ಬುಧವಾರ, ಜೂನ್ 23, 2021
30 °C
ಶಿವಸೇನಾಕ್ಕೆ ಬೆಂಬಲ ನೀಡಲು ಎನ್‌ಸಿಪಿ ನಿರಾಕರಣೆ; ಬಿಜೆಪಿಯಲ್ಲಿ ಉತ್ಸಾಹ

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ: ಇಂದು ಹಕ್ಕು ಮಂಡನೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನಾಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಬುಧವಾರ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಶಿವಸೇನಾಕ್ಕೆ ಬಿಜೆಪಿಯ ಜತೆ ಸೇರುವುದಲ್ಲದೆ ಬೇರೆ ಆಯ್ಕೆಯೇ ಇಲ್ಲದಂತಾಗಿದೆ.

ಎನ್‌ಸಿಪಿಯ ನಿಲುವು ಸ್ಪಷ್ಟವಾಗುತ್ತಿದ್ದಂತೆ, ಬಿಜೆಪಿಯಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ರಾಜ್ಯಪಾಲರನ್ನು ಗುರುವಾರ ಭೇಟಿಮಾಡಲು ಬಿಜೆಪಿ ಮುಖಂಡರು ಸಿದ್ಧತೆ ನಡೆಸಿದ್ದು, ಸರ್ಕಾರ ರಚಿಸಲು ಹಕ್ಕುಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ ಪಾಟೀಲ್‌ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಫಡಣವೀಸ್‌ ಅವರು ನೀಡಿರುವ ಸಂದೇಶವನ್ನು ರಾಜ್ಯಪಾಲರಿಗೆ ತಲುಪಿಸಲಿದೆ. ಭೇಟಿಯ ಫಲಿತಾಂಶವನ್ನು ಆನಂತರ ತಿಳಿಸಲಾಗುವುದು’ ಎಂದು ಬಿಜೆಪಿ ಮುಖಂಡ ಸುಧೀರ್‌ ಮುನಗಂಟಿ ವಾರ್‌ ಹೇಳಿದ್ದಾರೆ. ಅವರು ಮುಖ್ಯ ಮಂತ್ರಿಯ ಅಧಿಕೃತ ನಿವಾಸದ ಹೊರಗೆ ಮಾಧ್ಯಮದವರ ಜೊತೆ ಮಾತನಾ ಡಿದರು. ‘ಚಂದ್ರಕಾಂತ ಪಾಟೀಲ್‌ ಅವರು ಮುಂದಿನ ಸಂಪುಟದಲ್ಲಿ ಸೇರಲಿದ್ದಾರೆ. ಒಬ್ಬ ವ್ಯಕ್ತಿಗೆ ಒಂದು ಹುದ್ದೆ ನೀತಿಯನ್ನು ಬಿಜೆಪಿ ಅನುಸರಿಸಿದ್ದರಿಂದ ಡಿ.31ರೊಳಗೆ ಪಕ್ಷದ ರಾಜ್ಯಘಟಕಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು’ ಎಂದು ಮುನಗಂಟಿವಾರ್‌ ತಿಳಿಸಿದರು.

ಪವಾರ್‌ ನಿಲುವಿಗೆ ಸ್ವಾಗತ: ‘ಶರದ್‌ ಪವಾರ್‌ ಅವರ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದೆ. ‘ಪವಾರ್‌ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಎಲ್ಲಾ ರೀತಿಯ ‘ಹುಲಿ’ಗಳಿಗೂ ಬಿಜೆಪಿ ರಕ್ಷಣೆ ನೀಡುವುದು. ಈ ವಿಚಾರದಲ್ಲಿ ಹಟವಾದಿ ಧೋರಣೆ ತಳೆದದ್ದು ಯಾರೆಂಬುದು ಸಮಯ ಬಂದಾಗ ತಿಳಿಯಲಿದೆ’ ಎಂದು ಮುನಗಂಟಿವಾರ್‌ ಹೇಳಿದರು.

‘ವಿರೋಧಪಕ್ಷದಲ್ಲಿ ಕೂರುತ್ತೇವೆ’
ಶಿವಸೇನಾ ಮುಖಂಡ ಸಂಜಯ್‌ ರಾವುತ್‌ ಅವರು ಬುಧವಾರ ಶರದ್‌ ಪವಾರ್‌ ಅವರನ್ನ ಭೇಟಿಮಾಡಲು ಹೋದಾಗ, ರಾಜ್ಯದಲ್ಲಿ ಶಿವಸೇನಾ– ಎನ್‌ಸಿಪಿ ಸರ್ಕಾರ ರಚನೆಯಾಗುವ ಸಾಧ್ಯತೆ ಇದೆ ಎಂದು ಭಾವಿಸಲಾಗಿತ್ತು. ಆದರೆ ಸ್ವಲ್ಪವೆ ಸಮಯದ ಬಳಿಕ ಪವಾರ್‌ ಅವರು ಮಾಧ್ಯಮಗೋಷ್ಠಿ ನಡೆಸಿ ಈ ಸಾಧ್ಯತೆಯನ್ನು ತಳ್ಳಿಹಾಕಿದರು.

‘ರಾಜ್ಯದಲ್ಲಿ ಬಿಜೆಪಿ– ಶಿವಸೇನಾ ಸರ್ಕಾರವೇ ರಚನೆಯಾಗಬೇಕು. ನಾವು ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಲಸಮಾಡುತ್ತೇವೆ’ ಎಂದು ಹೇಳಿದರು. ‘ರಾಜ್ಯದಲ್ಲಿ 25 ವರ್ಷಗಳಿಂದ ಶಿವಸೇನಾ– ಬಿಜೆಪಿ ಮೈತ್ರಿ ಇದೆ. ಇಂದಲ್ಲ ನಾಳೆ ಅವರು ಮತ್ತೆ ಒಂದಾಗಿಯೇ ಆಗುತ್ತಾರೆ. ನಮ್ಮಲ್ಲಿ ಸಂಖ್ಯಾಬಲ ಇದ್ದಿದ್ದರೆ, ಸರ್ಕಾರ ರಚಿಸಲು ನಾವು ಇಷ್ಟು ವಿಳಂಬ ಮಾಡುತ್ತಿರಲಿಲ್ಲ. ಕಾಂಗ್ರೆಸ್‌– ಎನ್‌ಸಿಪಿ ಮೈತ್ರಿಗೆ ನೂರಕ್ಕಿಂತ ಕಡಿಮೆ ಸ್ಥಾನಗಳು ಲಭಿಸಿವೆ. ಆದ್ದರಿಂದ ನಾವು ವಿರೋಧಪಕ್ಷವಾಗಿ ಕೆಲಸ ಮಾಡುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದರು.

*
ಬಿಜೆಪಿ– ಶಿವಸೇನಾ ಮೈತ್ರಿಗೆ ಜನಬೆಂಬಲ ಲಭಿಸಿದೆ. ಆದಷ್ಟು ಬೇಗ ಅವರು ಸರ್ಕಾರ ರಚಿಸಬೇಕು. ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಲು ಅವಕಾಶ ನೀಡಬಾರದು.
-ಶರದ್‌ ಪವಾರ್‌, ಎನ್‌ಸಿಪಿ ಮುಖ್ಯಸ್ಥ

*
ಪವಾರ್‌ ಅಭಿಪ್ರಾಯ ಸರಿಯಾಗಿದೆ. 105 ಸ್ಥಾನಗಳನ್ನು ಪಡೆದ ಪಕ್ಷವೇ ರಾಜ್ಯದಲ್ಲಿ ಸರ್ಕಾರ ರಚಿಸಬೇಕು
-ಸಂಜಯ್‌ ರಾವುತ್‌, ಶಿವಸೇನಾ ಮುಖಂಡ

*
ಫಡಣವೀಸ್‌ ನಾಯಕತ್ವವನ್ನು ಒಪ್ಪಿ, ಬಿಜೆಪಿ ಜೊತೆ ಕೈಜೋಡಿಸುವುದನ್ನು ಬಿಟ್ಟು ಬೇರೆ ಆಯ್ಕೆಯೇ ಶಿವಸೇನಾಕ್ಕೆ ಉಳಿದಿಲ್ಲ.
-ರಾಮದಾಸ ಆಠವಲೆ, ಆರ್‌ಪಿಐ ನಾಯಕ, ಕೇಂದ್ರದ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು