ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಕೋಟೆಯಲ್ಲಿ ರಾಜನಾಥ್‌ಗೆ ಗೆಲುವಿನ ವಿಶ್ವಾಸ

Last Updated 1 ಮೇ 2019, 19:30 IST
ಅಕ್ಷರ ಗಾತ್ರ

ಲಖನೌ:ಬಿಜೆಪಿಯ ಭದ್ರಕೋಟೆಯಾ ಗಿರುವ ಉತ್ತರ ಪ್ರದೇಶದ ಲಖನೌ ಲೋಕಸಭಾ ಕ್ಷೇತ್ರವು ಈ ಸಲವೂ ಬಿಜೆಪಿಯ ತೆಕ್ಕೆಯಲ್ಲೇ ಉಳಿಯುವ ಸಾಧ್ಯತೆ ಹೆಚ್ಚು.

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಈ ಕ್ಷೇತ್ರದಿಂದ ಎರಡನೇ ಬಾರಿ ಆಯ್ಕೆ ಬಯಸಿದ್ದಾರೆ. ಬೃಹತ್ ರೋಡ್‌ ಷೋ ಮೂಲಕ ಬಂದು ನಾಮಪತ್ರ ಸಲ್ಲಿಸಿದ ರಾಜನಾಥ್ ಅವರು ಈಗಾಗಲೇ ತಮ್ಮ ಬಲ ಪ್ರದರ್ಶಿಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ.

‘ಈ ಕ್ಷೇತ್ರವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಐದು ಸಲ ಪ್ರತಿನಿಧಿಸಿದ್ದರು. ಅದರ ಪ್ರಭಾವ ಈಗಲೂ ಇದ್ದಂತಿದೆ. ಅಲ್ಲದೆ ಮೋದಿ ಅಲೆಯೂ ಜೋರಾಗಿದೆ. ಸ್ವತಃರಾಜನಾಥ್ ಸಿಂಗ್ ಪ್ರಭಾವಿ ನಾಯಕ. ಹೀಗಾಗಿ ಗೆಲುವು ಅವರದ್ದೇ’ ಎಂದು ಬಿಜೆಪಿ ಕಾರ್ಯಕರ್ತರು ಲೆಕ್ಕ ಹಾಕುತ್ತಾರೆ.

ರಾಜನಾಥ್ ಸಿಂಗ್ ಅವರು ನಾಮಪತ್ರ ಸಲ್ಲಿಸಿದಾಗ ವಿರೋಧ ಪಕ್ಷಗಳಾಗಲೀ, ಮಹಾಮೈತ್ರಿ ಕೂಟ ವಾಗಲೀ ಈ ಕ್ಷೇತ್ರಕ್ಕೆ ತಮ್ಮ ಅಭ್ಯರ್ಥಿಯನ್ನು ಅಂತಿಮ ಗೊಳಿಸಿರಲಿಲ್ಲ. ನಂತರದ ದಿನಗಳಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟವು ನಟ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಿತು. ಪೂನಂ ಅವರು ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಸಹ ತನ್ನ ಅಭ್ಯರ್ಥಿಯನ್ನು ತಡವಾಗಿ ಘೋಷಿಸಿತು. ಲಖನೌನಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕಲ್ಕಿ ಧಾಮ್‌ನ ಮುಖ್ಯಸ್ಥ ಆಚಾರ್ಯ ಪ್ರಮೋದ್ ಕೃಷ್ಣಂ ಅವರನ್ನು ಕಾಂಗ್ರೆಸ್‌ ಕಣಕ್ಕೆ ಇಳಿಸಿದೆ.

ಕಾಂಗ್ರೆಸ್‌ನ ನಡೆ ಬಗ್ಗೆ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಕಾಂಗ್ರೆಸ್‌ ನಮ್ಮ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಿದ್ದರೆ, ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದಿತ್ತು’ ಎಂದು ಅವರು ಕಿಡಿಕಾರಿದ್ದರು.

ಈಗ ಬಿಜೆಪಿ ವಿರೋಧಿ ಮತಗಳು ಹಂಚಿಹೋಗಿವೆ ಎಂದು ಮಹಾಮೈತ್ರಿಕೂಟದ ನಾಯಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಿಜೆಪಿಯ ಮತಗಳನ್ನು ಒಡೆಯಲು ಧಾರ್ಮಿಕ ನಾಯಕನನ್ನು ಕಣಕ್ಕೆ ಇಳಿಸಲಾಗಿದೆ ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕರು ಹೇಳಿದ್ದಾರೆ.

ಬಿಜೆಪಿ ಭದ್ರಕೋಟೆಯಲ್ಲಿ ಯಾವ ತಂತ್ರಗಳು ಕೆಲಸ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಪೈಪೋಟಿಯ ಲೆಕ್ಕಾಚಾರಗಳು

* ಮೊದಲ ಲೋಕಸಭೆಯಿಂದಲೂ ಈ ಕ್ಷೇತ್ರವು 16 ಬಾರಿ ಚುನಾವಣೆ ಮತ್ತು 1 ಬಾರಿ ಉಪಚುನಾವಣೆ ಎದುರಿಸಿದೆ. ಇದರಲ್ಲಿ ಕಾಂಗ್ರೆಸ್ ಏಳು ಬಾರಿ ಮತ್ತು ಬಿಜೆಪಿ ಏಳು ಬಾರಿ ಜಯಗಳಿಸಿವೆ. ಆದರೆ ಬಿಜೆಪಿಯು ಈ ಹಿಂದಿನ ಏಳು ಚುನಾವಣೆಗಳಲ್ಲಿ ಭಾರಿ ಅಂತರದ ಗೆಲುವು ಸಾಧಿಸಿದೆ. ಒಮ್ಮೆ ಕಾಂಗ್ರೆಸ್‌ ಬಿಟ್ಟರೆ, ಉಳಿದ ಯಾವ ಪಕ್ಷಗಳೂ ಗೆಲುವಿನ ಹತ್ತಿರ ಸುಳಿದಿಲ್ಲ. ಹೀಗಾಗಿ ಈ ಬಾರಿಯೂ ಬಿಜೆಪಿ ಗೆಲ್ಲುವ ವಿಶ್ವಾಸದಲ್ಲಿದೆ

* 2014ರ ಚುನಾವಣೆಯಲ್ಲಿ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್‌ನ ರೀಟಾ ಬಹುಗುಣ ಜೋಷಿ ವಿರುದ್ದ 2.7 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಮತಗಳಲ್ಲಿ ಶೇ 54ರಷ್ಟನ್ನು ರಾಜನಾಥ್ ಪಡೆದಿದ್ದರು. ಹೀಗಾಗಿ ವಿರೋಧಿಗಳ ಎಲ್ಲಾ ಮತಗಳು ಒಟ್ಟುಗೂಡಿದರೂ ರಾಜನಾಥ್ ಅವರ ಸೋಲು ಅಸಾಧ್ಯವಾಗಿತ್ತು

* ಈ ಕ್ಷೇತ್ರದಲ್ಲಿ 2014ನ್ನು ಹೊರತುಪಡಿಸಿದರೆ ಬಹುತೇಕ ಎಲ್ಲಾ ಚುನಾವಣೆಗಳಲ್ಲೂ ಮತದಾನವು ಶೇ 25ರಿಂದ 40ರ ಆಸುಪಾಸಿನಲ್ಲಿದೆ. 2014ರಲ್ಲಿ ಮಾತ್ರ ಶೇ 50ರಷ್ಟನ್ನು ದಾಟಿತ್ತು. ಅದಕ್ಕೆ ಮೋದಿ ಅಲೆ ಕಾರಣ ಎಂದು ಬಿಜೆಪಿ ಹೇಳುತ್ತದೆ. ಅಂಥದ್ದೇ ಸಾಧನೆಯ ಪುನರಾವರ್ತನೆಯ ವಿಶ್ವಾಸದಲ್ಲಿ ಬಿಜೆಪಿ ಇದೆ

* ಆದರೆ ವಿರೋಧ ಪಕ್ಷಗಳು ಈ ಬಾರಿ ಪ್ರಭಾವಿ ನಾಯಕರನ್ನು ಬಿಜೆಪಿ ಅಭ್ಯರ್ಥಿ ವಿರುದ್ಧ ಕಣಕ್ಕೆ ಇಳಿಸಿವೆ. ಬಿಎಸ್‌ಪಿ ಮತ್ತು ಎಸ್‌ಪಿ ಮತಗಳು ಒಟ್ಟಾಗಿ ಎಸ್‌ಪಿ ಅಭ್ಯರ್ಥಿ ಪೂನಂ ಅವರಿಗೆ ಬೀಳಲಿವೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್‌ನ ಮತಗಳೂ ಈ ಅಭ್ಯರ್ಥಿಗೇ ಬಿದ್ದಿದ್ದರೆ ಬಿಜೆಪಿಗೆ ಪೈಪೋಟಿ ನೀಡಲು ಸಾಧ್ಯವಿತ್ತು ಎಂಬ ಲೆಕ್ಕಾಚಾರವೂ ಇದೆ

* ಕಾಂಗ್ರೆಸ್‌ನ ಅಭ್ಯರ್ಥಿಯು ಧಾರ್ಮಿಕ ನಾಯಕರಾಗಿರುವ ಕಾರಣ ಬಿಜೆಪಿಯ ಕೆಲವು ಮತಗಳು ಕಾಂಗ್ರೆಸ್‌ಗೆ ಬೀಳಲಿವೆ ಎಂದು ನಿರೀಕ್ಷಿಸಲಾಗಿದೆ. ಅದರ ಜತೆಯಲ್ಲೇ ವಿಪಕ್ಷಗಳ ಮತಗಳಲ್ಲಿ ಹಲವು ಕಾಂಗ್ರೆಸ್‌ಗೆ ಬೀಳಲಿವೆ. ಇದರಿಂದ ವಿಪಕ್ಷಗಳ ಹೋರಾಟ ದುರ್ಬಲವಾ ಗುತ್ತದೆ. ಆದರೆ ರಾಜನಾಥ್ ಅವರ ಗೆಲುವಿನ ಅಂತರ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಲಿದೆ ಎಂದು ತಜ್ಞರು
ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT