ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಸಿಂಹಸ್ವಪ್ನ ಆಗಿದ್ದ ಸೇನಾಧಿಕಾರಿ ಅಶುತೋಷ್‌

13ನೇ ಯತ್ನದಲ್ಲಿ ಸೈನ್ಯ ಸೇರಿ ಮೊದಲ ಯತ್ನದಲ್ಲೇ ಡಿಎಸ್‌ಎಸ್‌ಸಿ ಪರೀಕ್ಷೆ ಪಾಸಾಗಿದ್ದ– ಮೇಜರ್‌ ಹಿರೇಮಠ ನೆನಪು
Last Updated 4 ಮೇ 2020, 21:19 IST
ಅಕ್ಷರ ಗಾತ್ರ

ಬೆಂಗಳೂರು: ‘ಚೆನ್ನೈನಲ್ಲಿರುವ ಸೇನಾಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಸಹಪಾಠಿಯಾಗಿದ್ದ ಕರ್ನಲ್‌ ಅಶುತೋಷ್‌ ಶರ್ಮಾ, ತಾನೇ ಮುಂಚೂಣಿಯಲ್ಲಿ ನಿಂತು ಉಗ್ರರನ್ನು ಹೊಡೆಯಬೇಕೆಂಬ ಛಲ ಹೊಂದಿದ್ದ ಸೇನಾಧಿಕಾರಿ. ಸ್ಟಾಫ್‌ ಸೆಲೆಕ್ಷನ್‌ ಬೋರ್ಡ್‌ (ಎಸ್‌ಎಸ್‌ಬಿ) ಪರೀಕ್ಷೆಯನ್ನು 13ನೇ ಯತ್ನದಲ್ಲಿ ಪಾಸಾಗಿ ಸೇನೆಗೆ ಆಯ್ಕೆಯಾಗಿದ್ದ.ಆದರೆ, ಹಿರಿಯ ಅಧಿಕಾರಿಗಳಿಗೆ ತರಬೇತಿ ನೀಡುವ ಪ್ರತಿಷ್ಠಿತ ಡಿಫೆನ್ಸ್‌ ಸರ್ವೀಸಸ್ ಸ್ಟಾಫ್‌ ಕಾಲೇಜು (ಡಿಎಸ್‌ಎಸ್‌ಸಿ) ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ತೇರ್ಗಡೆಯಾಗಿದ್ದ’

– ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆ ವೇಳೆ ಹುತಾತ್ಮರಾದ ಅಶುತೋಷ್‌ ಶರ್ಮಾ ಅವರ ಒಡನಾಡಿಯಾಗಿದ್ದ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಅವರು (ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ) ಶರ್ಮ ಅವರನ್ನು ನೆನಪಿಸಿಕೊಂಡಿದ್ದು ಹೀಗೆ.

‘ನಾನು ಮತ್ತು ಅವನು ಅಕ್ಟೋಬರ್‌ 2000ದಿಂದ ಸೆಪ್ಟೆಂಬರ್ 2001ರವರೆಗೆ ಜೊತೆಯಲ್ಲಿ ಸೇನಾಧಿಕಾರಿ ತರಬೇತಿ ಪಡೆದಿದ್ದೆವು. ಸೇನೆಯಲ್ಲಿ ಕೆಲಸ ಮಾಡಬೇಕೆಂಬ ತುಡಿತದ ಬಗ್ಗೆ ಅವನು ಹೇಳಿಕೊಳ್ಳುತ್ತಿದ್ದ.ಭಾರತೀಯ ಸೈನ್ಯದ ಗ್ರೆನೆಡಿಯರ್ ರೆಜಿಮೆಂಟಿನ ಹೆಮ್ಮೆಯ ಸೈನ್ಯಾಧಿಕಾರಿಯಾಗಿದ್ದ ಅವನು ಮೊನ್ನೆಯವರೆಗೂ ಫೇಸ್‌ಬುಕ್‌ ಖಾತೆಯಲ್ಲಿ ನನ್ನ ಜೊತೆ ಸಂಪರ್ಕದಲ್ಲಿದ್ದ’ ಎಂದೂ ಹಿರೇಮಠ ಹೇಳಿದರು.

‘ಬುಲಂದ್‌ಶಹರ್‌ನವನಾಗಿದ್ದ ಶರ್ಮಾ, ಪತ್ನಿ ಪಲ್ಲವಿ ಮತ್ತು 12 ವರ್ಷದ ವಯಸ್ಸಿನ ಮಗಳು ತಮನ್ನಾಳ ಜೊತೆ ಜೈಪುರದಲ್ಲಿ ನೆಲೆಸಿದ್ದ. ತರಬೇತಿ ವೇಳೆ ಡ್ರಿಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ. ಸೈನ್ಯದ 19 ಗ್ರೆನೆಡಿಯರ್‌ ರೆಜಿಮೆಂಟಿನ ಲೆಫ್ಟಿನೆಂಟ್‌ ಆಗಿದ್ದ. ಅತ್ಯಂತ ಸಂಭಾವಿತ, ಸ್ನೇಹಜೀವಿಯಾಗಿದ್ದ. ಧೈರ್ಯ– ಸಾಹಸ ಪ್ರವೃತ್ತಿ ಅವನ ರಕ್ತದಲ್ಲೇ ಇತ್ತು. ಸಾಹಸ, ಶೌರ್ಯಗಳನ್ನು ಮೈಗೂಡಿಸಿಕೊಳ್ಳುತ್ತಲೇ ತನ್ನ ಜೀವದ ಹಂಗಿಲ್ಲದ ಸೆಣಸಾಟದಿಂದಾಗಿ ಕಾಶ್ಮೀರದಲ್ಲಿ ಉಗ್ರರಿಗೆ ಸಿಂಹಸ್ವಪ್ನವಾಗಿದ್ದ. ಎರಡು ಬಾರಿ ಸೇನೆಯ ಶೌರ್ಯ ಪದಕ ಪುರಸ್ಕೃತನಾಗಿದ್ದ. ಎರಡನೇ ಪದಕ ಇದೇ ಫೆಬ್ರುವರಿಯಲ್ಲಿ ಪಡೆದಿದ್ದ’ ಎಂದೂ ನೆನಪಿಸಿಕೊಂಡರು.

‘ಅಶುತೋಷ್‌ ಎರಡು ವರ್ಷಗಳಿಂದ ರಾಷ್ಟ್ರೀಯ ರೈಫಲ್ಸ್‌ನ 21ನೇ ತುಕಡಿಗೆ ಕಮಾಂಡಿಂಗ್ ಆಫೀಸರ್ ಆಗಿದ್ದ. ಸದ್ಯದಲ್ಲೇ ಹುದ್ದೆ ಬದಲಾಗುವ ನಿರೀಕ್ಷೆಯಲ್ಲಿದ್ದ. ಅಷ್ಟರಲ್ಲಿ ಪ್ರಾಣ ತ್ಯಾಗ ಮಾಡಿದ್ದಾನೆ‘ ಎಂದು ಹಿರೇಮಠ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT