ಮಂಗಳವಾರ, ಆಗಸ್ಟ್ 20, 2019
25 °C
ಕೋಲ್ಕತ್ತದಲ್ಲಿ ಭಗ್ನಗೊಂಡಿರುವ ವಿದ್ಯಾಸಾಗರ ಪ್ರತಿಮೆ

ಪುತ್ಥಳಿ ಧ್ವಂಸಗೊಂಡ ಸ್ಥಳದಲ್ಲಿಯೇ ಭವ್ಯ ಪ್ರತಿಮೆ ಸ್ಥಾಪಿಸುತ್ತೇವೆ–ಪ್ರಧಾನಿ ಮೋದಿ

Published:
Updated:

ಕೋಲ್ಕೊತ್ತ: ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿ ಭಗ್ನಗೊಂಡಿರುವ ಸ್ಥಳದಲ್ಲಿ ಪರಿಶೀಲನೆಗೆ ಬಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಷಾದದ ನೋಟ ಬೀರಿದರು. 

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರೋಡ್‌ ಶೋ ವೇಳೆದ ನಡೆದ ಹಿಂಸಾಚಾರದ ನಂತರದಲ್ಲಿ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಹಾಗೂ ಬಿಜೆಪಿ ಪಕ್ಷಗಳು ಒಬ್ಬರ ಮೇಲೊಬ್ಬರು ಆರೋಪ–ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಬಿಜೆಪಿ ಫೋಟೊ ಸಾಕ್ಷ್ಯ ನೀಡಿದರೆ, ಟಿಎಂಸಿ ವಿಡಿಯೊ ಬಿಡುಗಡೆ ಮಾಡಿದೆ. ಈ ನಡುವೆ ಮಧ್ಯ ಪ್ರದೇಶಿಸಿರುವ ಚುನಾವಣಾ ಆಯೋಗ, ಚುನಾವಣಾ ಪ್ರಚಾರ ಅವಧಿಯನ್ನೇ ಮೊಟಕುಗೊಳಿಸಿದೆ. 

ಆಯೋಗ ನೀಡಿರುವ ಸೂಚನೆ ವಿರುದ್ಧ ಟಿಎಂಸಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾಮೈತ್ರಿಯ ಇತರೆ ಪಕ್ಷಗಳ ಮುಖಂಡರು ಟಿಎಂಸಿ ಬೆನ್ನಿಗೆ ನಿಂತು ಬೆಂಬಲಿಸಿದ್ದಾರೆ. ಕಾಂಗ್ರೆಸ್‌, ಮಾಯಾವತಿ, ಅಖಿಲೇಶ್‌ ಯಾದವ್‌ ಹಾಗೂ ಚಂದ್ರಬಾಬು ನಾಯ್ಡು ಅವರನ್ನು ಟ್ಯಾಗ್‌ ಮಾಡಿ ಮಮತಾ ಧನ್ಯವಾದ ತಿಳಿಸಿದ್ದಾರೆ. ’ಬಿಜೆಪಿ ಸೂಚನೆಯಂತೆ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮ ಪ್ರಜಾಪ್ರಭುತ್ವದ ಮೇಲೆ ನೇರ ಆಕ್ರಮಣ ಮಾಡಿದಂತೆ. ಜನರು ಸರಿಯಾದ ಉತ್ತರವನ್ನೇ ನೀಡಲಿದ್ದಾರೆ’ ಎಂದು ಟ್ವೀಟಿಸಿದ್ದಾರೆ.

ಭವ್ಯ ಪ್ರತಿಮೆ ಸ್ಥಾಪನೆ

ಪುತ್ಥಳಿ ಧ್ವಂಸದ ಕುರಿತು ಉತ್ತರ ಪ್ರದೇಶದ ಮವೂನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸಹೋದರ ಅಮಿತ್‌ ಶಾ ಅವರ ಕೋಲ್ಕತ್ತ ರ್‍ಯಾಲಿ ವೇಳೆ ಟಿಎಂಸಿ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಅವರು ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ವಿದ್ಯಾಸಾಗರ ಅವರ ಕನಸುಗಳಿಗೆ ನಾವು ಬದ್ಧರಾಗಿದ್ದೇವೆ ಹಾಗೂ ಅದೇ ಸ್ಥಳದಲ್ಲಿ ನಾವು ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಿದ್ದೇವೆ’ ಎಂದು ಗುರುವಾರ ಘೋಷಿಸಿದ್ದಾರೆ. 

ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಎಂಸಿ ವಕ್ತಾರ ಡೆರೆಕ್‌ ಒ'ಬ್ರಯಾನ್‌, ‘ಮೋದಿ. ನೀವು ಮಹಾನ್‌ ಸುಳ್ಳುಗಾರ’ ಎಂದಿದ್ದಾರೆ. 

ಅಮಿತ್ ಶಾ ರೋಡ್‌ ಶೋ ಗಲಭೆ: ವೈರಲ್‌ ವಿಡಿಯೊಗಳಲ್ಲಿ ಕಂಡವರು ಯಾರು?

ವಿದ್ಯಾಸಾಗರ ಕಾಲೇಜಿಗೆ ನುಗ್ಗಿ ಗಲಭೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕೇಸರಿ ಬಣ್ಣದ ಟೀಶರ್ಟ್‌ ಧರಿಸಿದವರು ಹಿಂಸಾಚಾರ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿದ್ಯಾಸಾಗರರ ಪುತ್ಥಳಿ ಒಡೆದದ್ದು ಯಾರು?

‘ಬಿಜೆಪಿಯ ರೋಡ್‌ ಷೋ ಮೇಲೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರೇ ಕಲ್ಲು ತೂರಾಟ ನಡೆಸಿದ್ದರು ಮತ್ತು ಪ್ರತಿಮೆ ಧ್ವಂಸಕ್ಕೂ ಅವರೇ ಕಾರಣ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಆರೋಪಿಸಿದ್ದಾರೆ. ಆದರೆ, ‘ಬಿಜೆಪಿಯವರು ಹೊರಗಿನಿಂದ ಜನರನ್ನು ಕರೆತಂದು ಗಲಭೆ ಮಾಡಿಸಿದ್ದಾರೆ’ ಎಂದು ಟಿಎಂಸಿ ಆರೋಪಿಸಿದೆ. ಘಟನೆ ಕುರಿತ ವಿಡಿಯೊ ಒಂದನ್ನು ಬಿಡುಗಡೆ ಮಾಡಿದೆ.

ಮಂಗಳವಾರ ನಡೆದ ಗಲಭೆಯನ್ನು ಖಂಡಿಸಿ ಬಿಜೆಪಿ ಮುಖಂಡರು ಬುಧವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಮೌನ ಪ್ರತಿಭಟನೆ ನಡೆಸಿದರು. ಕೋಲ್ಕತ್ತದಲ್ಲಿ ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಟಿಎಂಸಿ ಅಧ್ಯಕ್ಷೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಶ್ಚಿಮ ಬಂಗಾಳದಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ: ಚುನಾವಣಾ ಆಯೋಗ ಘೋಷಣೆ

ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ಒಂಬತ್ತು ಲೋಕಸಬಾ ಕ್ಷೇತ್ರಗಳ ಬಹಿರಂಗ ಪ್ರಚಾರವನ್ನು ಗುರುವಾರ ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಬಹಿರಂಗ ಪ್ರಚಾರದ ಅವಧಿಯನ್ನು ಒಂದು ದಿನ ಕಡಿತಗೊಳಿಸಲಾಗಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಕೋಲ್ಕತ್ತದಲ್ಲಿ ಮಂಗಳವಾರ ರೋಡ್‌ ಷೋ ನಡೆಸಿದ್ದರು. ಆ ಸಂದರ್ಭದಲ್ಲಿ ನಡೆದ ಗಲಭೆಯ ಕಾರಣಕ್ಕೆ ಆಯೋಗವು ಈ ನಿರ್ಧಾರ ಕೈಗೊಂಡಿದೆ.

ಇದೇ 19ರಂದು ಇಲ್ಲಿ ಮತದಾನ ನಡೆಯಲಿದೆ. ಸಾಮಾನ್ಯವಾಗಿ ಮತದಾನಕ್ಕೆ 48 ಗಂಟೆ ಇರುವಂತೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಅದರ ಪ್ರಕಾರ ಈ 9 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ಅಂತ್ಯವಾಗಬೇಕಿತ್ತು. ಆದರೆ ಗಲಭೆ ಸಂಭವಿಸಿದ ಕಾರಣಕ್ಕೆ ಗುರುವಾರ (ಮೇ 16) ರಾತ್ರಿ 10 ಗಂಟೆಯ ನಂತರ ಬಹಿರಂಗ ಪ್ರಚಾರ ನಡೆಸಬಾರದು ಎಂದು ಆಯೋಗ ಸೂಚಿಸಿದೆ.

ಕೋಲ್ಕತ್ತ ರೋಡ್‌ ಶೋ ವೇಳೆ ಹಿಂಸಾಚಾರ: ದೀದಿ ವಿರುದ್ಧ ಅಮಿತ್‌ ಷಾ ಗುಡುಗು

ಟಿಎಂಸಿ ಹಿಂಸಾಚಾರ ನಡೆಸಿರುವುದಕ್ಕೆ ಫೋಟೊ ಸಾಕ್ಷ್ಯಗಳನ್ನು ಮಾಧ್ಯಮ ಗೋಷ್ಠಿಯಲ್ಲಿ ಅಮಿತ್‌ ಶಾ ನೀಡಿದ್ದಾರೆ. ಈಶ್ವರಚಂದ್ರ ವಿದ್ಯಾಸಾಗರ್‌ ಅವರ ಪ್ರತಿಮೆಗೆ ಟಿಎಂಸಿ ಕಾರ್ಯಕರ್ತರು ಹಾನಿ ಮಾಡಿದ್ದಾರೆ ಎಂದು ಫೋಟೊಸಹಿತ ಆರೋಪ ಮಾಡಿದ್ದಾರೆ.

‘ಕಾಲೇಜಿನ ಗೇಟುಗಳು ಮುಚ್ಚಿದ್ದವು, ಕೊಠಡಿಗಳು ಬಂದ್‌ ಆಗಿದ್ದವು...ಯಾರು ಬೀಗ ತೆರೆದರು, ಬಿಜೆಪಿ ಕಾರ್ಯಕರ್ತರು ಯಾರೂ ಕಾಲೇಜಿನೊಳಗೆ ಪ್ರವೇಶಿಸಲಿಲ್ಲ. ಸಿಆರ್‌ಪಿಎಫ್‌ ಇಲ್ಲದಿದ್ದರೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ನಾನು ಅದೃಷ್ಟ ಮಾಡಿದ್ದೆ’ ಎಂದು ಮಂಗಳವಾರ ರೋಡ್‌ ಶೋ ವೇಳೆ ನಡೆದ ಹಿಂಸಾಚಾರವನ್ನು ನೆನಪಿಸಿಕೊಂಡರು.

ಇನ್ನಷ್ಟು ಓದು...

ಟಿಎಂಸಿ–ಬಿಜೆಪಿ ನಡುವೆ ಕಚ್ಚಾಟ

 'ನನ್ನ ಚಿತ್ರ ರಚಿಸಿ ನಿಮಗಿಷ್ಟ ಬಂದಂತೆ ತಿರುಚಿ, ನಾನು ಎಫ್ಐಆರ್ ದಾಖಲಿಸಲ್ಲ':ಮೋದಿ

 ಮಮತಾ ಬ್ಯಾನರ್ಜಿ ಚಿತ್ರ ತಿರುಚಿದ್ದ ಪ್ರಕರಣ: ಕ್ಷಮೆ ಕೇಳಲ್ಲ ಎಂದ ಪ್ರಿಯಾಂಕಾ

Post Comments (+)