ಸೋಮವಾರ, ಸೆಪ್ಟೆಂಬರ್ 27, 2021
22 °C

ಉತ್ತರ ಪ್ರದೇಶ: ಭಾರಿ ಮಳೆ, ಸಿಡಿಲಿನಿಂದ 24 ಮಂದಿ ಸಾವು

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಲಖನೌ: ಮಳೆ ಹಾಗೂ ಸಿಡಿಲಿನಿಂದಾಗಿ ಉತ್ತರ ಪ್ರದೇಶದಲ್ಲಿ ಗುರುವಾರ ಒಂದೇ ದಿನ 24 ಮಂದಿ ಮೃತಪಟ್ಟಿದ್ದು, 12 ಜನರು ಗಾಯಗೊಂಡಿದ್ದಾರೆ. ಡಿಯೋರಿಯಾ ಜಿಲ್ಲೆಯೊಂದರಲ್ಲೇ 9 ಜನರು ಸಾವಿಗೀಡಾಗಿರುವುದು ವರದಿಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಪ್ರದೇಶ ಪರಿಹಾರ ಆಯುಕ್ತ ಸಂಜಯ್ ಗೋಯಲ್‌, ‘ಮಳೆ ಹಾಗೂ ಸಿಡಿಲಿನಿಂದಾಗಿ ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಗುರುವಾರ ಒಟ್ಟು 24 ಜನರು ಮೃತಪಟ್ಟಿದ್ದಾರೆ. ಫತೇಪುರ್, ಬಲರಾಮ್‌ಪುರ, ಉನ್ನಾವೊ ಹಾಗೂ ಕುಶಿನಗರ್‌ ಜಿಲ್ಲೆಗಳಲ್ಲಿ ತಲಾ 1, ಡಿಯೋರಿಯಾ ಜಿಲ್ಲೆಯಲ್ಲಿ 9, ಬಾರಾಬಂಕಿ ಜಿಲ್ಲೆಯಲ್ಲಿ  2, ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ 6, ಅಂಬೇಡ್ಕರ್‌ ನಗರ ಜಿಲ್ಲೆಯಲ್ಲಿ 3 ಮಂದಿ ಮೃತಪಟ್ಟಿದ್ದಾರೆ’ ಎಂದು ತಿಳಿಸಿದ್ದಾರೆ.

ಬಿಹಾರದ ಎಂಟು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌
ಬಿಹಾರದಲ್ಲಿ ಗುರುವಾರ ಒಂದೇ ದಿನ ಸಿಡಿಲು ಬಡಿದು 83 ಜನರು ಮೃತಪಟ್ಟಿದ್ದರು. ಇಲ್ಲಿನ ಸಿವಾನ್‌, ಗೋಪಾಲ್‌ಗಂಜ್‌, ಸೀತಾಮರ್ಹಿ, ದರ್ಭಂಗಾ, ಸುಪಾಲ್‌, ಅರಾರಿಯಾ, ಕಿಶಾನ್‌ಗಂಜ್‌, ಕತಿಹಾರ್‌ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಿಹಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ತಲಾ ₹4 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್, ‘ಭಾರೀ ಮಳೆ ಮತ್ತು ಮಿಂಚಿನಿಂದಾಗಿ ಉತ್ತರ ಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ ಪ್ರಾಣಹಾನಿ ಸಂಭವಿಸಿರುವ ಸುದ್ದಿ ತಿಳಿದು ದುಃಖವಾಯಿತು. ಆಡಳಿತವು ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಂತಾಪ’ ಎಂದು ರಾಮನಾಥ ಬರೆದುಕೊಂಡಿದ್ದಾರೆ.

‘ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಸಿಡಿಲು ಮತ್ತು ಮಳೆಗೆ ಹಲವು ಜೀವಗಳು ಬಲಿಯಾದ ದುರಂತಮಯ ಸುದ್ದಿ ತಿಳಿಯಿತು. ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪಗಳು’ ಎಂದು ಪ್ರಧಾನಿ ಮೋದಿ ಹೇಳಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು