ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು: ಶಾಸಕರ ಹಾಜರುಪಡಿಸುವ ಪ್ರಸ್ತಾವ ತಿರಸ್ಕಾರ

ಶಾಸಕರು ವಿಧಾನಸಭೆಗೆ ಹೋಗಬಹುದು ಇಲ್ಲ ಬಿಡಬಹುದು; ಅವರನ್ನು ಕೂಡಿ ಹಾಕುವಂತಿಲ್ಲ: ಸುಪ್ರೀಂ ಕೋರ್ಟ್
Last Updated 18 ಮಾರ್ಚ್ 2020, 20:15 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು: ಮಧ್ಯಪ್ರದೇಶ ಕಾಂಗ್ರೆಸ್‌ನ 16 ಬಂಡಾಯ ಶಾಸಕರನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಹಾಜರುಪಡಿಸುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್‌ ಬುಧವಾರಸಾರಾಸಗಟಾಗಿ ತಿರಸ್ಕರಿ ಸಿದೆ. ಅಲ್ಲದೇ, ಶಾಸಕರು ವಿಧಾನಸಭೆಗೆ ಹೋಗಬಹುದು ಅಥವಾ ಹೋಗದೇ ಇರಬಹುದು. ಆದರೆ, ಅವರನ್ನು ಕೂಡಿಹಾಕುವಂತಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಮಧ್ಯಪ್ರದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪರ ಸುಪ್ರೀಂಕೋರ್ಟ್‌ ನಲ್ಲಿ ವಾದ ಮಂಡಿಸಿದ ವಕೀಲ ಮುಕುಲ್‌ ರೋಹಟಗಿ, ‘16 ಜನ ಬಂಡಾಯ ಶಾಸಕರನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಹಾಜರುಪಡಿಸಲು ಸಿದ್ಧ’ ಎಂದು ಹೇಳಿದಾಗ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹೇಮಂತ್‌ ಗುಪ್ತಾ ಅವರಿರುವ ಪೀಠ ಈ ಪ್ರಸ್ತಾವವನ್ನು ತಿರಸ್ಕರಿಸಿತು.

ಇನ್ನೊಂದೆಡೆ, ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು ಗುರುವಾರ ಬಂಡಾಯ ಶಾಸಕ ರನ್ನು ಭೇಟಿ ಮಾಡಿ, ಅವರೊಂದಿಗಿನ ಮಾತುಕತೆಯನ್ನು ವಿಡಿಯೊ ಚಿತ್ರೀಕರಣ ಮಾಡಬಹುದು ಎಂದೂ ವಕೀಲ ರೋಹಟಗಿ ಹೇಳಿದರು. ಈ ಪ್ರಸ್ತಾವ ವನ್ನೂ ತಿರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರ ಬೆಳಿಗ್ಗೆ 10.30ಕ್ಕೆ ಮುಂದೂಡಿತು.

ಸಿಂಗ್ ವಿರುದ್ಧ ದೂರು: (ಭೋಪಾಲ್‌ ವರದಿ): ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಹಿರಿಯ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಅವರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ 16 ಜನ ಬಂಡಾಯ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿ ಮಧ್ಯಪ್ರದೇಶ ಘಟಕ ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಬಂಡಾಯ ಶಾಸಕರನ್ನು ಭೇಟಿ ಮಾಡಲು ಪ್ರಯತ್ನಿಸಿದ ದಿಗ್ವಿಜಯ ಸಿಂಗ್‌ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಹಿರಿಯ ಮುಖಂಡ ಶಿವರಾಜ್‌ಸಿಂಗ್‌ ಚೌಹಾಣ್‌, ‘ಅವರು ಒಬ್ಬ ದೊಡ್ಡ ನಾಟಕಕಾರ’
ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಧರಣಿ (ಬೆಂಗಳೂರು): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ಸಿಂಗ್‌ ಮತ್ತು ಕಾಂಗ್ರೆಸ್‌ ಶಾಸಕರನ್ನು ಬಂಧಿಸಿ ರುವ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡದ ಕಾರಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು.

ಶೂನ್ಯವೇಳೆಯಲ್ಲಿ ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಅವರು ನೋಟಿಸ್‌ ನೀಡದೆ ಶಾಸಕರ ಬಂಧನದ ವಿಷಯ ಪ್ರಸ್ತಾಪಿಸಿದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಅಕ್ರಮ ಬಂಧನ: ಕಾಂಗ್ರೆಸ್ ಆರೋಪ

ಬೆಂಗಳೂರು: ‘ಕಮಲ್‌ನಾಥ್‌ ನೇತೃತ್ವದ ಸರ್ಕಾರ ಉರುಳಿಸಲು ಆರಂಭದಿಂದಲೂ ಪ್ರಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್‌ನ 22 ಶಾಸಕರನ್ನು ಬಲವಂತವಾಗಿ ಬೆಂಗಳೂರಿಗೆ ಕರೆತಂದು, ಅಕ್ರಮ ಬಂಧನದಲ್ಲಿಟ್ಟಿದೆ’ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಆರೋಪಿಸಿದರು.

ಕಾಂಗ್ರೆಸ್‌ ಬಂಡಾಯ ಶಾಸಕರಿರುವ ಯಲಹಂಕದ ರಮಾಡ ಹೊಟೇಲ್‌ಗೆ ಬುಧವಾರ ಬೆಂಬಲಿಗರ ಜತೆ ನುಗ್ಗಲು ಯತ್ನಿಸಿ ಬಂಧನಕ್ಕೊಳಗಾಗಿದ್ದ ದಿಗ್ವಿಜಯ್‌ಸಿಂಗ್‌ ಬಿಡುಗಡೆಯಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಮಲ್‌ನಾಥ್‌ ಪಾರದರ್ಶಕ ಆಡಳಿತ ಕೊಡುತ್ತಿದ್ದಾರೆ. ಗಣಿ ಮಾಫಿಯಾಗೆ ಕಡಿವಾಣ ಹಾಕಿದ್ದಾರೆ. ವ್ಯಾಪಂ ಹಗರಣ, ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಹಾಗೂ ಹನಿಟ್ರ್ಯಾಪ್‌ ‍ಕುರಿತು ಕಟ್ಟುನಿಟ್ಟಿನ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅವರು ದೂರಿದರು.

ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಸಿಕ್ಕಿದೆ. ಕರ್ನಾಟಕದಲ್ಲಿ ಶಾಸಕರನ್ನು ಖರೀದಿಸಿ ಅಧಿಕಾರ ಹಿಡಿಯಲಾಯಿತು. ಮಧ್ಯಪ್ರದೇಶದಲ್ಲಿ ಇದು ಪುನರಾವರ್ತನೆ ಆಗುತ್ತಿದೆ. ವಿಮಾನ ಬಾಡಿಗೆಗೆ ಪಡೆದು ಇಲ್ಲಿಗೆ ಶಾಸಕರನ್ನು ಕರೆತರಲಾಗಿದೆ. ಹೊಟೇಲ್‌ ಬುಕ್‌ ಮಾಡಲಾಗಿದೆ. ಇವೆಲ್ಲವನ್ನೂ ಮಾಡಿರುವುದು ಬಿಜೆಪಿ. ‘ಕುದುರೆ ವ್ಯಾಪಾರ’ ನಡೆಯುತ್ತಿದೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಎಂದು ಅವರು ಕೇಳಿದರು.

ಕಾಂಗ್ರೆಸ್‌ ಶಾಸಕರಿರುವ ಹೋಟೆಲ್‌ಗೆ ಪ್ರವೇಶಿಸಲು ತಮಗೆ ಬಿಡದ ರಾಜ್ಯ ಪೊಲೀಸರ ಕ್ರಮಕ್ಕೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಸ್ಥಳಕ್ಕೆ ಭೇಟಿ ನಿರಾಕರಿಸಿದ್ದು ತಪ್ಪು. ಪೊಲೀಸರ ನಡೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.

ಹೈಕೋರ್ಟ್‌ ನಿರಾಕರಣೆ

ರೆಸಾರ್ಟ್‌ನಲ್ಲಿ ತಂಗಿರುವ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಗೆ ಅನುಮತಿ ‌ನೀಡಲು ಹೈಕೋರ್ಟ್ ನಿರಾಕರಿಸಿದೆ.‌‌

‘ಶಾಸಕರನ್ನು ಮಾಡಲು ತೆರಳಿದಾಗ ಪೊಲೀಸರು ಸಿಂಗ್ ಅವರನ್ನು ಬಂಧಿಸಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು’ ಎಂಬ ಅರ್ಜಿದಾರರ ಆರೋಪವನ್ನು ರಾಜ್ಯ ಸರ್ಕಾರ ನಿರಾಕರಿಸಿದೆ. ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಇದೇ 26ಕ್ಕೆ ವಿಚಾರಣೆ ಮುಂದೂಡಿದೆ.

ಸಿಂಗ್‌ ಬಂಧನ, ಬಿಡುಗಡೆ

ಮಧ್ಯಪ್ರದೇಶ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಹರ ಸಾಹಸ ಮಾಡುತ್ತಿದ್ದು, ಬಂಡಾಯ ಶಾಸಕರ ಭೇಟಿಗೆ ರಮಾಡ ಹೊಟೇಲ್‌ಗೆ ಬುಧವಾರ ನುಗ್ಗಲು ಯತ್ನಿಸಿದ ಹಿರಿಯ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಬಂಧಿಸಿ, ಆನಂತರ ಬಿಡುಗಡೆ ಮಾಡಿದರು.

ಬೆಳಿಗ್ಗೆ 5.30ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ದಿಗ್ವಿಜಯ್‌ ಸಿಂಗ್‌ ಹಾಗೂ ಮಧ್ಯ ಪ್ರದೇಶ ಸರ್ಕಾರದ ಕೆಲವು ಸಚಿವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆಗೂಡಿ ನೇರವಾಗಿ ಬಂಡಾಯ ಶಾಸಕರು ತಂಗಿರುವ ರಮಾಡ ಹೊಟೇಲ್‌ಗೆ ತೆರಳಿದರು. ಆದರೆ, ದಾರಿಯಲ್ಲೇ ಪೊಲೀಸರು ತಡೆದರು. ನೂರಾರು ಕಾರ್ಯಕರ್ತರು ಅವರ ಜತೆಗೂಡಿದ್ದರಿಂದಾಗಿ ಭಾರಿ ನೂಕುನುಗ್ಗಲು ಉಂಟಾಯಿತು.

ಪೊಲೀಸರ ಕ್ರಮ ವಿರೋಧಿಸಿ ದಿಗ್ವಿಜಯ್‌ ಸಿಂಗ್‌ ತಮ್ಮ ಬೆಂಬಲಿಗರ ಜತೆ ಪ್ರತಿಭಟನೆ ಆರಂಭಿಸಿದರು. ರಸ್ತೆ ಮೇಲೆ ಕುಳಿತ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು. ಅಮೃತಹಳ್ಳಿ ಪೊಲೀಸ್‌ ಠಾಣೆಯಲ್ಲಿ, ಸಿಂಗ್‌ ಅವರನ್ನು ಕೆಲಹೊತ್ತು ಕೂರಿಸಿದ್ದರು. ಈ ಸಂದರ್ಭದಲ್ಲಿ ಶಿವಕುಮಾರ್‌, ಕೃಷ್ಣ ಬೈರೇಗೌಡ, ರಿಜ್ವಾನ್‌ ಅರ್ಷದ್‌, ಹ್ಯಾರಿಸ್‌ ಮತ್ತಿತರರು ಇದ್ದರು.

ಪೊಲೀಸರು ಬಿಜೆಪಿ ಕಾರ್ಯಕರ್ತರಲ್ಲ: ಡಿಕೆಶಿ

‘ಮಧ್ಯಪ್ರದೇಶ ಶಾಸಕರು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಕಾರಣವಿಲ್ಲದೆ ನಮಗೆ ಪ್ರವೇಶ ನಿರಾಕರಿಸಲಾಗಿದೆ. ಪೊಲೀಸರು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕೆ ಹೊರತು ಬಿಜೆಪಿ ಕಾರ್ಯಕರ್ತರಂತೆ ಅಲ್ಲ’ ಎಂದು ಡಿಕೆ ಶಿವಕುಮಾರ್ ಕಿವಿಮಾತು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸೇರಿದ್ದ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಬಳಿಕ ಮಾತನಾಡಿದ ಶಿವಕುಮಾರ್, ‘ರಾಜ್ಯಸಭಾ ಚುನಾವಣೆ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಆ ರಾಜ್ಯದ ಶಾಸಕರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದಾರೆ. ಶಾಸಕರ ಬಳಿ ಮತ ಕೇಳಲು ಅವರಿಗೆ ಅಧಿಕಾರವಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಆದರೆ ಪೊಲೀಸರು ದಿಗ್ವಿಜಯ್ ಸಿಂಗ್ ಅವರನ್ನು ತಡೆದು ಅವರ ಹಕ್ಕನ್ನು ಕಸಿದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ, ಈಶ್ವರ ಖಂಡ್ರೆ, ದಿನೇಶ್‌ ಗುಂಡೂರಾವ್‌, ಎಚ್‌.ಕೆ. ಪಾಟೀಲ, ಆರ್.ವಿ. ದೇಶಪಾಂಡೆ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT