುಧವಾರ, ಸೆಪ್ಟೆಂಬರ್ 18, 2019
22 °C
ಸೌಲಭ್ಯದ ಭರವಸೆ ನೀಡಿದ ಕೇಂದ್ರ ಸಚಿವ ಕಿರಣ್‌ ರಿಜುಜು

ವಿಡಿಯೊ ವೈರಲ್ | ಬರಿಗಾಲಲ್ಲಿ 11ಸೆಕೆಂಡ್‌ಗಳಲ್ಲೇ 100‌ಮೀಟರ್ ಓಡಿದ ಯುವಕ

Published:
Updated:

ಭೋಪಾಲ್‌: ಮಧ್ಯಪ್ರದೇಶದ ಯುವಕ ರಾಮೇಶ್ವರ್‌ ಗುರ್ಜಾರ್‌ ಎನ್ನುವವರು ಬರಿಗಾಲಿನಲ್ಲಿ 100 ಮೀಟರ್‌ ಓಟವನ್ನು ಕೇವಲ 11 ಸೆಕೆಂಡ್‌ಗಳಲ್ಲಿ ಓಡಿರುವ ವಿಡಿಯೊವೊಂದು ಸಾಕಷ್ಟು ವೈರಲ್‌ ಆಗುತ್ತಿದೆ. ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೊವನ್ನು ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆ ರಾಜ್ಯ ಖಾತೆ ಸಚಿವ ಕಿರಣ್‌ ರಿಜುಜು ಅವರೂ ಶುಕ್ರವಾರ ರಾತ್ರಿ ರೀಟ್ವೀಟ್‌ ಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಯುವಕನಿಗೆ ಸೂಕ್ತ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಯುವಕನ ವಿಡಿಯೊವನ್ನು ಹಂಚಿಕೊಂಡಿದ್ದ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್,  ಭಾರತವು ಪ್ರತಿಭಾವಂತರನ್ನು ಯಾವಾಗಲೂ ಬೆಂಬಲಿಸಿದೆ. ಸರಿಯಾದ ಅವಕಾಶ ಮತ್ತು ಉತ್ತಮ ವೇದಿಕೆಯನ್ನು ಕಲ್ಪಿಸಿದರೆ ಅವರು ಇತಿಹಾಸ ರಚಿಸುತ್ತಾರೆ. ಕ್ರೀಡಾ ಸಚಿವ ಕಿರಣ್‌ ರಿಜುಜು ಅವರು, ಮಹತ್ವಾಕಾಂಕ್ಷೆಯುಳ್ಳ ಓಟಗಾರನಿಗೆ ಬೆಂಬಲ ನೀಡುವಂತೆ ಕೋರುತ್ತೇನೆ ಎಂದು ಬರೆದುಕೊಂಡಿದ್ದರು.

ಚೌಹಾಣ್‌ ಮನವಿಗೆ ಪ್ರತಿಕ್ರಿಯಿಸಿರುವ ಕಿರಣ್‌ ರಿಜುಜು, ‘ಆತನನ್ನು ನನ್ನ ಬಳಿಗೆ ಕರೆತರಲು ಯಾರಿಗಾದರೂ ಸೂಚಿಸಿ. ಆತನನ್ನು ಕ್ರೀಡಾ ಅಕಾಡೆಮಿಗೆ ಸೇರಿಸಲು ಅಗತ್ಯ ವ್ಯವಸ್ಥೆ ಮಾಡುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

ಇದಕ್ಕೂ ಮೊದಲು ವೈರಲ್‌ ವಿಡಿಯೊ ಸಂಬಂಧ ಪ್ರತಿಕ್ರಿಯಿಸಿದ್ದ ಮಧ್ಯಪ್ರದೇಶ ಕ್ರೀಡಾ ಸಚಿವ ಜಿತು ಪತ್ವಾರಿ, ‘ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ದೊರೆತರೆ, ಆತ 100 ಮೀ. ಓಟವನ್ನು 9 ಸೆಕೆಂಡ್‌ಗಳಲ್ಲೇ ಪೂರೈಸಬಲ್ಲ’ ಎಂದು ಹೇಳಿದ್ದರು. ಅದಲ್ಲದೆ, ರಾಜಧಾನಿ ಭೋಪಾಲ್‌ಗೆ ಬರುವಂತೆಯೂ ಯುವಕನಿಗೆ ತಿಳಿಸಿದ್ದರು.

ಅಂದಹಾಗೆ ಗುರ್ಜಾರ್‌ ಓಟದ ಸಮಯ ಹಾಗೂ ದೂರವನ್ನು ಅಧಿಕೃತವಾಗಿ ಅಳೆಯಲಾಗಿಲ್ಲ. ಆದರೆ ವಿಡಿಯೊದಲ್ಲಿರುವಂತೆ ರಸ್ತೆಯ ಮೇಲೆ ಬರೆಯಲಾಗಿರುವ ದೂರವನನ್ನಷ್ಟೇ ನಂಬಲಾಗಿದೆ. ಜೊತೆಗೆ ವಿಡಿಯೊದ ಅವಧಿಯನ್ನು ಓಟದ ವೇಗವೆಂದು ಪರಿಗಣಿಸಲಾಗಿದೆ. ಆದಾಗ್ಯೂ ಗರ್ಜಾರ್‌ ವೇಗ ಎಲ್ಲರ ಗಮನ ಸೆಳದಿದೆ.

ನೂರು ಮೀಟರ್‌ ಓಟದಲ್ಲಿ ರಾಷ್ಟ್ರೀಯ ದಾಖಲೆ ಇರುವುದು 10.26 ಸೆಕೆಂಡ್‌ಗಳಲ್ಲಿ ಓಡಿದ್ದ ಅಮಿಯಾ ಮಲ್ಲಿಕ್‌ ಅವರ ಹೆಸರಲ್ಲಿ. ಪಟಿಯಾಲಾದಲ್ಲಿ ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್‌ ಗ್ರಾಂಡ್‌ ಪ್ರಿಕ್ಸ್‌ ಅಥ್ಲೆಟಿಕ್ಸ್‌ ಕೂಟದಲ್ಲಿ ಪುರುಷರ 100ಮೀ. ವಿಭಾಗದಲ್ಲಿ ನುಜ್ರತ್ ಚಿನ್ನ ಗೆದ್ದಿದ್ದರು. ಅವರು ಓಟ ಪೂರ್ಣಗೊಳಿಸಿದ್ದು, 10.81 ಸೆಕೆಂಡ್‌ಗಳಲ್ಲಿ ಎಂಬುದು ಇಲ್ಲಿ ಗಮನಾರ್ಹ. ಹಾಗಾಗಿ ಗುರ್ಜಾರ್‌ಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡಬೇಕು ಎನ್ನುವ ಕೂಗು ವ್ಯಾಪಕರವಾಗಿ ಕೇಳಿ ಬರುತ್ತಿದೆ.

ಪುರುಷರ 100ಮೀ. ಓಟದ ವಿಶ್ವ ದಾಖಲೆ ಜಮೈಕಾದ ವೇಗದ ತಾರೆ ಉಸೇನ್‌ ಬೋಲ್ಟ್‌ ಅವರ ಹೆಸರಿನಲ್ಲಿದ್ದು, ಅವರು 2009ರಲ್ಲಿ ಬೀಜಿಂಗ್‌ನಲ್ಲಿ ನಡೆದಿದ್ದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ 9.58 ಸೆಕೆಂಡ್‌ಗಲ್ಲಿ ದೂರ ಕ್ರಮಿಸಿದ್ದರು.

Post Comments (+)