ಸೋಮವಾರ, ಜುಲೈ 13, 2020
29 °C

ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕೇರಳದ ನೆರವು ಕೋರಿದ ಮಹಾರಾಷ್ಟ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಕೊರೊನಾ ವೈರಸ್‌ ದಾಳಿಯಿಂದಾಗಿ ಜರ್ಜರಿತಗೊಂಡಿರುವ ಮಹಾರಾಷ್ಟ್ರ ಪಿಡುಗಿನ ವಿರುದ್ಧ ಹೋರಾಡಲು ಕೇರಳ ನೆರವನ್ನು ಔಪಚಾರಿಕವಾಗಿ ಕೋರಿದೆ. 

ಕೊರೊನಾ ವೈರಸ್‌ ನಿಯಂತ್ರಣಾ ಕ್ರಮಗಳ ಕುರಿತು ಮಹಾರಾಷ್ಟ್ರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್ ತೋಪೆ ಅವರು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಅದಾದ ಮರುದಿನವೇ ಮಹಾರಾಷ್ಟ್ರ ಸರ್ಕಾರ ವೈದ್ಯರು ಮತ್ತು ದಾದಿಯರ ನೆರವು ಕೋರಿ ಕೇರಳ ಸರ್ಕಾರಕ್ಕೆ ಪತ್ರ ಬರೆದಿದೆ.  

ಮಹಾರಾಷ್ಟ್ರದಲ್ಲಿ ಕೋವಿಡ್‌–19 ನೋಡಲ್ ಅಧಿಕಾರಿಯಾಗಿರುವ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆ ನಿರ್ದೇಶಕ ಡಾ.ಟಿ.ಪಿ.ಲಹಾನೆ ಅವರು ನೆರವು ಕೋರಿ ಶೈಲಾಜಾ ಅವರಿಗೆ ಪತ್ರ ರವಾನಿಸಿದ್ದಾರೆ. 

ಭವಿಷ್ಯದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ. ಅಲ್ಲಿ ಕೋವಿಡ್‌ ವಿರುದ್ಧ ಹೋರಾಡಲು 50 ತಜ್ಞ ವೈದ್ಯರು ಮತ್ತು ದಾದಿಯರನ್ನು ಕಳುಹಿಸುವಂತೆ ಕೇರಳ ಸರ್ಕಾರವನ್ನು ಕೋರಲಾಗಿದೆ ಎಂದು ಡಾ.ಲಹಾನೆ ತಿಳಿಸಿದ್ದಾರೆ. 

ಎಂಬಿಬಿಎಸ್ ವೈದ್ಯರಿಗೆ ತಿಂಗಳಿಗೆ ₹80,000  ಮತ್ತು ಎಂಡಿ / ಎಂಎಸ್ ತಜ್ಞ ವೈದ್ಯರಿಗೆ ತಿಂಗಳಿಗೆ ₹2 ಲಕ್ಷ  ಪಾವತಿಸಲು ರಾಜ್ಯವು ಮುಂದಾಗಿದೆ, ತರಬೇತಿ ಪಡೆದ ಶುಶ್ರೂಷಕ ಸಿಬ್ಬಂದಿಗೆ ತಿಂಗಳಿಗೆ ₹30,000  ನೀಡುವುದಾಗಿ ಸರ್ಕಾರ ಹೇಳಿದೆ. 

ಈ ವೈದ್ಯಕೀಯ ಸಿಬ್ಬಂದಿಗೆ ಮಹಾರಾಷ್ಟ್ರ ಸರ್ಕಾರ ವಸತಿ, ಊಟ, ಅಗತ್ಯ ಔಷಧ. ವೈಯಕ್ತಿಕ ರಕ್ಷಣಾ ಕಿಟ್‌ಗಳನ್ನು ಪೂರೈಸಲಿದೆ. 

ಮುಂದೆ ಎದುರಾಗಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಮುಂಬೈ ನಗರದ ಮಹಾಲಕ್ಷ್ಮಿ ರೇಸ್ ಕೋರ್ಸ್‌ನಲ್ಲಿ 600 ಹಾಸಿಗೆಗಳ ಕೋವಿಡ್‌ ಆರೋಗ್ಯ ಕೇಂದ್ರವನ್ನು ಸ್ಥಾಪಿಪಿಸುತ್ತಿದೆ. ಇದರಲ್ಲಿ 125 ಹಾಸಿಗೆಗಳ ಐಸಿಯು ಕೂಡ ಇರಲಿದೆ. ಇಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ನಿಯೋಜಿಸಲಾಗಿದೆ. ಆದರೆ, ಇನ್ನೂ ಹೆಚ್ಚಿನ ವೈದ್ಯರು ಸಿಬ್ಬಂದಿಯ ಅಗತ್ಯವಿದೆ,’ ಎಂದು ಮಹಾರಾಷ್ಟ್ರ ಸರ್ಕಾರದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು