ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಆಯೋಗದ ಉಡುಗೊರೆ: ಮಮತಾ ಬ್ಯಾನರ್ಜಿ ಟೀಕೆ

ಪ್ರಧಾನಿ ರ‍್ಯಾಲಿಗೆ ಅವಕಾಶ ನೀಡಿದ್ದಕ್ಕೆ ವಿಪಕ್ಷಗಳಿಂದ ಆಕ್ರೋಶ
Last Updated 16 ಮೇ 2019, 19:46 IST
ಅಕ್ಷರ ಗಾತ್ರ

ಕೋಲ್ಕತ್ತ: ‘ನರೇಂದ್ರ ಮೋದಿ ಅವರ ರ‍್ಯಾಲಿಗೆ ಮಾತ್ರ ಅವಕಾಶ ನೀಡುವ ಮೂಲಕ ಚುನಾವಣಾ ಆಯೋಗವು, ಮೋದಿ ಮತ್ತು ಅಮಿತ್ ಶಾಗೆ ಅಸಂವಿಧಾನಿಕ ಮತ್ತು ಅನೈತಿಕ ಉಡುಗೊರೆ ನೀಡಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

ಕೋಲ್ಕತ್ತದಲ್ಲಿ ಮಂಗಳವಾರ ಅಮಿತ್ ಶಾ ರ‍್ಯಾಲಿಯ ವೇಳೆ ಹಿಂಸಾಚಾರ ನಡೆದ ಕಾರಣ ಚುನಾವಣಾ ಆಯೋಗವು ಒಂದು ದಿನ ಮೊದಲೇ ಚುನಾವಣಾ ಪ್ರಚಾರಕ್ಕೆ ತೆರೆ ಎಳೆದಿತ್ತು. ಪೂರ್ವ ನಿಗದಿಯಂತೆ ಶುಕ್ರವಾರ ರಾತ್ರಿ 10ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಬೇಕಿತ್ತು. ಆದರೆ ಗುರುವಾರ ರಾತ್ರಿ 10ಕ್ಕೆ ಪ್ರಚಾರ ಅಂತ್ಯಗೊಳಿಸಿ ಆಯೋಗವು ಬುಧವಾರ ರಾತ್ರಿ ಆದೇಶ ಹೊರಡಿಸಿತ್ತು. ಆಯೋಗದ ಈ ಕ್ರಮವನ್ನು ಮಮತಾ ಪ್ರಶ್ನಿಸಿದ್ದಾರೆ.

‘ಬುಧವಾರ ರಾತ್ರಿಯಿಂದಲೇ ಪ್ರಚಾರವನ್ನು ನಿಷೇಧಿಸಬೇಕಿತ್ತು. ಗುರುವಾರ ರಾತ್ರಿವರೆಗೆ ಪ್ರಚಾರಕ್ಕೆ ಕಾಲಾವಕಾಶ ನೀಡಿದ್ದು ಏಕೆ? ನರೇಂದ್ರ ಮೋದಿ ಅವರ ರ‍್ಯಾಲಿಗೆ ಅವಕಾಶ ನೀಡಲು ಒಂದು ದಿನ ಬಿಟ್ಟಿದ್ದೀರಾ’ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ ಮಹತ್ಕಾರ್ಯಕ್ಕಾಗಿ ಚುನಾವಣಾ ಆಯೋಗವು ಮೋದಿ ಮತ್ತು ಶಾಗೆ ಈ ಉಡುಗೊರೆ ನೀಡಿದೆ. ಚುನಾವಣಾ ಆಯೋಗವು ಬಿಜೆಪಿಗೆ ಪೂರಕವಾದಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಈ ತರಹದ ಆಯೋಗವನ್ನು ನಾನು ಎಂದೂ ನೋಡಿರಲಿಲ್ಲ. ಬಹುಶಃ ಆಯೋಗದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ವ್ಯಕ್ತಿಗಳೇ ತುಂಬಿರಬೇಕು. ಆಯೋಗವು ಪಕ್ಷಪಾತದಿಂದ ಕೆಲಸ ಮಾಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ತಪ್ಪಿಸ್ಥರ ವಿರುದ್ಧ ನೀವು (ಆಯೋಗ) ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಮಿತ್ ಶಾ ಹೊರತುಪಡಿಸಿ ಉಳಿದವರ ರ‍್ಯಾಲಿಗಳಲ್ಲಿ ಸಮಸ್ಯೆ ಆಗಿಲ್ಲ. ಆದರೆ ನೀವೇಕೆ ಶಾಗೆ ನೋಟಿಸ್ ನೀಡಿಲ್ಲ’ ಎಂದು ಅವರು ಪ್ರಶ್ನಿಸಿದ್ದಾರೆ.‘ಆಯೋಗದ ಈ ಕ್ರಮದ ವಿರುದ್ಧ ನಾವು ಸುಪ್ರೀಂ ಕೋರ್ಟ್‌ ಮೊರೆ ಹೋಗುತ್ತೇವೆ’ ಎಂದು ಅವರು ಹೇಳಿದ್ದಾರೆ.

ಪ್ರತಿಮೆ ನಿರ್ಮಿಸುತ್ತೇವೆ–ಮೋದಿ ಬಿಜೆಪಿ ನೆರವು ಬೇಕಾಗಿಲ್ಲ–ಮಮತಾ

ಮಾಉ (ಉತ್ತರಪ್ರದೇಶ)/ಕೋಲ್ಕತ್ತ: ‘ಟಿಎಂಸಿ ಗೂಂಡಾಗಳು ವಿದ್ಯಾಸಾಗರರ ಪಗ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಆದರೆ ನಾವು ಭವ್ಯವಾದ ಪ್ರತಿಮೆ ನಿರ್ಮಿಸಿಕೊಡುತ್ತೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮಾಉನಲ್ಲಿ ಗುರುವಾರ ನಡೆದ ಪ್ರಚಾರ ಸಭೆಯಲ್ಲಿ ಮೋದಿ ಈ ಮಾತು ಹೇಳಿದ್ದಾರೆ. ‘ಈ ಹಿಂದೆ ಎಲ್ಲಿತ್ತೋ ಅದೇ ಜಾಗದಲ್ಲಿ ನಾವು ವಿದ್ಯಾಸಾಗರರ ಪಂಚಲೋಹದ ಪ್ರತಿಮೆ ಸ್ಥಾಪಿಸುತ್ತೇವೆ’ ಎಂದು ಮೋದಿ ಹೇಳಿದ್ದಾರೆ. ಇದನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದಾರೆ.

‘ಮೊದಲು ಪ್ರತಿಮೆಯನ್ನು ಧ್ವಂಸ ಮಾಡಿ, ಈಗ ಹೊಸ ಪ್ರತಿಮೆ ನಿರ್ಮಿಸಿಕೊಡುತ್ತೇವೆ ಎನ್ನುತ್ತಿರುವ ಬಿಜೆಪಿಯ ನೆರವು ಬೇಕಾಗಿಲ್ಲ. ಬಿಜೆಪಿ ಪ್ರತಿಮೆ ನಿರ್ಮಿಸಿಕೊಡಬಹುದು. ಆದರೆ 200 ವರ್ಷಗಳ ಪರಂಪರೆಯನ್ನು ಮರುಸ್ಥಾಪಿಸಲು ಸಾಧ್ಯವೇ?’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಬಂಗಾಳದಲ್ಲಿ ಮೋದಿಯ ರ‍್ಯಾಲಿಗಳು:ಪಶ್ಚಿಮ ಬಂಗಾಳದ ಮಥುರಾಪುರ ಮತ್ತು ಕೋಲ್ಕತ್ತದ ಡಮ್‌ಡಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಚುನಾವಣಾ ರ‍್ಯಾಲಿ ನಡೆಸಿದ್ದಾರೆ. ‘ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ ಸ್ಥಳದಲ್ಲಿ ಸಾಕ್ಷ್ಯಗಳನ್ನು ಪಶ್ಚಿಮ ಬಂಗಾಳ ಪೊಲೀಸರು ನಾಶ ಮಾಡುತ್ತಿದ್ದಾರೆ. ಟಿಎಂಸಿ ಗೂಂಡಾಗಳು ಪಶ್ಚಿಮ ಬಂಗಾಳವನ್ನು ನರಕವನ್ನಾಗಿಸಿದ್ದಾರೆ’ ಎಂದು ಮೋದಿ ಆರೋಪಿಸಿದ್ದಾರೆ.

ಅಧಿಕಾರಿಗಳ ವರ್ಗಾವಣೆಗೆ ಕಿಡಿ

ಪಶ್ಚಿಮ ಬಂಗಾಳದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯ ಮತ್ತು ಸಿಐಡಿ ಹೆಚ್ಚುವರಿ ಮಹಾ ನಿರ್ದೇಶಕ ರಾಜೀವ್ ಕುಮಾರ್ ಅವರನ್ನು ವರ್ಗಾವಣೆ ಮಾಡಿರುವುದಕ್ಕೆ ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಕರ್ತವ್ಯಕ್ಕೆ ರಾಜ್ಯದ ಪೊಲೀಸರನ್ನು ಬಳಸಿಕೊಳ್ಳಿ ಎಂದು ಕೇಳಿದ್ದಕ್ಕೆ ಪ್ರಧಾನ ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹವಾಲಾ ದಂಧೆಯ ಮೂಲಕ ಬಿಜೆಪಿಯು ಪಶ್ಚಿಮ ಬಂಗಾಳಕ್ಕೆ ಕೋಟ್ಯಂತರ ರೂಪಾಯಿಯನ್ನು ರವಾನೆ ಮಾಡುತ್ತಿದೆ. ಚುನಾವಣೆಯಲ್ಲಿ ಈ ಹಣವನ್ನು ಬಳಸಲಾಗುತ್ತಿದೆ. ರಾಜೀವ್ ಕುಮಾರ್ ಅವರು ಇದಕ್ಕೆ ಕಡಿವಾಣ ಹಾಕಿದ್ದರು. ಹವಾಲಾ ಮೇಲೆ ದಾಳಿ ನಡೆಸಿದ ಕಾರಣಕ್ಕೇ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಮತಾ ಆರೋಪಿಸಿದ್ದಾರೆ.

ರಾಜೀವ್ ಕುಮಾರ್ ಅವರು ಗುರುವಾರ ಮಧ್ಯಾಹ್ನ ಕೇಂದ್ರ ಗೃಹ ಸಚಿವಾಲಯದ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ವೀಕ್ಷಕರ ಶಿಫಾರಸು ಕಡೆಗಣನೆ

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರ‍್ಯಾಲಿ ವೇಳೆ ನಡೆದ ಗಲಭೆಗೆ ಸಂಬಂಧಿಸಿದ ಸಭೆಯಲ್ಲಿ,‘ತಕ್ಷಣವೇ ಪ್ರಚಾರವನ್ನು ನಿಷೇಧಿಸಬೇಕು’ ಎಂದು ಚುನಾವಣಾ ಆಯೋಗದ ಕೇಂದ್ರ ವೀಕ್ಷಕರು ಶಿಫಾರಸು ಮಾಡಿದ್ದರು. ಆದರೆ ಈ ಶಿಫಾರಸನ್ನು ಕಡೆಗಣಿಸಿ, ಒಂದು ದಿನದ ನಂತರ ಪ್ರಚಾರಕ್ಕೆ ತೆರೆ ಎಳೆಯಲಾಗಿದೆ ಎಂದು ಆಯೋಗದ ಉನ್ನತ ಮೂಲಗಳು ಮಾಹಿತಿ ನೀಡಿವೆ ಎಂದು ವರದಿಯಾಗಿದೆ.

‘ಪ್ರಚಾರಕ್ಕೆ ಅವಕಾಶ ನೀಡಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಹೀಗಾಗಿ ಈ ವಿಚಾರವನ್ನು ಕಡೆಗಣಿಸುವಂತಿಲ್ಲ’ ಎಂದು ವೀಕ್ಷಕರು ಹೇಳಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT