ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌ನಲ್ಲೂ ಬಿಜೆಪಿಗೆ ಮೈತ್ರಿ ಸವಾಲು

ಮಿತ್ರಪಕ್ಷಗಳಿಂದ ಪ್ರತ್ಯೇಕ ಸ್ಪರ್ಧೆಯ ಮಾತು; ಕೊನೆಯಾಗದ ಸೀಟು ಹೊಂದಾಣಿಕೆ ಬಿಕ್ಕಟ್ಟು
Last Updated 12 ನವೆಂಬರ್ 2019, 21:17 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದಲ್ಲಿ ಬಹುಕಾಲದ ಮಿತ್ರಪಕ್ಷ ಶಿವಸೇನಾ ಬೆಂಬಲ ಸಿಗದೇ ಸರ್ಕಾರ ರಚನೆಯಿಂದ ಹಿಂದೆ ಸರಿದಿರುವ ಬಿಜೆಪಿಗೆ ಜಾರ್ಖಂಡ್‌ನಲ್ಲೂ ಮಿತ್ರಿಪಕ್ಷಗಳಿಂದ ತೀವ್ರ ಒತ್ತಡ ಎದುರಾಗಿದೆ. ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ನೀಡುವಂತೆ ಜಾರ್ಖಂಡ್ ಸ್ಟೂಡೆಂಟ್ ಯೂನಿಯನ್ (ಎಜೆಎಸ್‌ಯು) ಹಾಗೂ ಲೋಕಜನಶಕ್ತಿ (ಎಲ್‌ಜೆಪಿ) ಪಕ್ಷಗಳು ಇಟ್ಟಿರುವ ಬೇಡಿಕೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

2014ರ ಚುನಾವಣೆಯಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಂಡಿದ್ದ ಎಲ್‌ಜೆಪಿ, ಈ ಬಾರಿ 50 ಕ್ಷೇತ್ರಗಳಲ್ಲಿ ಏಕಾಂಗಿ ಸ್ಪರ್ಧೆಗೆ ನಿರ್ಧರಿಸಿದೆ. ಜಾರ್ಖಂಡ್ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಪಕ್ಷದ ರಾಜ್ಯಸಮಿತಿ ತೆಗೆದುಕೊಂಡಿದೆ ಎಂದು ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಮಂಗಳವಾರ ತಿಳಿಸಿದ್ದಾರೆ.

ಕಳೆದ ಚುನಾವಣೆಯ ಸ್ಥಿತಿ ಏನಿತ್ತು?
81 ಸದಸ್ಯಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿದಿತ್ತು. 72 ಕ್ಷೇತ್ರಗಳ ಪೈಕಿ 37ರಲ್ಲಿ
ಬಿಜೆಪಿ, 5ರಲ್ಲಿ ಎಜೆಎಸ್‌ಯು ಜಯ,ಗಳಿಸಿದ್ದವು.

ಮತ್ತೊಂದು ಮೈತ್ರಿಕೂಟದಲ್ಲಿ ಕಾಂಗ್ರೆಸ್, ಆರ್‌ಜೆಡಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷಗಳಿದ್ದವು. ಕಾಂಗ್ರೆಸ್ ಸ್ಪರ್ಧಿಸಿದ್ದ 62ರ ಪೈಕಿ 6 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತು. ಜೆಎಂಎಂ ಶಾಸಕರು 19 ಕಡೆ ಆಯ್ಕೆಯಾದರು. ಆರ್‌ಜೆಡಿ ಖಾತೆ ತೆರೆಯಲು ವಿಫಲವಾಯಿತು.

ಈ ಬಾರಿ ಕಾಂಗ್ರೆಸ್ 31, ಜೆಎಂಎಂ 43 ಹಾಗೂ ಉಳಿದ ಕ್ಷೇತ್ರಗಳಲ್ಲಿ ಆರ್‌ಜೆಡಿ ಸ್ಪರ್ಧೆ ಮಾಡಲಿವೆ. ಜೆಎಂಎಂ ಮುಖ್ಯಸ್ಥ ಹೇಮಂತ್ ಸೊರೇನ್ ಅವರು ಮೈತ್ರಿಕೂಟದ ನೇತೃತ್ವ ವಹಿಸಿದ್ದಾರೆ.

ಆರು ಕ್ಷೇತ್ರಗಳನ್ನು ಬಿಟ್ಟುಕೊಡು
ವಂತೆ ಬಿಜೆಪಿ ಎದುರು ಬೇಡಿಕೆಯಿಟ್ಟಿದ್ದ ಎಲ್‌ಜೆಪಿ ಮೈತ್ರಿಯ ಪರವಾಗಿಯೇ ಇತ್ತು. ಆದರೆ ಪಾಸ್ವಾನ್ ನೇತೃತ್ವದ ಪಕ್ಷಕ್ಕೆ ರಾಜ್ಯದಲ್ಲಿ ಭದ್ರ ನೆಲೆಯಿಲ್ಲ ಎಂಬ ಕಾರಣಕ್ಕೆ ಹೆಚ್ಚು ಸ್ಥಾನಗಳನ್ನು ನೀಡಲು ಬಿಜೆಪಿ ಸಿದ್ಧವಿಲ್ಲ ಎನ್ನಲಾಗಿದೆ.

ರಾಜ್ಯದಲ್ಲಿ ಹೆಚ್ಚು ಪ್ರಭಾವಶಾಲಿ ಎನಿಸಿರುವಎಜೆಎಸ್‌ಯು, ಸೀಟು ಹೊಂದಾಣಿಕೆಗೆ ಸಂಬಂಧಪಟ್ಟಂತೆ ಬಿಜೆಪಿ ಪಾಲಿಗೆ ದೊಡ್ಡ ಸವಾಲಾಗಿದೆ. 2014ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟು ಕ್ಷೇತ್ರಗಳ ಪೈಕಿ 5ರಲ್ಲಿ ಈ ಪಕ್ಷ ಗೆದ್ದಿತ್ತು. ಈ ಬಾರಿ 19 ಕ್ಷೇತ್ರಗಳನ್ನು ಕೇಳಿದೆ. ಆದರೆ 9ಕ್ಕಿಂತ ಹೆಚ್ಚು ಸೀಟು ಬಿಟ್ಟುಕೊಡಲು ಬಿಜೆಪಿ ತಯಾರಿಲ್ಲ ಎಂದು ಮೂಲಗಳು ತಿಳಿಸಿವೆ. ಒಂದು ಹೆಜ್ಜೆ ಮುಂದೆ ಹೋಗಿರುವ ಎಜೆಎಸ್‌ಯು, 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದರೆ ಈ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಹಾಕಿದೆ. ಭಾನುವಾರ 52 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ, ಎಜೆಎಸ್‌ಯು ಹಾಗೂ ಎಲ್‌ಜೆಪಿ ಬಿಕ್ಕಟ್ಟಿನಿಂದ ಎರಡನೇ ಪಟ್ಟಿ ಪ್ರಕಟಣೆಯನ್ನು ತಡೆಹಿಡಿದಿದೆ ಎನ್ನಲಾಗಿದೆ. ಎಜೆಎಸ್‌ಯು ಜೊತೆ ಪರಿಹಾರ ಸೂತ್ರಕ್ಕಾಗಿ ಮಾತುಕತೆ ನಡೆಯುತ್ತಿದೆ.

‘ಹೊಂದಾಣಿಕೆ ಕೊರತೆಯಿಂದ ಬಿಜೆಪಿ, ಎಲ್‌ಜೆಪಿ ಹಾಗೂ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧಿಸಲಿವೆ. ಬಿಜೆಪಿ ಎಂದೂ ಮಾತುಕತೆಗೆ ಮುಂದಾಗಲಿಲ್ಲ’ ಎನ್ನುವುದು ಜೆಡಿಯು ಹಿರಿಯ ಮುಖಂಡರೊಬ್ಬರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT