ಸೋಮವಾರ, ಸೆಪ್ಟೆಂಬರ್ 16, 2019
21 °C

ಘಟಾನುಘಟಿಗಳ ಭವಿಷ್ಯ ನಿರ್ಧಾರ

Published:
Updated:

ಲಖನೌ: ಸೋಮವಾರದ ಮತದಾನದಲ್ಲಿ ಉತ್ತರ ಪ್ರದೇಶದಲ್ಲಿ ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಲಖನೌದಲ್ಲಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಮೇಠಿಯಲ್ಲಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಯಬರೇಲಿಯಲ್ಲಿ ಸ್ಪರ್ಧಿಸಿದ್ದಾರೆ. 

ಐದನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ಆಗಲಿದೆ. ಈ ಪೈಕಿ 12 ಕ್ಷೇತ್ರಗಳನ್ನು ಕಳೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತು. ರಾಯಬರೇಲಿಯಲ್ಲಿ ಸೋನಿಯಾ ಮತ್ತು ಅಮೇಠಿಯಲ್ಲಿ ರಾಹುಲ್‌ ಗೆದ್ದಿದ್ದರು. 

ಬಿಎಸ್‌ಪಿ–ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟದಿಂದ ಬಿಎಸ್‌ಪಿ ಐದು ಮತ್ತು ಎಸ್‌ಪಿ ಏಳು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿವೆ. ಅಮೇಠಿ ಮತ್ತು ರಾಯಬರೇಲಿಯಲ್ಲಿ ಮೈತ್ರಿಕೂಟವು ಅಭ್ಯರ್ಥಿಗಳನ್ನು ಹಾಕಿಲ್ಲ. 

ರಾಜನಾಥ್‌ ಅವರು ಲಖನೌದಿಂದ ಮರು ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ಗೆ ಇತ್ತೀಚೆಗೆ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ ಅವರ ಹೆಂಡತಿ ಪೂನಂ ಸಿನ್ಹಾ ಅವರು ಇಲ್ಲಿ ಎಸ್‌ಪಿ ಅಭ್ಯರ್ಥಿ. ಸ್ಮೃತಿ ಅವರು ಕಳೆದ ಚುನಾವಣೆಯಲ್ಲಿಯೂ ಅಮೇಠಿಯಿಂದ ಸ್ಪರ್ಧಿಸಿದ್ದರು. 

ಅಯೋಧ್ಯೆ ಇರುವ ಫೈಜಾಬಾದ್‌ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್‌ ಪುನರಾಯ್ಕೆ ಬಯಸಿದ್ದಾರೆ. ನಿರ್ಮಲ್‌ ಸಿಂಗ್ ಖತ್ರಿ ಇಲ್ಲಿ ಕಾಂಗ್ರೆಸ್‌ ಉಮೇದುವಾರ. ಅವರು ಉತ್ತರ ಪ್ರದೇಶ ಕಾಂಗ್ರೆಸ್‌ ಘಟಕಕ್ಕೆ ಹಿಂದೆ ಅಧ್ಯಕ್ಷರಾಗಿದ್ದರು. ಧೌರ್‌ಹರಾ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಜಿತಿನ್‌ ಪ್ರಸಾದ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ. ಚಂಬಲ್ ಕಣಿವೆಯ ಮಾಜಿ ಡಕಾಯಿತ ಮಲ್ಕನ್‌ ಸಿಂಗ್‌ ಅವರನ್ನು ಪ್ರಗತಿಶೀಲ ಸಮಾಜವಾದಿ ಪಕ್ಷ–ಲೋಹಿಯಾ ಕಣಕ್ಕೆ ಇಳಿಸಿದೆ. ಇದು ಮುಲಾಯಂ ಸಿಂಗ್‌ ಅವರ ಸೋದರ ಶಿವಪಾಲ್‌ ಯಾದವ್‌ ಅವರ ಪಕ್ಷ. 

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಸ್ಮೃತಿ ಪರವಾಗಿ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಅಮೇಠಿಯಲ್ಲಿ ರೋಡ್‌ಷೋ ನಡೆಸಿದ್ದಾರೆ. ಪೂನಂ ಸಿನ್ಹಾ ಪರವಾಗಿ ಅವರ ಮಗಳು, ಬಾಲಿವುಡ್‌ ತಾರೆ ಸೋನಾಕ್ಷಿ ಸಿನ್ಹಾ ಮತ್ತು ಗಂಡ ಶತ್ರುಘ್ನ ಸಿನ್ಹಾ ಪ್ರಚಾರ ಮಾಡಿದ್ದಾರೆ. 

Post Comments (+)